ಬಿಟ್ಟಿ ಭಾಗ್ಯಗಳಿಂದ ಅಭಿವೃದ್ಧಿ ಕುಂಠಿತ: ಬಿ.ಶ್ರೀರಾಮುಲು

ಹೊಸದಿಗಂತ ವರದಿ, ಕಲಬುರಗಿ

ರಾಜ್ಯ ಕಾಂಗ್ರೆಸ್ ಸರ್ಕಾರವು ತನ್ನ ಐದು ವರ್ಷದ ಅವಧಿಯಲ್ಲಿ ಬಿಟ್ಟಿ ಭಾಗ್ಯಗಳಿಂದ ಹೊಸ ರಸ್ತೆ ನಿರ್ಮಿಸುವುದಲ್ಲ, ಇದ್ದ ಬಿದ್ದ ರಸ್ತೆಗಳ ಗುಂಡಿ ಮುಚ್ಚುವುದಕ್ಕೂ ಹಣ ಹೊಂದಿಸಲು ಕಷ್ಟವಾಗಲಿದೆ. ಹೀಗಿರುವಾಗ ರಾಜ್ಯದ ಅಭಿವೃದ್ಧಿ ನಿರೀಕ್ಷಿಸುವುದು ಹೇಗೆ ಸಾಧ್ಯ ಎಂದು ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣಾ ಉಸ್ತುವಾರಿ ಹಾಗೂ ಮಾಜಿ ಸಚಿವ ಬಿ. ಶ್ರೀರಾಮಲು ಪ್ರಶ್ನಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ,ಬಿಟ್ಟಿ ಭಾಗ್ಯಗಳಿಂದ ಬಹಳ ದಿನಗಳವರೆಗೆ ಮುಂದುವರಿಯಲ್ಲ, ರಾಜ್ಯದ ಎಲ್ಲ ಜನತೆಗೆ ಈ ಯೋಜನೆಗಳು ಸಿಗುತ್ತಿಲ್ಲ, ಕೆಲವರಿಗಷ್ಟೇ ಮಾತ್ರ ಉಪಯೋಗವಾಗುತ್ತಿದೆ ಎಂದು ಟೀಕಿಸಿದರು. ಅಲ್ಲದೆ, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳಿಗಾಗಿ ಸಾವಿರಾರು ಕೋಟಿ ರೂ. ಮಂಜೂರ ಮಾಡಲಾಗುತ್ತಿತ್ತು. ಆದರೆ ಈಗ ಒಬ್ಬ ಶಾಸಕರಿಗೂ 50 ಲಕ್ಷ ರೂ. ಅನುದಾನ ದೊರೆಕುತ್ತಿಲ್ಲ, ಇದೆಂಥ ಸರ್ಕಾರ ಎಂದು ಖಾರವಾಗಿ ಪ್ರಶ್ನಿಸಿದರು.

ಎಂಎಲ್‍ಸಿ-ಎಂಪಿ ಚುನಾವಣೆಗೆ ಕೆಲಸ ಮಾಡಿ
ರಾಜ್ಯದಲ್ಲಿ ಮುಂಬರುವ ಈಶಾನ್ಯ ಪದವೀಧರ ಕ್ಷೇತ್ರದ ಎಂಎಲ್‍ಸಿ ಸೇರಿ ಲೋಕಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಗಳನ್ನು ಮನೆಗೆ ಮನೆಗೆ ತಲುಪಿಸಬೇಕು. ಪಕ್ಷದ ತಳಮಟ್ಟ ಸಂಘಟನೆಗೆ ಹೆಚ್ಚಿನ ಒತ್ತು ಕೊಟ್ಟು ಸಂಘಟಿಸಬೇಕು. ಹಿಂದಿನ ಎಂಎಲ್‍ಸಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋತಿರಬಹುದು. ಸೋಲು-ಗೆಲುವು ಸಹಜ, ಸೋಲಾಗದಂತೆ ಈಗ್ಗಿನಿಂದಲೇ ಒಗ್ಗಟ್ಟಿನಿಂದ ಎಲ್ಲರು ಕೆಲಸ ಮಾಡೋಣ ಎಂದು ಕರೆ ನೀಡಿದರು.

ಸಂಸದ ಡಾ. ಉಮೇಶ ಜಾಧವ, ವಿಧಾನಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ್, ಶಶೀಲ್ ಜಿ. ನಮೋಶಿ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್, ಮಾಜಿ ಎಂಎಲ್‍ಸಿ ಅಮರನಾಥ ಪಾಟೀಲ್, ಮಾಜಿ ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೂರ್, ರಾಜಕುಮಾರ ಪಾಟೀಲ್ ತೇಲ್ಕೂರ್, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೆವಾಡಗಿ, ಮೇಯರ್ ವಿಶಾಲ ದರ್ಗಿ, ಕ್ರೇಡಲ್ ಮಾಜಿ ಅಧ್ಯಕ್ಷ ಚಂದು ಪಾಟೀಲ್, ಪ್ರಮುಖರಾದ ಮಣಿಕಂಠ ರಾಠೋಡ, ಶರಣಪ್ಪ ತಳವಾರ, ಚಂದ್ರಶೇಖರ ರೆಡ್ಡಿ, ವಿದ್ಯಾಸಾಗರ ಶಾಬಾದಿ, ದಯಾಘನ ಧಾರವಾಡಕರ, ಬಸವರಾಜ ಮಾಲಿ ಪಾಟೀಲ್, ವಿದ್ಯಾಸಾಗರ ಕುಲಕರ್ಣಿ, ಗಿರೀಶಗೌಡ ಇನಾಂದಾರ, ಮಲ್ಲಣ್ಣ ಕುಲಕರ್ಣಿ, ಅಣವೀರ ಪಾಟೀಲ್ ಸೇರಿದಂತೆ ಮತ್ತಿತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!