ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ಚಾಮುಂಡಿ ಬೆಟ್ಟದ ಕಾಡಿನಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯ ಕೆನ್ನಾಲಿಗೆಗೆ ಭಾರೀ ಪ್ರಮಾಣದಲ್ಲಿ ಅರಣ್ಯ ಸಂಪತ್ತು ನಾಶವಾಗಿದೆ. ಬೆನ್ನಲ್ಲೇ ಇಂದು ಡಿಸಿಎಫ್ ಬಸವರಾಜು ಸುದ್ದಿಗೋಷ್ಟಿ ನಡೆಸಿ ಘಟನೆಗೆ ಸಂಬಂಧಿಸಿ ಮಾಹಿತಿ ನೀಡಿದ್ದಾರೆ.
ನಿನ್ನೆ ಚಾಮುಂಡಿ ಬೆಟ್ಟಕ್ಕೆ ಮಾನವ ನಿರ್ಮಿತ ಬೆಂಕಿ ಹೊತ್ತಿತ್ತು. ಉದ್ದೇಶ ಪೂರ್ವಕವಾಗಿ ಕಾಡಿಗೆ ಬೆಂಕಿ ಹಾಕಿದ್ದಾರೆ. ಇದು ಆಕಸ್ಮಿಕವಲ್ಲ ಎಂದು ಆರೋಪಿಸಿದ್ದಾರೆ.
ಆ ಬಗ್ಗೆ ತನಿಖೆ ಮಾಡ್ತಿದ್ದೇವೆ. ಗಾಳಿಯ ವೇಗ ಹಾಗೂ ಬಿಸಿಲಿನ ವಾತಾವರಣ ಹೆಚ್ಚಾಗಿತ್ತು. ಹೀಗಾಗಿ ಬೆಂಕಿ ನಂದಿಸಲು ಕಷ್ಟವಾಗಿದೆ. ನಾವು ಎಷ್ಟೇ ಪ್ರಯತ್ನಪಟ್ಟರೂ ಆ ಜಾಗಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಶ್ರಮಹಾಕಿದ್ರು. ಸಂಜೆ ವೇಳೆಗೆ ಕಂಟ್ರೋಲ್ಗೆ ಬಂತು ಎಂದರು.
3 ತಂಡಗಳ ಜೊತೆಗೆ ವಾಚರ್ಗಳು ಬಿಟ್ಟು ರಾತ್ರಿ ಇಡೀ ಕಾದಿದ್ದೇವೆ. ಬೆಳಗ್ಗೆ ಕೂಡ ಎರಡು ತಂಡ ಮಾಡಲಾಗಿದ್ದು, ಕೆಂಡ ಇದ್ದರೆ ಆರಿಸಲು ಹೇಳಿದ್ದೇವೆ. ಸದ್ಯಕ್ಕೆ ಡ್ರೋನ್ ಹಾರಿಸಿ ಪರಿಶೀಲನೆ ಮಾಡಿದ್ದೇವೆ. ದೇವಿಕೆರೆ, ಗೊಲ್ಲಹಳ್ಳ ಭಾಗದಲ್ಲಿ 35 ಎಕರೆ ಸಂಪೂರ್ಣ ಸುಟ್ಟಿದೆ. ಬೇಸಿಗೆಯಿಂದ ಒಣ ಹುಲ್ಲು ಪ್ರಮಾಣ ಜಾಸ್ತಿ ಇದೆ.
1516 ಎಕರೆ ಮೀಸಲು ಎಕರೆ ಬೆಟ್ಟದ ಪ್ರದೇಶವಿದೆ. 4 ಕಡೆ ಬೆಟ್ಟಕ್ಕೆ ಪ್ರವೇಶ ಇದೆ. ಎಲ್ಲವನ್ನೂ ನಾವು ಮಾನಿಟರ್ ಮಾಡೋದು ಕಷ್ಟ. ನಾನು ಮಾಧ್ಯಮಗಳ ಮೂಲಕ ಕೇಳಿಕೊಳ್ಳುತ್ತೇನೆ. ಬಿಡಿ ಸಿಗರೇಟ್ ಸೇದು ಎಸೆಯಬೇಡಿ. ಸಣ್ಣ ಕಿಡಿ ಇಡೀ ಕಾಡನ್ನೇ ನಾಶ ಮಾಡುತ್ತದೆ. ಅದೃಷ್ಟವಶಾತ್ ಯಾವುದೇ ಪ್ರಾಣಿಗಳಿಗೆ ಹಾನಿಯಾಗಿಲ್ಲ. ಬೆಳಗ್ಗೆ ನಮ್ಮ ವಾಚರ್ ಕಣ್ಣಿಗೆ ಚಿರತೆ ಹಾಗೂ ಮರಿಗಳು ಕಂಡಿವೆ. ಬೆಂಕಿ ಬಿದ್ದ ತಕ್ಷಣ ಪ್ರಾಣಿಗಳು ಒಂದು ಕಡೆಯಿಂದ ಮತ್ತೊಂದು ಭಾಗಕ್ಕೆ ಹೋಗಿವೆ ಎಂದರು.