ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಸೀಸನ್ ನಿರ್ಣಾಯಕ ಹಂತಕ್ಕೆ ತಲುಪಿದೆ. ಈ ಬಾರಿಯ ಆವೃತ್ತಿಯಲ್ಲಿ ಲೀಗ್ ಹಂತ ಮುಗಿಯಲು ಕೇವಲ ಕೆಲವೇ ಪಂದ್ಯಗಳು ಬಾಕಿ ಉಳಿದಿದ್ದು, ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳು ಒಂದು ದೊಡ್ಡ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದಾರೆ. ಅದುವೇ- “ಧೋನಿ ಯಾವಾಗ ಆಡುತ್ತಾರೆ?”
ಈ ಆವೃತ್ತಿಯಲ್ಲಿ ಸಿಎಸ್‌ಕೆ ಈಗಾಗಲೇ 11 ಪಂದ್ಯಗಳನ್ನು ಆಡಿದ್ದು, ಪ್ಲೇ ಆಫ್ ಹಂತಕ್ಕೇರಲು ಮುಂದಿನ ಮೂರೂ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ. ಅಷ್ಟೇ ಅಲ್ಲದೆ, ಇತರ ತಂಡಗಳ ಫಲಿತಾಂಶದ ಮೇಲೆಯೂ ‘ಯೆಲ್ಲೋ ಆರ್ಮಿ’ ಅವಲಂಬಿತವಾಗಿದೆ. ಗಾಯದ ಸಮಸ್ಯೆಯಿಂದಾಗಿ ಮಹೇಂದ್ರ ಸಿಂಗ್ ಧೋನಿ ಅವರು ಈವರೆಗೂ ಒಂದೂ ಪಂದ್ಯದಲ್ಲಿ ಕಣಕ್ಕಿಳಿದಿಲ್ಲ ಎಂಬುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು.
ಇದೀಗ ಧೋನಿ ಅಭಿಮಾನಿಗಳಿಗೆ ಸಮಾಧಾನಕರ ಸುದ್ದಿಯೊಂದು ಹೊರಬಿದ್ದಿದೆ. ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧದ ಮುಂದಿನ ಪಂದ್ಯಕ್ಕಾಗಿ ಚೆನ್ನೈ ತಂಡವು ಲಕ್ನೋಗೆ ಪ್ರಯಾಣ ಬೆಳೆಸಿದೆ. ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಅವರ ಮಾಹಿತಿ ಪ್ರಕಾರ, ತಂಡಕ್ಕಾಗಿ ಕಾಯ್ದಿರಿಸಲಾದ 60 ವಿಮಾನದ ಟಿಕೆಟ್‌ಗಳಲ್ಲಿ ಧೋನಿ ಕೂಡ ಒಬ್ಬರಾಗಿದ್ದಾರೆ. ಅಂದರೆ ಧೋನಿ ತಂಡದ ಸದಸ್ಯರೊಂದಿಗೆ ಲಕ್ನೋ ತಲುಪಲಿದ್ದಾರೆ. ಆದರೆ, ಅವರು ಪ್ಲೇಯಿಂಗ್ ಇಲೆವೆನ್‌ನಲ್ಲಿ ಕಾಣಿಸಿಕೊಳ್ಳುತ್ತಾರೆಯೇ ಎಂಬುದು ಇನ್ನೂ ಸಸ್ಪೆನ್ಸ್ ಆಗಿದೆ.
ಒಂದು ವೇಳೆ ಲಕ್ನೋ ವಿರುದ್ಧದ ಪಂದ್ಯಕ್ಕೆ ಧೋನಿ ಅಲಭ್ಯರಾದರೆ, ಮೇ 18 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಅವರು ಆಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಇದು ಸಿಎಸ್ಕೆಯ ತವರು ಮೈದಾನವಾದ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುವ ಈ ಸೀಸನ್‌ನ ಕೊನೆಯ ಲೀಗ್ ಪಂದ್ಯವಾಗಿದೆ. ವೃತ್ತಿಜೀವನದ ಅಂತ್ಯದಲ್ಲಿರುವ ಧೋನಿ, ತಮ್ಮ ನೆಚ್ಚಿನ ‘ಚೆಪಾಕ್’ ಮೈದಾನದಲ್ಲಿ ಕೊನೆಯ ಪಂದ್ಯವಾಡಿ ಐಪಿಎಲ್‌ಗೆ ವಿದಾಯ ಹೇಳುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಧೋನಿ ಅಂಗಳಕ್ಕಿಳಿಯಲಿ ಎಂದು ಪ್ರಾರ್ಥಿಸುತ್ತಿರುವ ಕೋಟ್ಯಾಂತರ ಅಭಿಮಾನಿಗಳು, ಶೀಘ್ರದಲ್ಲೇ ಅವರ ಸಿಕ್ಸರ್ ಆರ್ಭಟ ನೋಡಲು ಕಾತರದಿಂದ ಕಾಯುತ್ತಿದ್ದಾರೆ.



