ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಜನರ ಕೋಟಿಗಟ್ಟಲೆ ತೆರಿಗೆ ಹಣವನ್ನು ಬಳಸಿಕೊಂಡು ಕಾಂಗ್ರೆಸ್ ಬೆಳಗಾವಿಯಲ್ಲಿ ಮಹಾಧಿವೇಶನ ಮಾಡಲು ಹೊರಟಿದೆ. ನಕಲಿ ಕಾಂಗ್ರೆಸ್ಸಿನ ಈ ನೀತಿಯ ವಿರುದ್ಧ ಹಾಗೂ ಬೆಳಗಾವಿಯಲ್ಲಿ ಕಾಂಗ್ರೆಸ್ ಮಹಾಧಿವೇಶನವನ್ನು ವಿರೋಧಿಸಿ ನಾಳೆ ಬೆಳಗ್ಗೆ 10:30ಕ್ಕೆ ಬೆಂಗಳೂರಿನ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದರು.
ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ-ವಿಧಾನಪರಿಷತ್ತಿನ ಬಿಜೆಪಿ ಸದಸ್ಯರು ಇದರಲ್ಲಿ ಭಾಗವಹಿಸುವರು ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಸಂವಿಧಾನಶಿಲ್ಪಿ ಅಂಬೇಡ್ಕರ್ ಅವರನ್ನು ಹೆಚ್ಚು ಹೆಚ್ಚಾಗಿ ಸ್ಮರಿಸಿಕೊಳ್ಳುತ್ತಿದೆ. ಆದರೆ, ಹಿಂದೆ ಕಾಂಗ್ರೆಸ್ ಪಕ್ಷವು ಅವಕಾಶ ಸಿಕ್ಕಿದಾಗಲೆಲ್ಲ ಅಂಬೇಡ್ಕರರನ್ನು ನಿಂದಿಸುತ್ತ, ಅವಮಾನಿಸುತ್ತ ಬಂದಿತ್ತು ಎಂದು ವಿಜಯೇಂದ್ರ ಟೀಕಿಸಿದರು.
ಜವಾಹರಲಾಲ್ ನೆಹರೂ ಅವರಿಂದ ಹಿಡಿದು ಇವತ್ತಿನವರೆಗೂ ಈ ಕಾಂಗ್ರೆಸ್ ಪಕ್ಷದವರು ಅಂಬೇಡ್ಕರರ ಬಗ್ಗೆ ಗೌರವ ಹೊಂದಿರಲಿಲ್ಲ ಎಂಬುದು ಜಗಜ್ಜಾಹೀರಾಗಿದೆ. ಹಿಂದೆ ನೆಹರೂ ಅವರು ಇದ್ದಾಗ ತಾತ್ಕಾಲಿಕ ಸರ್ಕಾರ ರಚಿಸಿದ್ದು, ಬಾಬಾಸಾಹೇಬ ಅಂಬೇಡ್ಕರ್ ಅವರು ಮಂತ್ರಿಗಳಾಗಿ ಜನಮೆಚ್ಚುವ ಕೆಲಸ ಮಾಡುತ್ತಿದ್ದರು. ಅವರ ಜನಪ್ರಿಯತೆ- ಪ್ರಭಾವ ಹೆಚ್ಚಾಗುವುದನ್ನು ಗಮನಿಸಿ, ಕಾಂಗ್ರೆಸ್ ಪಕ್ಷದ ಬೇಳೆ ಬೇಯುವುದಿಲ್ಲ ಎಂದು ಹೇಳಿ ಅವರನ್ನು ನಿಂದಿಸುವ, ಹಿಂಸಿಸುವ ಕೆಲಸ ಮಾಡಿದ್ದರು ಎಂದು ಆರೋಪಿಸಿದರು. ಇವರು ಪ್ರಾಮಾಣಿಕರೇ ಇದ್ದರೆ ಬಾಬಾಸಾಹೇಬರು ಸಚಿವ ಸಂಪುಟದಿಂದ ರಾಜೀನಾಮೆ ಕೊಡುವ ಪರಿಸ್ಥಿತಿ ಯಾಕೆ ಬಂತು ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷದವರು ಕೊಟ್ಟ ನೋವಿನಿಂದ ಅವರು ಸಚಿವ ಸಂಪುಟದಿಂದ ಹೊರಕ್ಕೆ ಬರಬೇಕಾಯಿತು ಎಂದು ವಿಜಯೇಂದ್ರ ವಿಶ್ಲೇಷಿಸಿದರು.
ಅಂಬೇಡ್ಕರರ ಸೇವಕರಾಗಿ ಕೆಲಸ ಮಾಡುತ್ತಿದ್ದ ಕಾಜೋಳ್ಕರ್‌ರನ್ನು ಅಂಬೇಡ್ಕರರ ವಿರುದ್ಧ ಸ್ಪರ್ಧಿಸಲು ಲೋಕಸಭಾ ಚುನಾವಣೆಯ ಅಭ್ಯರ್ಥಿ ಮಾಡಿ ಮನೆಮುರುಕತನವನ್ನು ಅಂದಿನ ಕಾಂಗ್ರೆಸ್ ಪಕ್ಷ ಮಾಡಿತ್ತು. ಕಾಂಗ್ರೆಸ್ ಪಕ್ಷದವರು ಲೋಕಸಭಾ ಚುನಾವಣೆಯಲ್ಲಿ ಅಂಬೇಡ್ಕರರನ್ನು ಸೋಲಿಸಿದ್ದೂ ಅಲ್ಲದೆ, ಕಾಜೋಳ್ಕರ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಕೊಟ್ಟ ಅಪಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದು ನುಡಿದರು.
ದೇಶ, ರಾಜ್ಯದಲ್ಲಿ ಇದೀಗ ಇರುವುದು ಅಸಲಿ ಕಾಂಗ್ರೆಸ್ ಪಕ್ಷವಲ್ಲ. ಇದು ನಕಲಿ ಕಾಂಗ್ರೆಸ್ ಪಕ್ಷ. ಮಹಾತ್ಮ ಗಾಂಧೀಜಿ ಮತ್ತು ಡಾ. ಅಂಬೇಡ್ಕರ್ ಅವರ ತತ್ವಗಳನ್ನು ಗಾಳಿಗೆ ತೂರಿದ ಪಕ್ಷ ಕಾಂಗ್ರೆಸ್ ಎಂದ ಅವರು, ಗಾಂಧೀಜಿ ಮತ್ತು ಅಂಬೇಡ್ಕರರ ಹೆಸರು ಹೇಳುವ ನೈತಿಕತೆ, ಯೋಗ್ಯತೆ ಕಾಂಗ್ರೆಸ್ಸಿಗರಿಗೆ ಇಲ್ಲ ಎಂದು ಆಕ್ಷೇಪಿಸಿದರು.