ಮಾರಕ ರೋಗಗಳ ವಿರುದ್ಧ ಹೋರಾಡಲು ಮಿಷನ್ ಇಂದ್ರಧನುಷ್ ಯಶಸ್ವಿಗೆ ಡಿಎಚ್‌ಒ ಸೂಚನೆ

ಹೊಸದಿಗಂತ ವರದಿ ಚಿತ್ರದುರ್ಗ: 

ಜಿಲ್ಲೆಯ ಎಲ್ಲಾ ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ನೂರಕ್ಕೆ ನೂರರಷ್ಟು 12 ಮಾರಕ ರೋಗಗಳ ವಿರುದ್ಧ ಲಸಿಕೆಯನ್ನು ತಪ್ಪದೆ ನೀಡಿ, ಮಿಷನ್ ಇಂದ್ರಧನುಷ್ 5.0 ಮೂರನೇ ಸುತ್ತನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೂಚಿಸಿದರು.

ನಗರದ ಚೇಳುಗುಡ್ಡ ಮಾರಮ್ಮನ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಮಿಷನ್ ಇಂದ್ರ ಧನುಷ್ 5.0 ಲಸಿಕಾ ಅಭಿಯಾನಕ್ಕೆ  ಚಾಲನೆ ನೀಡಿ ಮಾತನಾಡಿದ ಅವರು, ಲಸಿಕೆ ವಂಚಿತರನ್ನು ಗುರಿತಿಸಿ ಎಲ್ಲಾ ಗರ್ಭಿಣಿಯರು ಹಾಗೂ ಮಕ್ಕಳಿಗೆ ತಪ್ಪದೇ ಲಸಿಕೆಯನ್ನು ನೀಡಬೇಕು ಎಂದರು.

ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಅಭಿನವ ಮಾತನಾಡಿ, ಚಿತ್ರದುರ್ಗ ಜಿಲ್ಲೆಯಲ್ಲಿ ಈ ಮಿಷನ್‌ ಕುರಿತಂತೆ ಮನೆ, ಮನೆ ಸಮೀಕ್ಷೆ ನಡೆಸಿ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಈ ಬಗ್ಗೆ ಜಿಲ್ಲಾ ಹಂತದಲ್ಲಿ ಹಾಗೂ ತಾಲ್ಲೂಕು ಹಂತದಲ್ಲಿ ತರಬೇತಿ ನೀಡಲಾಗಿದೆ. ಸೂಕ್ಷ್ಮ ಕ್ರಿಯಾ ಯೋಜನೆಯಂತೆ 825 ಗರ್ಭಿಣಿಯರಿಗೆ, 0-2 ವರ್ಷದ ಒಳಗಿನ 3416 ಮಕ್ಕಳಿಗೆ, 2 ರಿಂದ 5 ವರ್ಷದ 620 ಮಕ್ಕಳ ಗುರಿಯನ್ನು ಹೊಂದಲಾಗಿದೆ ಎಂದರು.

ಮೂರನೇ ಸುತ್ತಿನ ಲಸಿಕಾ ಕಾರ್ಯಕ್ರಮ ದಿನಾಂಕ ಅ.9ರಿಂದ 14 ರವರೆಗೆ ಆರು ದಿನಗಳ ಕಾಲ ನಡೆಯಲಿದೆ. ಈ ಅವಧಿಯಲ್ಲಿ ಎಲ್ಲರಿಗೂ ಲಸಿಕೆ ನೀಡಲಾಗುವುದು.

ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿ, ತಾಲ್ಲೂಕಿನಲ್ಲಿ ಈ ದಿನ 25 ಲಸಿಕಾ ಸತ್ರಗಳು ಏಕಕಾಲದಲ್ಲಿ ನಡೆಯಲಿವೆ. ಫಲಾನುಭವಿ ಮಕ್ಕಳ ಮತ್ತು ಗರ್ಭಿಣಿಯರ ಲಸಿಕೆ ಪಡೆದ ದಾಖಲಾತಿಗಳನ್ನು ಯೂವಿನ್ ಪೋರ್ಟಲ್‌ನಲ್ಲಿ ದಾಖಲಿಸಲಾಗುತ್ತದೆ. ಎಲ್ಲರೂ ತಪ್ಪದೇ ನಿಮ್ಮ ಮಕ್ಕಳಿಗೆ ಲಸಿಕೆಯನ್ನು ಕೊಡಿಸಿ ಎಂದು ಮನವಿ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!