ಪಂಜಾಬ್‌ ಸರ್ಕಾರ ಸಾರ್ವಜನಿಕ ರಕ್ಷಣೆ ನೀಡಲು ವಿಫಲವಾಗಿದೆಯೇ? ಹಾಡುಹಗಲೇ ಮತ್ತೊಬ್ಬನ ಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಪ್ರಸಿದ್ಧ ಗಾಯಕ ಹಾಗೂ ಕಾಂಗ್ರೆಸ್‌ ಮುಖಂಡ ಸಿಧು ಮೂಸೆವಾಲಾ ಹತ್ಯೆಯ ಕರಾಳ ನೆನಪು ಮಾಸುವ ಮುನ್ನವೇ ಹಾಡುಹಗಲೇ ಇನ್ನೊಂದು ಕೊಲೆಗೆ ಪಂಜಾಬ್‌ ಸಾಕ್ಷಿಯಾಗಿದೆ.

ಪಂಜಾಬ್‌ ನ ಮೋಗಾ ಜಿಲ್ಲೆಯ ಬಧ್ನಿಕಾಲಾ ಪಟ್ಟಣದಲ್ಲಿ ಸಾರ್ವಜನಿಕರ ಕಣ್ಣೆದುರಲ್ಲೇ ಯುವಕನೊಬ್ಬನನ್ನು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲದೇ ನೋಡುಗರು ಈ ಘಟನೆಯನ್ನು ವಿಡಿಯೋ ರೆಕಾರ್ಡ್‌ ಮಾಡಿದ್ದಾರೆ. ಮೃತ ಯುವಕನ್ನು ಬಧ್ನಿಕಾಲಾ ನಿವಾಸಿ ದೇಸ್ರಾಜ್‌ ಅಲಿಯಾಸ್‌ ದೇಸು ಎಂದು ಗುರುತಿಸಲಾಗಿದೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಸರ್ಫರಾಜ್ ಆಲಂ ತಿಳಿಸಿದ್ದಾರೆ.

“ಈಗಾಗಲೇ ಕೆಲವು ಅಪರಾಧಿಗಳನ್ನು ಗುರುತಿಸಲಾಗಿದ್ದು ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು” ಎಂದು ವರಿಷ್ಟಾಧಿಕಾರಿ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ದಾಳಿಯಲ್ಲಿ ಗಾಯಗೊಂಡು ರಕ್ತಸಿಕ್ತನಾಗಿದ್ದ ಯುವಕ ಕೆಲಕಾಲ ರಸ್ತೆಯಲ್ಲೇ ಬಿದ್ದು ಒದ್ದಾಡುತ್ತಿದ್ದ. ನಂತರ ಅವನನ್ನು ಮೋಗಾದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ವೈದ್ಯರು ಆತನ್ನು ಮೃತ ಎಂದು ಘೋಷಿಸಿದರು ಎಂದು ವರದಿಗಳು ಹೇಳಿವೆ.

ಹಾಡುಹಗಲೇ ಈ ರೀತಿ ದಾಳಿಗಳು, ಮಾರಣಾಂತಿಕ ಹಲ್ಲೆಗಳು ಪಂಜಾಬ್‌ನಲ್ಲಿ ಹೆಚ್ಚಾಗಿದ್ದು ಸಾರ್ವಜನಿಕರಿಗೆ ರಕ್ಷಣೆ ನೀಡಲು ಪಂಜಾಬ್‌ ಸರ್ಕಾರ ವಿಫಲವಾಗಿದೆಯೇ ಎಂದು ಪ್ರಶ್ನೆಗಳು ಉದ್ಭವಿಸಲು ಕಾರಣವಾದಂತಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!