ಉಕ್ರೇನ್ ಸ್ಥಿತಿ ನೋಡಿ ಚೀನಾ ಸಹ ತೈವಾನ್ ಮೇಲೆ ದಾಳಿ ಮಾಡೀತಾ?

ಹೊಸ ದಿಗಂತ ಡಿಜಿಟಲ್ ಡೆಸ್ಕ್
ಉಕ್ರೇನ್ ಸಂಘರ್ಷದಲ್ಲಿ ಒಂದು ವಿಷಯ ಜಗತ್ತಿನೆದುರು ಜಾಹೀರಾಗಿಹೋಗಿದೆ. ಅದೇನೆಂದರೆ, ಅಮೆರಿಕ ಮತ್ತು ಪಾಶ್ಚಾತ್ಯ ರಾಷ್ಟ್ರಗಳ ಅಬ್ಬರ ಮಾಧ್ಯಮಗಳಲ್ಲಿ ಮಾತ್ರ, ರಣಾಂಗಣದಲ್ಲಲ್ಲ ಅನ್ನೋದು! ರಷ್ಯದ ವಿರುದ್ಧ ಆರ್ಥಿಕ ನಿರ್ಬಂಧಗಳ ಕತೆ ಏನೇ ಇದ್ದರೂ ಪಾಶ್ಚಾತ್ಯ ಪಡೆಗಳು ಉಕ್ರೇನ್ ಪರ ಸೆಣೆಸುವುದಕ್ಕೇನೂ ಮುಂದಾಗಲಿಲ್ಲ. ಉಕ್ರೇನ್ ರಷ್ಯವನ್ನು ಎದುರುಹಾಕಿಕೊಂಡಿದ್ದೇ ನ್ಯಾಟೊ ಪಡೆಯನ್ನು ನಂಬಿಕೊಂಡು.
ಇವೆಲ್ಲವೂ ರಷ್ಯ ಹೊರತಾಗಿ ಮತ್ತೊಂದು ದೇಶಕ್ಕೆ ಮಹದಾನಂದವನ್ನು ತಂದಿರುವ ಸಾಧ್ಯತೆ ಇದೆ. ಆ ದೇಶವೇ ಚೀನಾ. ಇದಕ್ಕಾಗುತ್ತಿರುವ ಆನಂದ ತೈವಾನ್ ಕುರಿತಾದದ್ದು.
ತೈವಾನ್ ಅನ್ನು ಆಕ್ರಮಿಸಿಕೊಂಡು ತನ್ನಲ್ಲಿ ವಿಲೀನವಾಗಿಸಬೇಕು ಎಂಬ ಗುರಿ ಚೀನಾದ್ದು. ಇವತ್ತಿಗೂ ಅದರ ಯುದ್ಧವಿಮಾನಗಳು ಸಾಕಷ್ಟು ಬಾರಿ ತೈವಾನ್ ವಾಯುಗಡಿಯನ್ನು ಉಲ್ಲಂಘಿಸಿ ಬೆದರಿಸಿಕೊಂಡಿವೆ. ಅತ್ತ ತೈವಾನ್ ಸಹ ತಾನೇ ನಿಜವಾದ ಚೀನಾ ಎಂದು ಪ್ರತಿಪಾದಿಸಿಕೊಂಡಿದೆ.
ಇಂಥ ತೈವಾನ್ ಅನ್ನು ಬಲವಂತವಾಗಿ ವಿಲೀನಗೊಳಿಸುವುದಕ್ಕೆ ಚೀನಾ ಇನ್ನೂ ಸಮಯ ನೋಡುತ್ತಿರುವುದು ಏಕೆಂದರೆ ಅಮೆರಿಕ ಸೇರಿದಂತೆ ಇಡೀ ಜಗತ್ತು ತನ್ನ ವಿರುದ್ಧ ತಿರುಗಿಬಿದ್ದರೆ ಕಷ್ಟ ಎಂಬ ಕಾರಣಕ್ಕೆ. ಅಮೆರಿಕವು ತೈವಾನ್ ಮಿಲಿಟರಿಗೆ ಸಾಕಷ್ಟು ಸಹಾಯವನ್ನೂ ಮಾಡಿದೆ. ಆದರೆ, ಉಕ್ರೇನ್ ವಿಚಾರದಲ್ಲಿ ಕೇವಲ ಆರ್ಥಿಕ ಕ್ರಮಗಳಿಗಷ್ಟೇ ಸೀಮಿತವಾಗಿ ಮಿಲಿಟರಿ ನೆಲೆಯಲ್ಲಿ ಸಹಾಯಕ್ಕೆ ಹೋಗದೇ ಇರುವ ಅಮೆರಿಕ ಮತ್ತು ಯುರೋಪಿನ ರಾಷ್ಟ್ರಗಳ ಕ್ರಮ ಚೀನಾಕ್ಕೆ ಒಳಗೊಳಗೇ ಉತ್ತೇಜನ ಕೊಟ್ಟಿದ್ದರೆ ಆಶ್ಚರ್ಯವೇನಿಲ್ಲ. ರಷ್ಯವು ಉಕ್ರೇನ್ ವಿಚಾರದಲ್ಲಿ ಸಾಧಿಸಿದ್ದನ್ನೇ ತಾನೂ ತೈವಾನ್ ವಿಚಾರದಲ್ಲಿ ಸಾಧಿಸಬಹುದು ಎಂಬ ಧೈರ್ಯ ಚೀನಾಕ್ಕೆ ಬಂದರೆ ಮತ್ತೊಂದು ಯುದ್ಧ ಪಕ್ಕಾ
ಉಕ್ರೇನ್ ನಷ್ಟು ಸುಲಭವಲ್ಲ ತೈವಾನ್ ಲೆಕ್ಕಾಚಾರ
ಆದರೆ ಉಕ್ರೇನ್ ಗಿಂತ ಸಂಕೀರ್ಣತೆ ತೈವಾನ್ ವಿಚಾರದಲ್ಲಿದೆ. ತೈವಾನ್ ಏನಾದರೂ ದಾಳಿಗೊಳಗಾದರೆ ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳು ಮಿಲಿಟರಿ ನೆಲೆಯಲ್ಲಿ ಸಹ ಸಹಾಯಕ್ಕೆ ನುಗ್ಗಬಹುದಾದ, ಚೀನಾವನ್ನು ಎದುರಿಸಿ ನಿಲ್ಲಬಹುದಾದ ಸಾಧ್ಯತೆ ಇದೆ.
ಇದಕ್ಕೆ ಪ್ರಬಲ ಎರಡು ಕಾರಣಗಳಿವೆ.
ತೈವಾನ್ ಏನಾದರೂ ಚೀನಾ ಕೈವಶವಾದರೆ ದಕ್ಷಿಣ ಚೀನಾ ಸಮುದ್ರ ಮಾರ್ಗದಲ್ಲಿ ಜಾಗತಿಕ ನೌಕೆಗಳ ಸಂಚಾರವೇ ಕಷ್ಟಸಾಧ್ಯವಾಗುವುದರಿಂದ ಅದನ್ನುಳಿಸಿಕೊಳ್ಳುವುದು ಎಲ್ಲರ ತುರ್ತು.
ಎರಡನೇ ಬಹುಮುಖ್ಯ ಕಾರಣ ಎಂದರೆ ಭಾರತವೂ ಸೇರಿದಂತೆ ಜಗತ್ತಿನ ಬಹುದೊಡ್ಡ ಸೆಮಿಕಂಡಕ್ಟರ್ ಬೇಡಿಕೆಯನ್ನು ಈಡೇರಿಸುತ್ತಿರುವುದು ತೈವಾನ್. ಇದು ಚೀನಾದ ವಶಕ್ಕೆ ಹೋಗುವುದು ಎಂದಾದರೆ ಒಂದು ಅತ್ಯಗತ್ಯ ಪೂರೈಕೆ ಸರಪಳಿಯನ್ನೇ ಜಗತ್ತು ಕಳೆದುಕೊಳ್ಳುತ್ತದೆಯಾದ್ದರಿಂದ, ತೈವಾನ್ ವಿಚಾರದಲ್ಲಿ ಅಮೆರಿಕ ಸೇರಿದಂತೆ ಎಲ್ಲರಿಗೂ ನಿರ್ಣಾಯಕವಾಗಿ ಹೋರಾಡಲೇಬೇಕಾದ ಸ್ಥಿತಿ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!