ಮಡಿಕೇರಿ ಜಿಲ್ಲಾಡಳಿತ ಭವನದಲ್ಲಿ ವಾತ್ಸಲ್ಯ ಶಿಶು ಪಾಲನ ಕೇಂದ್ರ ಉದ್ಘಾಟನೆ

ಹೊಸದಿಗಂತ ವರದಿ,ಮಡಿಕೇರಿ:

ಮಕ್ಕಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಿ, ಬೇರೆಯವರ ಮಕ್ಕಳನ್ನು ತಮ್ಮ ಮಕ್ಕಳಂತೆ ಪೋಷಿಸಿ ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಶಿಶು ಅಭಿವೃದ್ಧಿ ಯೋಜನೆ ಹಾಗೂ ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹೊಸದಾಗಿ ಉದ್ಘಾಟನೆಗೊಂಡ ವಾತ್ಸಲ್ಯ ಶಿಶು ಪಾಲನ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಪೋಷಣೆಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು, ಮಕ್ಕಳಿಗೆ ಹೆಚ್ಚು ಒತ್ತು ಕೊಡುವಂತಹ ಕೆಲಸಗಳು ನಡೆಯಲಿ ಎಂದು ಹೇಳಿದರು. ಜಿಲ್ಲಾಧಿಕಾರಿ ಕಚೇರಿಯಲ್ಲೇ ಶಿಶು ಪಾಲನ ಕೇಂದ್ರ ಉದ್ಘಾಟನೆ ಆಗಿರುವುದು ಸಂತೋಷದ ವಿಚಾರ. ಇದರಿಂದ ಕಚೇರಿ ಸಿಬ್ಬಂದಿಗಳಿಗೆ ಸಹಾಯವಾಗಲಿದೆ ಎಂದರು.
ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ತಮ್ಮ ಮಕ್ಕಳನ್ನು ಬಿಟ್ಟು ಕೆಲಸವನ್ನು ಮಾಡುವುದು ಕಷ್ಟಕರವಾದ ಸಂಗತಿ. ತಮ್ಮ ಕಚೇರಿಯಲ್ಲಿ ಶಿಶುಪಾಲನ ಕೇಂದ್ರ ಸ್ಥಾಪನೆಯಾಗಿರುವುದರಿಂದ ತಮ್ಮ ಮಕ್ಕಳನ್ನು ಮಧ್ಯಾಹ್ನದ ಹೊತ್ತಿಗೆ ಅಥವಾ ತಮ್ಮ ಬಿಡುವಿನ ವೇಳೆಯಲ್ಲಿ ನೋಡಿಕೊಂಡು ಹೋಗಲು ಅನುಕೂಲವಾಗಲಿದೆ ಎಂದರು.
ದೂರದ ಊರಿಂದ ಮಕ್ಕಳನ್ನು ಬಿಟ್ಟು ಸಂಚರಿಸುವವರಿಗೆ ಮತ್ತು ತಮ್ಮ ಮಕ್ಕಳನ್ನು ಬೇರೆ ಕಡೆ ನೋಡಿಕೊಳ್ಳಲು ಬಿಡುತ್ತಿದ್ದವರಿಗೆ ತಮ್ಮ ಕಚೇರಿಯಲ್ಲಿ ಮಕ್ಕಳ ಆರೈಕೆ ಕೇಂದ್ರ ಇರುವುದರಿಂದ ಮಕ್ಕಳ ಪಾಲನೆಯಲ್ಲಿ ತಾವೂ ತೊಡಗಬಹುದು ಎಂದರು.
ಮಕ್ಕಳ ಆರೈಕೆಯ ದೃಷ್ಟಿಯಲ್ಲಿ ಶಿಶು ಪಾಲನ ಕೇಂದ್ರದಲ್ಲಿ ಮಕ್ಕಳ ಚಲನ ವಲನಗಳನ್ನು ಗಮನಿಸಲು ಸಿಸಿ ಟಿವಿ ಅಳವಡಿಸುವಂತಾಗಬೇಕು ಎಂದರು.
ಮಕ್ಕಳನ್ನು ಆರೈಕೆ ಮಾಡುವ ನಿಟ್ಟಿನಲ್ಲಿ ಸರ್ಕಾರದಿಂದ ಉತ್ತಮವಾದ ಕೆಲಸವಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಸ್ತ್ರಿಶಕ್ತಿ ಗುಂಪು ಉತ್ತಮ ಕಾರ್ಯನಿರ್ವಹಿಸುತ್ತಿದೆ ಎಂದರು. ಕುಶಾಲನಗರದಲ್ಲೂ ಇದೇ ರೀತಿಯಲ್ಲಿ ಕೇಂದ್ರ ಸ್ಥಾಪನೆಯಾಗಿದೆ. ಅಲ್ಲಿಯೂ ಬಾಡಿಗೆ ಕೊಠಡಿಯಲ್ಲಿ ರೂ.10 ಸಾವಿರ ನೀಡಿ ಈಗಾಗಲೇ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿರುವುದಾಗಿ ಹೇಳಿದರು.
ಈ ರೀತಿಯಿಂದ ಸರ್ಕಾರ ಇಂತಹ ಕಾರ್ಯಕ್ರಮಗಳ ಮುಖಾಂತರ ಜನರಿಗೆ ಸ್ಪಂದನೆಯನ್ನು ನೀಡುವ ಕಾರ್ಯವನ್ನು ನಡೆಸುತ್ತಿದೆ ಎಂದರು.
ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅವರು ಮಾತನಾಡಿ ಶಿಶುಕೇಂದ್ರ ಸ್ಥಾಪನೆಯಾದದ್ದು ಶ್ಲಾಘನೀಯ. ಇನ್ನೂ ಹೆಚ್ಚು ಕೇಂದ್ರಗಳು ಸ್ಥಾಪನೆಯಾಗಲಿ ಎಂದರು. ಜನರಿಗೆ ಕೆಲಸದ ನಡುವೆ ಮಕ್ಕಳನ್ನು ನೋಡಿಕೊಂಡು ಕಾರ್ಯ ನಿರ್ವಹಿಸುವುದು ಕಷ್ಟಕರವಾಗಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಿಶು ಪಾಲನ ಕೇಂದ್ರ ಸ್ಥಾಪನೆಯಾಗಿರುವುದು ಇಲ್ಲಿನ ಜನಸಾಮಾನ್ಯರಿಗೆ ಮತ್ತು ಅಧಿಕಾರವರ್ಗದವರಿಗೂ ಅನುಕೂಲವಾಗಲಿದೆ ಎಂದರು.
ಆರೋಗ್ಯ ದೃಷ್ಟಿಯಿಂದ ಮಕ್ಕಳಿಗೆ ಮೂರು ತಿಂಗಳಿನಿಂದ ಒಂದು ವರ್ಷದವರೆಗೆ ಸ್ತನ್ಯಪಾನ ಅತಿ ಮುಖ್ಯವಾದದ್ದು. ಇದು ಮಕ್ಕಳನ್ನು ಬಿಟ್ಟು ದೂರದಲ್ಲಿ ಕೆಲಸ ನಿರ್ವಹಿಸುವವರಿಗೆ ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಸಹಾಯವಾಗಲಿದೆ ಎಂದರು.
ಸಿಸಿ ಟಿವಿ ಅಳವಡಿಕೆ: ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಅವರು ಮಾತನಾಡಿ ಶಿಶುಪಾಲನ ಕೇಂದ್ರದ ಸೌಲಭ್ಯವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಿ ಎಂದರು. ಮತ್ತು ಶಿಶು ಪಾಲನ ಕೇಂದ್ರದಲ್ಲಿ ಮಕ್ಕಳ ಚಲನ ವಲನಗಳನ್ನು ನೋಡಿಕೊಳ್ಳುವ ನಿಟ್ಟಿನಲ್ಲಿ ಸಿಸಿಟಿವಿ ಅಳವಡಿಸುವ ಕಾರ್ಯ ನಡೆಯಲಿದೆ ಎಂದರು.
ಸ್ತ್ರೀಶಕ್ತಿ ಒಕ್ಕೂಟದ ಜಿಲ್ಲಾ ಅಧ್ಯಕ್ಷೆ ರೆಹನಾ ಸುಲ್ತಾನ್ ಅವರು ಮಾತನಾಡಿ ರಾಜ್ಯದಲ್ಲಿ ಪ್ರಥಮವಾಗಿ ಆರಂಭವಾದ ವಾತ್ಸಲ್ಯ ಕೇಂದ್ರ ಇದಾಗಿದೆ. ಜಿಲ್ಲೆಯಲ್ಲಿ ಒಟ್ಟು ಎರಡು ಮತ್ತು ತಾಲೂಕುಗಳಲ್ಲಿ ಎರಡು ಶಿಶು ಪಾಲನಾ ಕೇಂದ್ರಗಳು ಸ್ಥಾಪನೆ ಆಗಲಿವೆ ಎಂದರು.
ಕಾರ್ಯಕ್ರಮದಲ್ಲಿ ಕಾರ್ಮಿಕ ಅಧಿಕಾರಿ ಅನಿಲ್ ಬಿ.ಬಗಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಎನ್. ಮಂಜುನಾಥ್, ಶಿಶು ಕಲ್ಯಾಣಾಧಿಕಾರಿ ಪೆÇನ್ನಚ್ಚ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿಮಲಾ ಇತರರು ಉಪಸ್ಥಿತರಿದ್ದರು. ಶ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷರಾದ ರೆಹನಾ ಸುಲ್ತಾನ್ ಪ್ರಾರ್ಥಿಸಿದರು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಜನಿ ಅವರು ನಿರೂಪಿಸಿದರು ಮತ್ತು ವಂದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!