ಬ್ರಾಹ್ಮಣ ಸಮುದಾಯದ ಅವಹೇಳನ: ನ.21 ರಂದು ಬೃಹತ್ ಪ್ರತಿಭಟನಾ ಮೆರವಣಿಗೆ

ಹೊಸದಿಗಂತ ವರದಿ,ಮೈಸೂರು:

ಬ್ರಾಹ್ಮಣ ಸಮುದಾಯವನ್ನು ಪ್ರಗತಿಪರ ಚಿಂತಕ ಪ.ಮಲ್ಲೇಶ್‌ನಂತಹವರು ಪದೇ ಪದೇ ಅವಹೇಳನ ಮಾಡುತ್ತಿರುವುದಕ್ಕೆ ರೊಚ್ಚಿಗೆದ್ದಿರುವ ಬ್ರಾಹ್ಮಣ ಸಮುದಾಯ, ನ.21 ರಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ಶಕ್ತಿ ಪ್ರದರ್ಶನ ನಡೆಸಲು ತೀರ್ಮಾನಿಸಿದೆ

ಈ ಕುರಿತು ಶನಿವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬ್ರಾಹ್ಮಣ ಸಮುದಾಯದ ಪ್ರಭಾವಿ ಮುಖಂಡರಾದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್,
ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣ ಸಮುದಾಯವನ್ನು ವಿನಾಕಾರಣ ದೋಷಿಸುವ ಹಲವಾರು ಪ್ರಕರಣಗಳು ಕಂಡುಬರುತ್ತಿದೆ. ಅದಕ್ಕೆ ಹೊಸದಾದ ಸೇರ್ಪಡೆ ಎಂದರೆ ಇತ್ತೀಚಿಗೆ ಪ.ಮಲ್ಲೇಶ್ ಎನ್ನುವವರು ಬ್ರಾಹ್ಮಣ ಜನಾಂಗದ ಕುರಿತು ನೀಡಿರುವ ಆಕ್ಷೇಪಣಾರ್ಹ ಹೇಳಿಕೆಯಾಗಿದೆ ಎಂದರು.

ಬ್ರಾಹ್ಮಣ ಜನಾಂಗ ಇಂದು ಅಲ್ಪಸಂಖ್ಯಾತ ಸಮುದಾಯವಾಗಿದೆ, ನಮ್ಮ ರಾಜ್ಯದ, ದೇಶದ ಜನಸಂಖ್ಯೆಯಲ್ಲಿ ಶೇಕಡ 3ರಷ್ಟು ಮಾತ್ರ ಬ್ರಾಹ್ಮಣ ಜನಾಂಗವಿದೆ. ಬ್ರಾಹ್ಮಣ ಸಮುದಾಯ ಸರ್ವೆ ಜನಾ: ಸುಖಿನೋ ಭವಂತು ಎಂಬ ಧ್ಯೇಯ ವ್ಯಾಖ್ಯದಂತೆ ಜೀವನ ನಡೆಸುತ್ತಿದ್ದಾರೆ. ಬ್ರಾಹ್ಮಣ ಸಮುದಾಯ ಎಂದಿಗೂ ಸಮಾಜ ಒಡೆಯುವ ಕೆಲಸ ಮಾಡಿಲ್ಲ, ಮಾಡುವುದು ಇಲ್ಲ, ಬ್ರಾಹ್ಮಣ ಸಮುದಾಯದ ಉದ್ದೇಶ ಸದೃಢ ಸಮಾಜದ ನಿರ್ಮಾಣವೇ ಆಗಿದೆ ಎಂದು ಸ್ಪಷ್ಟಪಡಿಸಿದರು.

ಬ್ರಾಹ್ಮಣ ಸಮುದಾಯ ಎಂದಿಗೂ ಇತರೆ ಜನಾಂಗದವರನ್ನು ದೂಷಣೆ ಮಾಡಿಲ್ಲ , ಹೀಗಿದ್ದರೂ ಆಗಾಗ್ಗೆ ನಮ್ಮ ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಲಾಗುತ್ತಿದ್ದು, ಇದನ್ನು ಈವರೆವೆಗೆ ಬ್ರಾಹ್ಮಣ ಸಮುದಾಯ ಸಹಿಸಿಕೊಂಡು ಬಂದಿದೆ. ಇದರ ಹಿನ್ನೆಲೆ ಎಂದರೆ ನಾವು ಪ್ರತಿಕ್ರಿಯೆ ನೀಡಿ, ಸಾಮಾಜಿಕ ಅಸಮೋತೋಲನ ಉಂಟುಮಾಡಬಾರದು ಎಂಬುದಾಗಿತ್ತು. ಆದರೆ, ಅನಾವಶ್ಯಕವಾಗಿ ಬ್ರಾಹ್ಮಣ ಸಮುದಾಯವನ್ನು ಹಿಯಾಳಿಸುತ್ತಿರುವುದನ್ನು ಇನ್ನು ಸಹಿಸಬಾರದು, ಹಾಗೂ ಇದನ್ನು ಖಂಡಿಸಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ. ಇತ್ತೀಚಿಗೆ ಪ.ಮಲ್ಲೇಶ್ ನೀಡಿರುವ ಹೇಳಿಕೆಯನ್ನು ಖಂಡಿಸಿ ಹಾಗೂ ಇನ್ನು ಮುಂದೆ ಯಾರು ಈ ರೀತಿಯ ಹೇಳಿಕೆ ನೀಡಬಾರದು ಎಂದು ಆಗ್ರಹಿಸಿ, ನವಂಬರ್ ಸೋಮವಾರ 21 ರಂದು ಬ್ರಾಹ್ಮಣ ಸಮುದಾಯವು ಪ್ರತಿಭಟನಾ ಮೆರೆವಣಿಗೆ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಅಂದು ಬೆಳಗ್ಗೆ 10:30ಕ್ಕೆ ಮೈಸೂರಿನ ಶಂಕರ ಮಠದ ವಿದ್ಯಾಶಂಕರ ಕಲ್ಯಾಣ ಮಂಟಪ (ಗನ್ ಹೌಸ್) ಮುಂಭಾಗದಿoದ ಆರಂಭಗೊಳ್ಳುವ ಪ್ರತಿಭಟನಾ ಮೆರವಣಿಗೆಯು, ನಗರದ ಪ್ರಮುಖ ರಸ್ತೆಗಳ ಮೂಲಕ ಸಾಗಿ ಜಿಲ್ಲಾಧಿಕಾರಿಗಳ ಕಛೇರಿಗೆ ತಲುಪಲಿದೆ. ಅಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಈ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿ ಈ ರೀತಿ ಹೇಳಿಕೆ ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗೂ ಮುಂದಿನ ದಿನದಲ್ಲಿ ಇಂತಹ ಘಟನೆ ನಡೆಯದಂತೆ ಶಾಸನ ಮಾಡುವಂತೆ ಆಗ್ರಹಿಸಲಾಗುವುದು ಎಂದು ಹೇಳಿದರು.

ಬ್ರಾಹ್ಮಣ ಸಮುದಾಯ ಅಶಕ್ತರಲ್ಲ, ತಮ್ಮ ಮೇಲಾಗುವ ಆಕ್ರಮಣವನ್ನು ಬೃಹತ್ ಪ್ರತಿಭಟನಾ ಮೆರವಣಿಗೆಯ ಮೂಲಕ ಪ್ರತಿಭಟಿಸಿ ನಮ್ಮ ಶಕ್ತಿಯನ್ನು ಪ್ರದೇಶಿಸಲಾಗುವುದು. ಇದಕ್ಕೆ ಸಮಸ್ತ ಹಿಂದೂ ಸಮಾಜ ಸ್ಪಂದಿಸಿ, ನಮ್ಮ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕಾಗಿ ಕೋರುತ್ತೇವೆ ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಆದರ್ಶ ಸೇವಾ ಸಂಘದ ಅಧ್ಯಕ್ಷ ಜಿ ಆರ್.ನಾಗರಾಜ್, ನಗರಪಾಲಿಕಾ ಸದಸ್ಯ ಮ. ವಿ ರಾಮಪ್ರಸಾದ್, ವಿಪ್ರಪರಸ್ಪರ ಸಹಾಯ ಸಮಿತಿಯ ಸುಂದರೇಶನ್, ವಿಪ್ರ ಮಹಿಳಾ ಸಂಗಮ ಅಧ್ಯಕ್ಷೆ ಡಾ. ಲಕ್ಷಿ÷್ಮ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್ ಮತ್ತಿತರರು ಉಪಸ್ಥಿತರಿದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!