ಹೊಸ ದಿಗಂತ ವರದಿ,ಮದ್ದೂರು :
ತಾಲೂಕಿನ ಚನ್ನಸಂದ್ರ ಗ್ರಾಮದ ಜಮೀನು ವಿವಾದದ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಸಮನ್ಸ್ ಮತ್ತು ವಾರೆಂಟ್ ಜಾರಿ ಮಾಡದೆ ಕರ್ತವ್ಯಲೋಪ ಎಸಗಿರುವ ಮದ್ದೂರು ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ರವಿ ಮತ್ತು ಕಾನ್ಸ್‌ಟೇಬಲ್ ವಿಷ್ಣುವರ್ಧನ ಅವರನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಆದೇಶ ಹೊರಡಿಸಿದ್ದಾರೆ.
ಹೆಡ್ ಕಾನ್ಸ್‌ಟೇಬಲ್ ರವಿ ಮತ್ತು ಕಾನ್ಸ್‌ಟೇಬಲ್ ವಿಷ್ಣುವರ್ಧನ ಸದರಿ ಪ್ರಕರಣದ ದೂರುದಾರರ ಜೊತೆ ಶಾಮೀಲಾಗಿ ಮದ್ದೂರು ಜೆಎಂಎಪ್‌ಸಿ ನ್ಯಾಯಾಲಯದಿಂದ ಜಾರಿಯಾಗಿದ್ದ ಸಮಸ್ಸ್ ಮತ್ತು ವಾರೆಂಟ್‌ಗಳನ್ನು ಎದುರುದಾರರಿಗೆ ಜಾರಿ ಮಾಡದೆ ನ್ಯಾಯಾಲಯಕ್ಕೆ ಸುಳ್ಳು ವರದಿಗಳನ್ನು ನೀಡಿ ಕರ್ತವ್ಯ ಲೋಪ ಎಸಗಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿಗಳು ಇಬ್ಬರನ್ನೂ ಕರ್ತವ್ಯಲೋಪದ ಆರೋಪದ ಮೇರೆಗೆ ಅಮಾನತು ಮಾಡಿದ್ದಾರೆ.
ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಚನ್ನಸಂದ್ರ ಗ್ರಾಮದ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತು. ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ನ್ಯಾಯಾಧೀಶರು ಪ್ರಕರಣ ಸಂಬಂಧ ಎದುರುದಾರರಿಗೆ ಸಮನ್ಸ್ ಮತ್ತು ವಾರೆಂಟ್ ಜಾರಿಗೊಳಿಸಿದ್ದರು. ಸಮನ್ಸ್ ಮತ್ತು ವಾರೆಂಟ್ ಜಾರಿಗೊಳಸದ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ.