September 7, 2026
Monday, September 7, 2026
spot_img

ಮಳೆ ಬೀಳೋದಿರಲಿ, ರಾಜ್ಯದಲ್ಲಿ ಬೇಸಿಗೆಯ ಅನುಭವ: ಬೆಂಗಳೂರಿನಲ್ಲಿ ತಾಪಮಾನ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗ ಮಳೆಗಾಲ ಅನ್ನೋದೇ ಮರೆತು ಹೋಗಿದೆ. ಇಷ್ಟು ದಿನ ಮಳೆ ಬೀಳದಿದ್ದರೂ ಮೋಡ ಕವಿದ ವಾತಾವರಣವಿತ್ತು. ಆದರೆ ಇದೀಗ ರಾಜಧಾನಿ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ತಾಪಮಾನ ಏರಿಕೆಯಾಗಿದ್ದು, ಬೇಸಗೆಯಂತಹ ಅನುಭವವಾಗಿದೆ.

ಎಲ್ ನಿನೋ ಎಫೆಕ್ಸ್‌ನಿಂದ ಮಳೆ ಅಭಾವ ಉಂಟಾಗಿದ್ದು, ಇತ್ತ ತಾಪಮಾನ ಏರಿಕೆಯಾಗುತ್ತಿದೆ. ಕಲಬುರಗಿಯಲ್ಲಿ 36 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇನ್ನೂ ಬೆಂಗಳೂರಿನಲ್ಲಿ 32 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಷ್ಟೇ ಅಲ್ಲ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ತಾಪಮಾನ ಏರಿಕೆಯಾಗಿದೆ. ಬೇಸಿಗೆಯಲ್ಲಿ ಯಾವ ರೀತಿ ವಾತಾವರಣವಿರುತ್ತದೋ ಅದೇ ರೀತಿ ವಾತಾವರಣ ಈಗ ಇರಲಿದೆ.

ಇದಕ್ಕಿದ್ದಂತೆಯೇ ಮನೆಗಳಲ್ಲಿ ಫ್ಯಾನ್‌ ತಿರುಗೋಕೆ ಆರಂಭವಾಗಿದೆ. ಜನರಿಗೆ ಈಗ ಯಾವ ಕಾಲ ಎಂದು ಹೇಳೋಕೆ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ಒಂದು ವಾರ ಬೆಂಗಳೂರಿನಲ್ಲಿ 34 ಡಿಗ್ರಿ ಸೆಲ್ಸಿಯಸ್‌ಗೆ ತಾಪಮಾನ ಏರಿಕೆ ಆಗಲಿದೆ. ಜೊತೆಗೆ ಕಲಬುರಗಿಯಲ್ಲಿ 36 ರಿಂದ 37ವರೆಗೆ ಏರಿಕೆ ಆಗಲಿದೆ. ಮಳೆ, ಮೋಡ ಹಾಗೂ ಭೂಮಿಯ ತೇವಾಂಶ ಕಡಿಮೆಯಾದ ಹಿನ್ನೆಲೆ ಬಿಸಿಲಿನ ತಾಪಮಾನ ಏರಿಕೆಯಾಗಲಿದೆ.

ಮುಂದಿನ ದಿನಗಳಲ್ಲೂ ಬೆಂಗಳೂರಿನಲ್ಲಿ ಭಾಗಶಃ ಮೋಡ ಕವಿದ ಹಾಗೂ ಬಿಸಿಲಿನ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ. ಸೆಪ್ಟೆಂಬರ್ 16ರವರೆಗೆ ಇದೇ ರೀತಿಯ ವಾತಾವರಣ ಇರಬಹುದು ಎಂದು ಅಂದಾಜಿಸಲಾಗಿದೆ. ಬೆಂಗಳೂರಿನ ಜೊತೆಗೆ ರಾಜ್ಯದ ಹಲವು ಭಾಗಗಳಲ್ಲೂ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳು, ಕಲಬುರಗಿ, ಉಡುಪಿ ಹಾಗೂ ಮಂಗಳೂರು ಭಾಗಗಳಲ್ಲಿ ತಾಪಮಾನ ಏರಿಕೆ ಕಂಡುಬರುವ ಸಾಧ್ಯತೆ ಇದೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಬಿಸಿಲಿನ ಪ್ರಮಾಣ ಕಡಿಮೆಯಾಗಿರುತ್ತದೆ. ಆದರೆ ಈ ಬಾರಿ ಮಳೆ ಮತ್ತು ಬಿಸಿಲು ಎರಡೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದರಿಂದ ಜನರು ಹವಾಮಾನದ ಬದಲಾವಣೆಯನ್ನು ಅನುಭವಿಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !