ಹೊಸದಿಗಂತ ಧಾರವಾಡ:
ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಯಾಗಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟ ಈಗ ಮತ್ತಷ್ಟು ಉಗ್ರರೂಪ ಪಡೆದುಕೊಂಡಿದೆ. ‘ಸ್ವಾಭಿಮಾನಿ ಪಕ್ಷಾತೀತ ಸಮಿತಿ’ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಸತ್ಯಪ್ರತಿಪಾದನೆ ಸತ್ಯಾಗ್ರಹವು ಭಾನುವಾರ ತೀವ್ರಗೊಂಡಿದ್ದು, ಪ್ರತಿಭಟನಾಕಾರರು ನಗರದ ಪ್ರಮುಖ ಜ್ಯುಬ್ಲಿ ವೃತ್ತವನ್ನು ಸಂಪೂರ್ಣವಾಗಿ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ವೇಳೆ ಉದ್ರಿಕ್ತಗೊಂಡ ಹೋರಾಟಗಾರರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಸ್ಥಳೀಯ ಶಾಸಕ ಅರವಿಂದ ಬೆಲ್ಲದ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಇಬ್ಬರು ನಾಯಕರ ಭಾವಚಿತ್ರಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು, ಜ್ಯುಬ್ಲಿ ವೃತ್ತದಲ್ಲಿ ಕೆಲಕಾಲ ವಾಹನ ಸಂಚಾರವನ್ನು ತಡೆದು ರಸ್ತೆ ಬಂದ್ ಮಾಡಿದರು. ಇದರಿಂದಾಗಿ ಸ್ಥಳದಲ್ಲಿ ಸಂಚಾರ ದಟ್ಟಣೆ ಉಂಟಾಗಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಹೋರಾಟದ ನೇತೃತ್ವ ವಹಿಸಿದ್ದ ಪ್ರಮುಖ ಮುಖಂಡ ಅರವಿಂದ ಏಗನಗೌಡರ ಮಾತನಾಡಿ, “ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ನೀಡುವ ವಿಷಯದಲ್ಲಿ ಬಿಜೆಪಿ ನಾಯಕರು ದ್ವಂದ್ವ ನಿಲುವನ್ನು ಹೊಂದಿದ್ದಾರೆ. ಹಾದಿ ತಪ್ಪಿಸುವ ಪತ್ರದ ಕಳ್ಳಾಟವನ್ನು ಬಿಟ್ಟು, ಪ್ರತ್ಯೇಕ ಪಾಲಿಕೆ ರಚನೆಯ ಪ್ರಸ್ತಾವನೆಗೆ ರಾಜ್ಯಪಾಲರ ಅಂಕಿತ ಬೀಳುವಂತೆ ಮಾಡಲು ಅವರು ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಬೃಹತ್ ಪ್ರತಿಭಟನೆಯಲ್ಲಿ ಸ್ವಾಭಿಮಾನಿ ಪಕ್ಷಾತೀತ ಸಮಿತಿಯ ಪ್ರಮುಖ ಮುಖಂಡರಾದ ಈಶ್ವರ ಶಿವಳ್ಳಿ, ಪರಮೇಶ್ವರ ಕಾಳೆ, ಶಿವಶಂಕರ ಹಂಪಣ್ಣವರ, ಪ್ರಕಾಶ ಘಾಟಗೆ ಹಾಗೂ ದಾನಪ್ಪ ಕಬ್ಬೇರ ಸೇರಿದಂತೆ ನೂರಾರು ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾಗವಹಿಸಿ ಧಾರವಾಡದ ಸ್ವಾಭಿಮಾನಕ್ಕಾಗಿ ಧ್ವನಿ ಎತ್ತಿದರು.



