ಮೋದಿ, ಅಮಿತ್​ ಶಾ ಬ್ಯಾಗ್‌ಗಳನ್ನು ಚೆಕ್ ಮಾಡಿದ್ದೀರಾ?: ತಪಾಸಣೆಗೆ ಬಂದ ಅಧಿಕಾರಿಗಳಿಗೆ ಉದ್ಧವ್ ಠಾಕ್ರೆ ಪ್ರಶ್ನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಮಹಾರಾಷ್ಟ್ರ ಚುನಾವಣೆಯಲ್ಲಿ ಗೆಲ್ಲಲು ರಾಜಕೀಯ ಪಕ್ಷಗಳ ನಾಯಕರು ಬಿರುಸಿನ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇದರ ನಡುವೆ ಶಿವಸೇನಾ(UBT) ನಾಯಕ ಹಾಗೂ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರ ಮಾತು ವಿವಾದವನ್ನು ಹುಟ್ಟುಹಾಕುತ್ತಿದೆ.

ಪ್ರಚಾರಕ್ಕಾಗಿ ಯವತ್ಮಾಲ್​ಗೆ ತೆರಳಿದಾಗ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಬ್ಯಾಗ್ ಅನ್ನು ಸರ್ಕಾರಿ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಬ್ಯಾಗ್‌ಗಳನ್ನು ಪರಿಶೀಲಿಸುತ್ತೀರಾ ಎಂದು ಸರ್ಕಾರಿ ಅಧಿಕಾರಿಗಳನ್ನು ಅವರು ಪ್ರಶ್ನಿಸಿದ್ದಾರೆ.

ಉದ್ಧವ್ ಠಾಕ್ರೆ ಅವರು ಹೆಲಿಕಾಪ್ಟರ್ ಮೂಲಕ ವಾನಿ ತಲುಪಿದಾಗ ಸರ್ಕಾರಿ ಅಧಿಕಾರಿಗಳು ತಮ್ಮ ಬ್ಯಾಗ್ ಅನ್ನು ಪರಿಶೀಲಿಸಿದರು. ಪಕ್ಷದ ಕಾರ್ಯಕರ್ತರು ಮತ್ತು ಮತದಾರರನ್ನು ಪರಿಶೀಲಿಸುವ ಅಧಿಕಾರಿಗಳ ಪಾಕೆಟ್‌ಗಳು ಮತ್ತು ಗುರುತಿನ ಚೀಟಿಗಳನ್ನು ಪರಿಶೀಲಿಸುವಂತೆ ಅವರು ಹೇಳಿದರು.

ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಶಿವಸೇನಾ(ಯುಬಿಟಿ) ಅಭ್ಯರ್ಥಿ ಸಂಜಯ್ ದೇರ್ಕರ್ ಪರ ಪ್ರಚಾರ ಮಾಡಲು ಉದ್ಧವ್ ಠಾಕ್ರೆ ಯವತ್ಮಾಲ್ ಜಿಲ್ಲೆಯ ವಾನಿ ತಲುಪಿದ್ದರು. ಹೆಲಿಕಾಪ್ಟರ್‌ನಿಂದ ಕೆಳಗಿಳಿದ ಕೂಡಲೇ ಚುನಾವಣಾ ಆಯೋಗದ ಸಿಬ್ಬಂದಿ ಅವರ ಬ್ಯಾಗ್‌ ಪರಿಶೀಲಿಸಿದರು.

ಈ ವೇಳೆ ಚುನಾವಣಾ ಅಧಿಕಾರಿಗಳ ಮೇಲೆ ನನಗೆ ಕೋಪವಿಲ್ಲ. ಅವರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ನನ್ನ ಜವಾಬ್ದಾರಿಯನ್ನೂ ನಿಭಾಯಿಸುತ್ತೇನೆ. ನನ್ನ ಬ್ಯಾಗ್ ಚೆಕ್ ಮಾಡಿದ ರೀತಿ ಮೋದಿ, ಅಮಿತ್​ ಶಾ ಅವರ ಬ್ಯಾಗ್ ಗಳನ್ನೂ ಚೆಕ್ ಮಾಡಿದ್ದೀರಾ ಎಂದು ಎಂದು ಠಾಕ್ರೆ ಪ್ರಶ್ನಿಸಿದರು.

ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿಗಳಾದ ಅಜಿತ್ ಪವಾರ್ ಮತ್ತು ದೇವೇಂದ್ರ ಫಡ್ನವಿಸ್ ಅವರ ಬ್ಯಾಗ್‌ಗಳನ್ನು ಪರಿಶೀಲಿಸಬಾರದೇ? ಎಲ್ಲಾ ಅನುಪಯುಕ್ತ ಕೆಲಸಗಳು ನಡೆಯುತ್ತಿವೆ. ನಾನು ಇದನ್ನು ಪ್ರಜಾಪ್ರಭುತ್ವ ಎಂದು ಪರಿಗಣಿಸುವುದಿಲ್ಲ, ಇದು ಪ್ರಜಾಪ್ರಭುತ್ವವಲ್ಲ. ಏಕೆಂದರೆ ಪ್ರಜಾಪ್ರಭುತ್ವದಲ್ಲಿ ಯಾರೂ ದೊಡ್ಡವರಲ್ಲ, ಚಿಕ್ಕವರಲ್ಲ. ಚುನಾವಣಾ ಅಧಿಕಾರಿಗಳು ಆಡಳಿತಾರೂಢ ಮೈತ್ರಿಕೂಟದ ನಾಯಕರ ಬ್ಯಾಗ್‌ಗಳನ್ನು ಪರಿಶೀಲಿಸದಿದ್ದರೆ, ಶಿವಸೇನೆ (ಉದ್ಧವ್) ಮತ್ತು ಮಹಾವಿಕಾಸ್ ಅಘಾಡಿ ಕಾರ್ಯಕರ್ತರು ಅವುಗಳನ್ನು ಪರಿಶೀಲಿಸುತ್ತಾರೆ ಎಂದು ಎಚ್ಚರಿಸಿದರು.

ಆಡಳಿತ ಪಕ್ಷದ ಹಿರಿಯ ನಾಯಕರು ಪ್ರಚಾರಕ್ಕೆ ಬಂದಾಗ ಬ್ಯಾಗ್ ಚೆಕ್ ಮಾಡಿಕೊಳ್ಳುವ ಹಕ್ಕು ಮತದಾರರಿಗೂ ಇರುವುದರಿಂದ ಪೊಲೀಸರು ಹಾಗೂ ಚುನಾವಣಾ ಆಯೋಗ ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!