May 25, 2026
Monday, May 25, 2026
spot_img

‘ಧುರಂಧರ್ 2’ ಓಟಿಟಿ ಬಿಡುಗಡೆಗೆ ಸಜ್ಜು: ಈ ಬಾರಿ ಒಂದಲ್ಲ, ಎರಡು ಪ್ಲಾಟ್‌ಫಾರ್ಮ್‌ಗಳಲ್ಲಿ ರಣ್ವೀರ್ ಹವಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆದಿತ್ಯ ಧರ್ ನಿರ್ದೇಶನದ, ರಣ್ವೀರ್ ಸಿಂಗ್ ನಟನೆಯ ‘ಧುರಂಧರ್ 2: ದಿ ರಿವೆಂಜ್’ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸುತ್ತಿದೆ. ಈಗಾಗಲೇ ಭಾರತೀಯ ಚಿತ್ರರಂಗದ ಹಲವು ದಾಖಲೆಗಳನ್ನು ಪುಡಿಪುಡಿ ಮಾಡಿರುವ ಈ ಸಿನಿಮಾ, ಈಗ ಓಟಿಟಿ ಅಂಗಳಕ್ಕೆ ಕಾಲಿಡಲು ಸಿದ್ಧವಾಗುತ್ತಿದೆ. ವಿಶೇಷವೆಂದರೆ, ಈ ಸಿನಿಮಾ ಈ ಬಾರಿ ಕೇವಲ ಒಂದು ಓಟಿಟಿ ಪ್ಲಾಟ್‌ಫಾರ್ಮ್‌ಗೆ ಸೀಮಿತವಾಗದೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಅಬ್ಬರಿಸಲು ದೊಡ್ಡ ಪ್ಲಾನ್ ಮಾಡಿಕೊಂಡಿದೆ.

ಸಿನಿಮಾ ಮೂಲಗಳ ಪ್ರಕಾರ, ‘ಧುರಂಧರ್ 2’ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಜಿಯೋ ಹಾಟ್​​ಸ್ಟಾರ್ ಬರೋಬ್ಬರಿ 150 ಕೋಟಿ ರೂಪಾಯಿಗಳಿಗೆ ತನ್ನದಾಗಿಸಿಕೊಂಡಿದೆ ಎನ್ನಲಾಗಿದೆ. ಈ ಚಿತ್ರದ ಮೊದಲ ಭಾಗ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿತ್ತು. ಆದರೆ, ಎರಡನೇ ಭಾಗದ ವಿತರಣೆ ಮತ್ತು ನಿರ್ಮಾಣದಲ್ಲಿ ಜಿಯೋ ಸ್ಟುಡಿಯೋಸ್ ಪಾಲುದಾರಿಕೆ ಇರುವುದರಿಂದ, ಸಹಜವಾಗಿಯೇ ಜಿಯೋ ಹಾಟ್​​ಸ್ಟಾರ್‌ನಲ್ಲಿ ಮೊದಲು ಸ್ಟ್ರೀಮಿಂಗ್ ಆಗಲಿದೆ.

ಜಿಯೋ ಹಾಟ್​​ಸ್ಟಾರ್ ಜೊತೆಗೆ ಈ ಬಾರಿ ನೆಟ್‌ಫ್ಲಿಕ್ಸ್ ಕೂಡ ಈ ರೇಸ್‌ನಲ್ಲಿದೆ. ಜಾಗತಿಕ ಪ್ರೇಕ್ಷಕರನ್ನು ತಲುಪುವ ಉದ್ದೇಶದಿಂದ ಚಿತ್ರತಂಡ ನೆಟ್‌ಫ್ಲಿಕ್ಸ್ ಜೊತೆಗೂ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ. ರಾಜಮೌಳಿ ನಿರ್ದೇಶನದ ‘RRR’ ಸಿನಿಮಾ ಹೇಗೆ ಎರಡು ಓಟಿಟಿಗಳಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿತ್ತೋ, ಅದೇ ಮಾದರಿಯನ್ನು ‘ಧುರಂಧರ್ 2’ ಅನುಸರಿಸುವ ಸಾಧ್ಯತೆ ಇದೆ.

ಸದ್ಯ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಕಾರಣ, ಓಟಿಟಿ ಬಿಡುಗಡೆಯನ್ನು ಸ್ವಲ್ಪ ಮುಂದೂಡಲಾಗಿದೆ. ಮೇ ತಿಂಗಳ ಮಧ್ಯಭಾಗದಲ್ಲಿ ಅಥವಾ ಐಪಿಎಲ್ ಮುಗಿದ ನಂತರ ಈ ಸಿನಿಮಾ ಡಿಜಿಟಲ್ ಪರದೆಯ ಮೇಲೆ ಬರಲಿದೆ ಎಂದು ಅಂದಾಜಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !