ಭಾರತದ ವಿರೋಧದ ನಡುವೆಯೂ ಹಂಬನ್‌ತೋಟಕ್ಕೆ ಬಂದಿಳಿಯಿತು ಚೀನಾದ ಬೇಹುಗಾರಿಕಾ ನೌಕೆ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದ ವಿರೋಧದ ನಡುವೆಯೂ ಚೀನಾದ ಬೇಹುಗಾರಿಕೆ ನೌಕೆಯೆಂದೇ ಕರೆಯಲ್ಪಡುವ ಸರ್ವೇಕ್ಷಣಾ ನೌಕೆ ಯುವಾನ್ ವಾಂಗ್ 5 ಶ್ರೀಲಂಕಾದ ಹಂಬನ್‌ ತೋಟ ಬಂದರಿಗೆ ಬಂದಿಳಿದಿದೆ. ಇದು ಭದ್ರತೆಯ ಕುರಿತಾಗಿ ಭಾರತದ ಕಾಳಜಿ ಹೆಚ್ಚಿಸುವಂತೆ ಮಾಡಿದೆ.

ಶ್ರೀಲಂಕಾದ ಬಂದರಿಗೆ ಯುವಾನ್‌ ವಾಂಗ್5‌ ನೌಕೆಯು ಬಂದಿಳಿದಿರುವುದು ಭಾರತವನ್ನು ಕಳವಳಕ್ಕೆ ಸಿಲುಕಿಸಿದೆ. ಅಲ್ಲದೇ ಭಾರತ ಮತ್ತು ಚೀನಾ ನಡುವಿನ ವಿವಾದ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಯುರೋಪ್‌ ಹಾಗೂ ಏಷ್ಯಾದ ಪ್ರಮುಖ ಸಾಗಣೆದಾರಿಯಾದ ಈ ಪ್ರದೇಶದಲ್ಲಿ ಚೀನಾದ ಹಡಗೊಂದರ ಪ್ರವೇಶವು ಭಾರತದ ಸುರಕ್ಷತೆಗೆ ಸವಾಲು ಹಾಕಿದಂತಾಗಿದೆ. ಅಲ್ಲದೇ ಸಾಲದ ಬದಲಾಗಿ ಹಂಬನ್‌ ತೋಟ ಬಂದರನ್ನು ಶ್ರೀಲಂಕಾವು ಚೀನಾಕ್ಕೆ ಲೀಸ್‌ ನೀಡಿರುವುದರಿಂದ ಚೀನಾ ಇದನ್ನು ಸೇನಾನೆಲೆಯಾಗಿಯೂ ಬಳಸಬಹುದು ಎಂಬ ಕುರಿತು ಕಳವಳ ವ್ಯಕ್ತವಾಗಿದೆ.

“ಇಂಧನ, ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ಮೂರುದಿನಗಳವರೆಗೆ ಹಡಗನ್ನು ನಿಲ್ಲಿಸಲಾಗುತ್ತದೆ” ಎಂದು ಮೂಲಗಳ ವರದಿ ಹೇಳುತ್ತದೆ.

ಆದರೆ ಚೀನಾದ ಈ ಹಡಗು ಬಾಹ್ಯಾಕಾಶ-ಟ್ರ್ಯಾಕಿಂಗ್ ಹಡಗುಗಳಲ್ಲಿ ಒಂದು ಎನ್ನಲಾಗುತ್ತದೆ, ಇದನ್ನು ಉಪಗ್ರಹ, ರಾಕೆಟ್ ಮತ್ತು ಖಂಡಾಂತರ ಕ್ಷಿಪಣಿ ಉಡಾವಣೆಗಳನ್ನು ಮೇಲ್ವಿಚಾರಣೆ ಮತ್ತು ಅವುಗಳ ಕುರಿತು ಗುಪ್ತಚರ ಮಾಹಿತಿ ಕಲೆಹಾಕಲು ಬಳಸಲಾಗುತ್ತದೆ. ಅಲ್ಲದೇ ಇದು ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿಯಿಂದ ನಿರ್ವಹಿಸಲ್ಪಡುತ್ತದೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಅಮೆರಿಕದ ಪೆಂಟೆಗಾನ್‌ ಮತ್ತು ಭಾರತ ಎರಡೂ ದೇಶಗಳು ಈ ನೌಕೆಯ ಆಗಮನದ ಕುರಿತು ಕಳವಳ ವ್ಯಕ್ತಪಡಿಸಿದ್ದವು. ಆದರೆ ಶ್ರೀಲಂಕಾವು ಹಡಗು ತಂಗಲು ಅನುಮತಿ ನೀಡಿದ್ದು ಇದು ಭಾರತದ ರಕ್ಷಣೆಯ ಕುರಿತು ಕಾಳಜಿವಹಿಸುವಂತೆ ಮಾಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!