ಕೋವಿಡ್ ಪಾಸಿಟಿವ್ ಪ್ರಕರಣಗಳ ಲೆಕ್ಕ ಹಾಕುತ್ತ ಕೂರೋದನ್ನು ನಿಲ್ಲಿಸಿ ಅಂತಿದಾರೆ ದೇವಿಶೆಟ್ಟಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಹೃದ್ರೋಗ ತಜ್ಞ ದೇವಿಶೆಟ್ಟಿ ಅವರು ಕೋವಿಡ್ ಸನ್ನಿವೇಶದ ಬಗ್ಗೆ ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಗೆ ಲೇಖನವೊಂದನ್ನು ಬರೆದಿದ್ದಾರೆ. ಕರ್ನಾಟಕ ಸರ್ಕಾರಕ್ಕೆ ಕೋವಿಡ್ ಸನ್ನಿವೇಶದ ಬಗ್ಗೆ ಸಲಹೆ ಕೊಡುವ ತಜ್ಞರಲ್ಲಿ ಅವರೂ ಇದ್ದಾರಾದ್ದರಿಂದ ಅವರು ಏನು ಹೇಳುತ್ತಿದ್ದಾರೆ ಎಂಬುದು ಪ್ರಾಮುಖ್ಯ ಪಡೆಯುತ್ತದೆ.

ಸಾಮೂಹಿಕವಾಗಿ ಟೆಸ್ಟಿಂಗ್ ಮಾಡುತ್ತ ಕೂರುವುದು, ಪಾಸಿಟಿವ್ ಪ್ರಕರಣಗಳ ಲೆಕ್ಕ ಹಾಕುವುದು ಹಾಗೂ ಲಾಕ್ಡೌನ್ ಬಗ್ಗೆ ಯೋಚಿಸುವುದು ಇವೆಲ್ಲವನ್ನೂ ಬಿಡಬೇಕು ಎಂಬುದು ಅವರ ವಾದ. ಇದಕ್ಕೆ ಅವರು ಕೊಡುತ್ತಿರುವ ಕಾರಣ, ಕೋವಿಡ್ ಮೂರನೇ ಅಲೆಯಲ್ಲಿ ರೋಗಪತ್ತೆಯ ಪಾಸಿಟಿವಿಟಿ ದರ ಶೇ. 50 ದಾಟಿದಾಗಲೂ ಐಸಿಯು ಹಾಸಿಗೆಗಳು ಖಾಲಿ ಇವೆ. ಕೇವಲ 29 ಪ್ರಕರಣಗಳಷ್ಟೇ ಬೆಂಗಳೂರಲ್ಲಿ ಐಸಿಯು ಹಂತ ತಲುಪಿದ್ದು, ದೇಶದ ಉಳಿದೆಡೆಯೂ ಇದೇ ಸ್ಥಿತಿಯಾದ್ದರಿಂದ ಈ ನಿಟ್ಟಿನಲ್ಲಿ ತಲೆಕೆಡಿಸಿಕೊಳ್ಳಬೇಕಿಲ್ಲ.

ಶ್ರೀಮಂತ ಪಾಶ್ಚಾತ್ಯ ದೇಶಗಳಿಗೆ ಹೋಲಿಸಿದರೂ ಭಾರತವು ಕೋವಿಡ್ ನಿರ್ವಹಣೆಯಲ್ಲಿ ಎಲ್ಲರಿಗಿಂತ ಅದ್ಭುತ ಸಾಧನೆ ಮಾಡಿದೆ ಎಂದು ಕೊಂಡಾಡಿರುವ ದೇವಿಶೆಟ್ಟಿ, ಲಸಿಕೆಗಳು ಕೇವಲ ಕೋವಿಡ್ ವಿರುದ್ಧ ಅಲ್ಲ, ಸಾವಿನ ವಿರುದ್ಧ ಎಂದು 150 ಕೋಟಿ ಡೋಸುಗಳನ್ನು ಅತಿ ಕಡಿಮೆ ಸಮಯದಲ್ಲಿ ನೀಡಿರುವ ಭಾರತದ ಸಾಮರ್ಥ್ಯವನ್ನು ಪ್ರಶಂಸಿಸಿದ್ದಾರೆ.

ಶಾಲೆಗಳನ್ನು ಮುನ್ನೆಚ್ಚರಿಕೆಯಿಂದ ತೆರೆಯಬೇಕು ಆದರೆ ಆನ್ಲೈನ್ ಶಿಕ್ಷಣವನ್ನೂ ಮುಂದುವರಿಸಬೇಕು, ಪ್ರತಿ ರಾಜ್ಯವೂ ಮೈಕ್ರೋಬ್ ಗಳ ಮೇಲೆ ಸಂಶೋಧನೆ ನಡೆಸುವ ಕೇಂದ್ರವನ್ನು ಹೊಂದುವ ಜತೆ ಆರೋಗ್ಯ ಮೂಲಸೌಕರ್ಯಗಳಲ್ಲಿ ನಿರಂತರ ಅಭಿವೃದ್ಧಿ ಆಗಬೇಕಿದೆ ಎಂಬುದವರ ಅಭಿಮತ.

ಪಾಸಿಟಿವ್ ಪ್ರಕರಣಗಳ ಲೆಕ್ಕ ಹಾಕುತ್ತ ಕೂರುವುದು ಸಮಾಜದಲ್ಲಿ ಭಯ ಮತ್ತು ಅನಿಶ್ಚಿತತೆ ವಾತಾವರಣ ಸೃಷ್ಟಿಸುತ್ತದೆ. ಇದರಿಂದ ಉದ್ಯಮಗಳು ಮುಂದಕ್ಕೆ ಹೋಗುವುದೇ ಇಲ್ಲ. ಹೆಚ್ಚು ಟೆಸ್ಟಿಂಗ್ ಮಾಡಿ ಹೆಚ್ಚು ಪ್ರಕರಣಗಳನ್ನು ತೋರಿಸುವ ಕೆಲಸವನ್ನು ಈ ಹಂತದಲ್ಲಿ ಬಿಟ್ಟುಬಿಡಬೇಕು ಎಂಬ ವಾದ ದೇವಿಶೆಟ್ಟಿ ಅವರದ್ದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!