ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ನಗರದಲ್ಲಿ ನವೆಂಬರ್ ಮಾಸದಲ್ಲಿ ಆಯೋಜಿಸಲಾಗಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಪೂರ್ವಭಾವಿಯಾಗಿ, ರಾಜ್ಯ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯು 2022-27ರ ಅವಧಿಗೆ ವೈಮಾನಿಕ (ಏರೋಸ್ಪೇಸ್) ಮತ್ತು ರಕ್ಷಣಾ ನೀತಿಯನ್ನು ಸಿದ್ದಪಡಿಸಿದೆ. ಬಹು ನಿರೀಕ್ಷಿತ ಈ ಹೊಸ ನೀತಿಯು ಕರ್ನಾಟಕವನ್ನು ಆದ್ಯತೆಯ ಹೂಡಿಕೆಯ ತಾಣವನ್ನಾಗಿ ರೂಪಿಸುವ ಗುರಿಯನ್ನು ಹಾಕಿಕೊಂಡಿದೆ.
ರಕ್ಷಣಾ ಸಚಿವಾಲಯವು 2027ರ ವೇಳೆಗೆ ಏರೋಸ್ಪೇಸ್ ಮತ್ತು ರಕ್ಷಣಾ ತಯಾರಿಕಾ ವಲಯದಲ್ಲಿ ಶಸ್ತ್ರಾಸ್ತ್ರ ಸಂಗ್ರಹದಲ್ಲಿ 70% ಸ್ವಾವಲಂಬನೆ ಸಾಧಿಸುವ ಗುರಿಯನ್ನು ಹೊಂದಿದೆ. ಇದು ಬಂಡವಾಳ ಹೂಡಿಕೆಗೆ ಪೂರಕ ವಾತಾವರಣವನ್ನು ಸೃಷ್ಟಿಸಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
5 ವರ್ಷಗಳ ನೀತಿಯ ಅವಧಿಯಲ್ಲಿ ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ 45,000 ಕೋಟಿ ಹೂಡಿಕೆಯನ್ನು ಆಕರ್ಷಿಸುವ ಹಾಗೂ 60,000 ಕ್ಕೂ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಲಾಗಿದೆ. ರಾಜ್ಯವನ್ನು ಉತ್ಪಾದನಾ ಕೇಂದ್ರವಾಗಿ ಅಭಿವೃದ್ಧಿಪಡಿಸುವುದರ ಜೊತೆಗೆ ಭಾರತೀಯ ಮಾರುಕಟ್ಟೆ, ಮತ್ತು ರಫ್ತು ಎರಡಕ್ಕೂ ಈ ನೀತಿಯು ಅನುಕೂಲ ಕಲ್ಪಿಸಲಿದೆ ಎಂದು ನಿರಾಣಿ ತಿಳಿಸಿದ್ದಾರೆ.
ಕರ್ನಾಟಕವು ರಕ್ಷಣಾ ಎಲೆಕ್ಟ್ರಾನಿಕ್ಸ್ ವಸ್ತುಗಳು /ಉತ್ಪನ್ನಗಳಲ್ಲಿ ದೇಶಕ್ಕೆ 40% ರಷ್ಟು ಪ್ರಮುಖ ಪಾಲನ್ನು ನೀಡುತ್ತದೆ. ಈ ನಿಟ್ಟಿನಲ್ಲಿ ಮತ್ತಷ್ಟು ಉತ್ತೇಜನ ನೀಡಲು, ಈ ನೀತಿಯು ಬಾಹ್ಯಾಕಾಶ, ರಕ್ಷಣಾ ಮತ್ತು ಏರೋಸ್ಪೇಸ್ ತಯಾರಕರು ಹಾಗೂ ಇತರ ಉಪ-ವಲಯಗಳಿಗೆ ಬೃಹತ್ ಭೂಮಿ ಮತ್ತು ಆರ್ಥಿಕ ಪ್ರೋತ್ಸಾಹದ ಪ್ಯಾಕೇಜ್‌ಗಳನ್ನು ಒದಗಿಸಲಿದೆ.
ಹೊಸ ನೀತಿಯ ಅಡಿಯಲ್ಲಿ ಬೆಂಗಳೂರು, ಬೆಳಗಾವಿ, ಮೈಸೂರು, ತುಮಕೂರು ಮತ್ತು ಚಾಮರಾಜನಗರ ಸೇರಿದಂತೆ ರಾಜ್ಯದ 5 ಏರೋಸ್ಪೇಸ್ ಮತ್ತು ಡಿಫೆನ್ಸ್ ಹಬ್‌ಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ.
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಹರಳೂರಿನ ಎ & ಡಿ ಪಾರ್ಕ್‌ನ 2 ನೇ ಹಂತವನ್ನು ಇಲಾಖೆ ಈಗಾಗಲೇ 1,200 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸುತ್ತಿದೆ. ಕರ್ನಾಟಕ ಕೈಗಾರಿಕಾ ನೀತಿ (2020-25) ಪ್ರಕಾರ ಎ & ಡಿ ಪಾರ್ಕ್ ಡೆವಲಪರ್‌ಗಳಿಗೆ ಆರ್ಥಿಕ ಪ್ರೋತ್ಸಾಹವನ್ನು ನಿಗದಿಪಡಿಸಲಾಗಿದೆ.
ರಕ್ಷಣಾ ಪರೀಕ್ಷೆಯ ಮೂಲಸೌಕರ್ಯ (ಡಿಟಿಐ) ಸ್ಥಾಪನೆಯ ಮೇಲೆ ಕೇಂದ್ರೀಕರಿಸುವುದು ನೀತಿಯ ಮತ್ತೊಂದು ಪ್ರಮುಖ ಅಂಶವಾಗಿದೆ. “ಪ್ರವೇಶಸಾಧ್ಯವಾದ ಪರೀಕ್ಷಾ ಮೂಲಸೌಕರ್ಯಗಳ ಕೊರತೆಯು ದೇಶೀಯ ಎ & ಡಿ ಉತ್ಪಾದನಾ ಘಟಕಗಳಿಗೆ ಮುಖ್ಯ ಅಡಚಣೆಯಾಗಿದೆ. ಸರ್ಕಾರದ ನೆರವಿನೊಂದಿಗೆ ಖಾಸಗಿ ವಲಯದ ಅಡಿಯಲ್ಲಿ ಡಿಟಿಐಗಳನ್ನು ಸ್ಥಾಪಿಸಲಾಗುವುದು ಎಂದು ನಿರಾಣಿ ಹೇಳಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ