ಹೊಸದಿಗಂತವರದಿ, ಮಂಡ್ಯ :
ಜಾತ್ಯಾತೀತ ಸಿದ್ಧಾಂತದಲ್ಲಿ ನಂಬಿಕೆ ಇಟ್ಟು ರಾಜಕಾರಣ ಮಾಡಿದ ಎಚ್.ಡಿ. ದೇವೇಗಡೌರು ಈಗ ಬಿಜೆಪಿ ಪರ ನಿಂತಿದ್ದಾರೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಟೀಕಿಸಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರಮೋದಿಯವರು ಪ್ರಧಾನಿಯಾದರೆ ಈ ದೇಶ ಬಿಟ್ಟು ಹೋಗುತ್ತೇನೆ ಎಂದು ಹೇಳಿದ್ದರೆನ್ನಲಾದ ದೇವೇಗೌಡರ ಈ ನಿಲುವು ಜಾತ್ಯಾತೀತ ತತ್ವಕ್ಕೆ ವಿರುದ್ಧವಾಗಿದೆ ಎಂದು ಹೇಳಿದರು.
ದೇವೇಗೌಡರು ನಮ್ಮ ನಾಯಕರು, ಈ ರಾಜ್ಯದ ಮಣ್ಣಿನ ಮಗ ಪ್ರಧಾನಿಯಾಗಿದ್ದವರು. ಜಾತ್ಯಾತೀತ ಸಿದ್ಧಾಂತದಲ್ಲಿ ನಂಬಿಕೆ ಇಟ್ಟು, ಎಲ್ಲರನ್ನೂ ಇದರೆಡೆಗೆ ಕರೆತಂದಿದ್ದರು. ಅಷ್ಟು ದೃಢವಾದ ಜಾತ್ಯಾತೀತತೆಯನ್ನು ಹೊಂದಿದ್ದರು. ಆದರೆ ಇವತ್ತು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ ಎಂದರೆ ನಮಗೆ ನೋವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎನ್ನುವಷ್ಟು ಕಠೋರವಾಗಿ ಜಾತ್ಯಾತೀತ ಸಿದ್ಧಾವಂತವನ್ನು ಪಾಲಿಸಿದ್ದರು. ಅಂತವರನ್ನು ಆ ಪಕ್ಷದ ನಾಯಕರು, ಅವರ ಮಕ್ಕಳು ಈ ಪರಿಸ್ಥಿತೆಗೆ ತಂದು ನಿಲ್ಲಿಸಿದ್ದಾರೆ ಎಂದು ಛೇಡಿಸಿದರು.
ರಾಮನ ಹೆಸರಲ್ಲಿ ಬಿಜೆಪಿ ರಾಜಕಾರಣ :
ನಾವೂ ರಾಮ ಭಕ್ತರೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೈ ಶ್ರೀರಾಮ್ ಎಂದು ಹೇಳಲಿಲ್ಲವೇ, ಬಿಜೆಪಿಯವರು ಚುನಾವಣೆಗಾಗಿ ಬಳಸಿಕೊಳ್ಳುತ್ತಿದ್ದಾರೆ. ನಾವು ಚುನಾವಣೆ ಬಿಟ್ಟು ವೈಯಕ್ತಿಕವಾಗಿ ದೇವರ ಆರಾಧನೆ ಮಾಡುತ್ತೇವೆ. ನಮಗೂ ಭಕ್ತಿ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.