ಹೊಸ ದಿಗಂತ ವರದಿ, ಶಿವಮೊಗ್ಗ:
ಜಿಲ್ಲೆಯಲ್ಲಿ ಹೊಸ ವರ್ಷಾಚರಣೆ ಆಚರಿಸಲು ವ್ಯವಸ್ಥೆ ಮಾಡಿಕೊಂಡಿರುವ ಹೋಂ ಸ್ಟೇ, ರೆಸಾರ್ಟ್ ಗಳವರು ಕಡ್ಡಾಯವಾಗಿ ಪೊಲೀಸ್ ಅನುಮತಿ ಪಡೆಯಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಸೂಚನೆ ನೀಡಿದ್ದಾರೆ.
ನಗರದ ಡಿಎಆರ್ ಸಭಾಂಗಣದಲ್ಲಿ ಗುರುವಾರ ಜಿಲ್ಲೆಯ ಹೋಂ ಸ್ಟೇ ಹಾಗೂ ರೆಸಾರ್ಟ್ ಮಾಲೀಕರೊಂದಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಎಲ್ಲಿಯೇ ಹೊಸ ವರ್ಷಾಚರಣೆ ಆಚರಣೆ ಮಾಡುವುದಾದರೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಅನುಮತಿ ಪಡೆಯಬೇಕು ಎಂದು ತಿಳಿಸಿದರು.
ಹೊಸ ವರ್ಷಾಚರಣೆಗೆ ಮಾಡಿಕೊಂಡಿರುವ ತಯ್ಯಾರಿ, ಪೂರ್ವ ಸಿದ್ಧತೆ, ಎಷ್ಟು ಜನ ಪಾಲ್ಗೊಳ್ಳುತ್ತಾರೆ, ಕಾರ್ಯಕ್ರಮ ನಡೆಯುವ ಸ್ಥಳದ ಬಗ್ಗೆ ಮಾಹಿತಿ ನೀಡಬೇಕು. 100 ಜನ ಸಾಮರ್ಥ್ಯದ ಸ್ಥಳದಲ್ಲಿ 500 ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಲು ಅವಕಾಶ ಇಲ್ಲಎಂದು ಸೂಚಿಸಿದರು.
18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಮದ್ಯ ನೀಡಬೇಕು. ರಾತ್ರಿ 12 ರಿಂದ 1 ಗಂಟೆವರೆಗೆ ಮಾತ್ರ ಹೊರಾಂಗಣದಲ್ಲಿ ಕಾರ್ಯಕ್ರಮ ನಡೆಸಲು ಅವಕಾಶ ಇದೆ. ರಾತ್ರಿ 1 ಗಂಟೆ ನಂತರ ಪೊಲೀಸ್ ಸಿಬ್ಬಂದಿ ಡ್ರಂಕ್ ಅಂಡ್ ಡ್ರೈವ್ ಪರೀಕ್ಷೆ ನಡೆಸಲಿದ್ದಾರೆ ಎಂದರು.
ವರ್ಷಾಚರಣೆ ನಡೆಯುವ ಜಾಗದಲ್ಲಿ ಸಿಸಿಟಿವಿ ಹಾಕಿರಬೇಕು. ಅವು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸ್ಥಳೀಯ ಪೊಲೀಸರು ಬಂದು ಪರಿಶೀಲಿಸುತ್ತಾರೆ. ಯಾರಾದರೂ ದುರ್ವರ್ತನೆ ತೋರಿದರೆ 112 ಗೆ ಕರೆ ಮಾಡಬಹುದು. ಈಜುಕೊಳ ಇದ್ದಲ್ಲಿ ಸುರಕ್ಷತೆಗೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಎಎಸ್ಪಿ ಅನಿಲ್ ಕುಮಾರ್, ಕಾರಿಯಪ್ಪ, ಅಧಿಕಾರಿಗಳು ಇದ್ದರು.