September 24, 2026
Thursday, September 24, 2026
spot_img

ಧಾರವಾಡದ ಖ್ಯಾತ ಮನೋವೈದ್ಯ ಡಾ. ಆನಂದ‌ ಪಾಂಡುರಂಗಿ ಇನ್ನಿಲ್ಲ

ಹೊಸದಿಗಂತ ವರದಿ ಧಾರವಾಡ:

ನಗರದ ಖ್ಯಾತ ಮನೋವೈದ್ಯ, ಸಮಾಜ ಸೇವಕ, ಸಾಹಿತ್ಯ-ಸಾಂಸ್ಕೃತಿಕ ವಲಯದ ಮಾರ್ಗದರ್ಶಿ ಡಾ. ಆನಂದ ಪಾಂಡುರಂಗಿ (74) ಗುರುವಾರ ನಿಧನ ಹೊಂದಿದರು.

ಕಳೆದ ಕೆಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಗುರುವಾರ ಅಸುನೀಗಿದರು. ಇವರಿಗೆ ಪತ್ನಿ, ಪುತ್ರ ಮತ್ತು ಅಪಾರ ಬಳಗವಿದೆ.

ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಮಾನಸಿಕ ಆರೋಗ್ಯ ಜಾಗೃತಿ ಮೂಡಿಸುವಲ್ಲಿ ಡಾ. ಆನಂದ ಪಾಂಡುರಂಗಿ ಅವರ ಪಾತ್ರ ಹಿರಿದಾದುದು. ದಶಕಗಳ ಕಾಲ ಸಾವಿರಾರು ರೋಗಿಗಳಿಗೆ ರಿಯಾಯಿತಿ ದರದಲ್ಲಿ ಹಾಗೂ ಉಚಿತವಾಗಿ ಮಾನಸಿಕ ಚಿಕಿತ್ಸೆ ನೀಡುವ ಮೂಲಕ ಪ್ರೀತಿಯ ‘ಜನಪ್ರಿಯ ವೈದ್ಯ’ ಎನಿಸಿಕೊಂಡಿದ್ದರು.

ಕೇವಲ ವೈದ್ಯಕೀಯ ಕ್ಷೇತ್ರಕ್ಕಷ್ಟೇ ಸೀಮಿತವಾಗದೆ ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರ ನಿಧನಕ್ಕೆ ಉತ್ತರ ಕರ್ನಾಟಕದ ವೈದ್ಯಕೀಯ ಕ್ಷೇತ್ರ, ಸಾಹಿತಿಗಳು, ರಂಗಕರ್ಮಿಗಳು ಹಾಗೂ ಗಣ್ಯರು ತೀವ್ರ ಕಂಬನಿ ಮಿಡಿದಿದ್ದಾರೆ.

ಅಂತಿಮ ದರುಶನ ಮತ್ತು ಸಂಸ್ಕಾರ:

ಮೃತರ ಪಾರ್ಥಿವ ಶರೀರದ ಅಂತಿಮ ದರುಶನಕ್ಕೆ ಧಾರವಾಡದ ಅವರ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ವೇಳೆಗೆ ಕುಟುಂಬದ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !