ಉತ್ತರಾಖಂಡದ ಸುರಂಗ ಕಾರ್ಮಿಕರು ಪಾರಾಗಿ ಬಂದಾರೆಯೇ? ಈವರೆಗಿನ ಬೆಳವಣಿಗೆಗಳೇನು?

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಉತ್ತರಾಖಂಡದ ಉತ್ತರಕಾಶಿಯಲ್ಲಿ ನಿರ್ಮಾಣವಾಗುತ್ತಿದ್ದ ಸುರಂಗಮಾರ್ಗ ಕುಸಿದು ಅದರೊಳಗೆ 41 ಮಂದಿ ಕಾರ್ಮಿಕರು ಸಿಕ್ಕಿಕೊಂಡಿರುವ ಘಟನೆಗೆ ಒಂದು ವಾರವೇ ಆಗಿಹೋಗಿದ್ದು, ರಕ್ಷಣೆಗೆ ಇನ್ನೆಷ್ಟು ದಿನಗಳೆಂಬ ಪ್ರಶ್ನೆ ಸಹಜವಾಗಿಯೇ ಎದ್ದಿದೆ.

ಈ ನಿಟ್ಟಿನಲ್ಲಿ ಉತ್ತರವಾಗಿ ತೋರುವುದು ತೈಲ್ಯಾಂಡಿನಲ್ಲಿ 2018ರಲ್ಲಿ ನಡೆದಿದ್ದ ಇಂಥದೇ ಒಂದು ಅವಘಡ. ಅಲ್ಲಿ ಸಿಕ್ಕಿಬಿದ್ದವರನ್ನು ರಕ್ಷಿಸಿ ತರುವುದಕ್ಕೆ 18 ದಿನಗಳು ಹಿಡಿದಿದ್ದವು. 2018ರ ಜೂನಿನಲ್ಲಿ ತೈಲ್ಯಾಂಡಿನ ಥಾಮ್ ಲುವಾಂಗ್ ಗುಹೆಗೆ 12 ಮಂದಿ ಫುಟ್ಬಾಲ್ ಆಟಗಾರರ ತಂಡವೊಂದು ತೆರಳಿತ್ತು. ಆಗ ಅತಿಯಾದ ಮಳೆ ಸುರಿದು ಗುಹೆಯೊಳಗೆ ಮಣ್ಣಿನ ಕುಸಿತವಾಗಿತ್ತು. 2,000 ಯೋಧರೂ ಸೇರಿದ ಹಾಗೆ ಸುಮಾರು 10,000 ನಾನಾ ಸಹಾಯಕರ ತಂಡವನ್ನು ಬಳಸಿ, 18 ದಿನಗಳ ನಂತರ ಆ ಹನ್ನೆರಡೂ ಮಂದಿಯನ್ನು ರಕ್ಷಣೆ ಮಾಡಲಾಗಿತ್ತು. ಆದರೆ ರಕ್ಷಣೆಯ ತಂಡದಲ್ಲಿದ್ದ ಇಬ್ಬರು ಪ್ರಾಣ ಕೊಟ್ಟಿದ್ದರು. ಈಗ ಲಭ್ಯವಿರುವ ಮಾಹಿತಿ ಪ್ರಕಾರ, ಭಾರತದ ರಕ್ಷಣಾ ತಂಡದಲ್ಲಿರುವ ಪರಿಣತರು ತೈಲ್ಯಾಂಡಿನ ಈ ಕಾರ್ಯಾಚರಣೆಯಲ್ಲಿದ್ದ ಪ್ರಮುಖರನ್ನು ಸಂಪರ್ಕಿಸಿ, ಅವರು ಹೇಗೆಲ್ಲ ಕಾರ್ಯಾಚರಣೆ ನಡೆಸಿದ್ದರು ಎಂಬ ಪೂರಕ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.

ಹೇಗಿದೆ ಉತ್ತರಕಾಶಿ ಸುರಂಗದ ಸ್ಥಿತಿ?

ಒಳಗೆ ಸಿಲುಕಿಕೊಂಡಿರೋ 41 ಮಂದಿಯ ಜೀವಕ್ಕೆ ಹಾನಿಯಾಗಿಲ್ಲ, ಅವರು ಪ್ರತಿಸ್ಪಂದಿಸುತ್ತಿದ್ದಾರೆ ಅನ್ನೋದು ಸಮಾಧಾನದ ವಿಚಾರವೇ ಆದರೂ, ಕಾರ್ಯಾಚರಣೆ ಹಲವು ಹಂತಗಳಲ್ಲಿ ಸವಾಲುಗಳನ್ನೆದುರಿಸುತ್ತಿರೋದನ್ನು ಗಮನಿಸಬೇಕು. ಆಡಳಿತ ವ್ಯವಸ್ಥೆ ರಕ್ಷಣಾ ಕಾರ್ಯಾಚರಣೆಯಲ್ಲಿ ತನ್ನೆಲ್ಲ ಶಕ್ತಿ ವ್ಯಯಿಸುತ್ತಿದೆ.

ನವೆಂಬರ್ 12ರ ಭಾನುವಾರ ಸುರಂಗದ ಒಂದು ಭಾಗ ಕುಸಿದು ಅತ್ತ ಕಾರ್ಯ ನಿರ್ವಹಿಸುತ್ತಿದ್ದವರೆಲ್ಲ ಬಂಧಿಯಾದರು. ಆಗಿಂದಲೇ ಕಾರ್ಯಾಚರಣೆಗಳು ಶುರು ಆದವು. ಸುರಂಗದಲ್ಲಿ ಕೆಲಸ ಮಾಡುತ್ತಿದ್ದವರಿಗೆ ನೀರು ತಲುಪಿಸುವುದಕ್ಕೆ ಹಾಕಿದ್ದ ಕೊಳವೆಯೇ ಪ್ರಾರಂಭದಲ್ಲಿ ಒಳಗೇನಾಗಿದೆ ಅಂತ ತಿಳಿದುಕೊಳ್ಳುವ ಸಂಪರ್ಕ ಸಾಧನವಾಯಿತು. ಆ ಕೊಳವೆ ಮೂಲಕವೇ ಚೀಟಿ ತಲುಪಿಸಿದಾಗ ಅತ್ತ ಕಡೆಯಿಂದ ಎಲ್ಲರೂ ಸುರಕ್ಷಿತವಾಗಿರುವುದಾಗಿ ಲಿಖಿತ ಸಂದೇಶ ಹಿಂತಿರುಗಿ ಬಂತು. ಅದೇ ಕೊಳವೆಯನ್ನೇ ಉಪಯೋಗಿಸಿಕೊಂಡು ಒಳಗೆ ಸಿಲುಕಿರುವವರಿಗೆ ನೀರು-ಆಹಾರ-ಔಷಧಗಳನ್ನು ಈವರೆಗೆ ಕಳಿಸಲಾಗುತ್ತಿದೆ.

ರಕ್ಷಣೆಯನ್ನು ವಿಳಂಬವಾಗಿಸಿವೆ ಈ ಅಂಶಗಳು…

ಪ್ರಾರಂಭದಲ್ಲಿ, ಸಹಜವಾಗಿಯೇ ಸುರಂಗ ಮಧ್ಯೆ ಸುರಿದಿರುವ ಮಣ್ಣಿನ ಗುಡ್ಡೆಯನ್ನು ಪಕ್ಕ ಸರಿಸಿ ಮಾರ್ಗ ನಿರ್ಮಿಸುವ ಪ್ರಯತ್ನವಾಯಿತು. ಆದರೆ ಕುಸಿದ ಮಣ್ಣನ್ನು ತೆರವುಗೊಳಿಸಿದಷ್ಟೂ ಮತ್ತಷ್ಟು ಕುಸಿತಗಳು ಉಂಟಾಗಿದ್ದರಿಂದ ಆ ಪ್ರಯತ್ನವನ್ನು ಕೈಬಿಡಲಾಗಿದೆ. ಈಗ, ಆ ಕುಸಿದ ಮಣ್ಣಿನ ರಾಶಿಗಳ ಮಧ್ಯದಲ್ಲಿಯೇ ಮನುಷ್ಯರು ತೂರಿಕೊಂಡು, ತೆವಳಿಕೊಂಡು ಬರಬಹುದಾದ ಕೊಳವೆಗಳನ್ನು ಕಳಿಸಲಾಗ್ತಾ ಇದೆ. ಆ ಪ್ರಯತ್ನ ಸಹ ಅಷ್ಟು ಸುಲಭಕ್ಕೆ ಆಚೆ ತುದಿಯನ್ನು ಮುಟ್ಟುತ್ತಿಲ್ಲ. ಹೀಗೆ ಸುರಂಗದೊಳಗೊಂದು ಸುರಂಗ ಕೊರೆದು ಪೈಪ್ ನುಗ್ಗಿಸುವ ಕಾರ್ಯಕ್ಕೆ ಬೇಕಾದ ಯಂತ್ರಗಳನ್ನು ವಾಯುಸೇನೆಯ ವಿಮಾನ ಬಳಸಿ ತರಿಸಿಕೊಳ್ಳಲಾಯ್ತು. ಆ ಯಂತ್ರಗಳನ್ನು ಬಳಕೆಗೆ ಹಚ್ಚಿದ ನಂತರ ಅವುಗಳಲ್ಲೊಂದಕ್ಕೆ ಸ್ವಲ್ಪಮಟ್ಟದ ಹಾನಿಯಾಯಿತಲ್ಲದೇ ಫಲಿತಾಂಶ ಸಿಗುವ ಖಚಿತತೆ ಕೊರತೆಯಿಂದ ಪ್ಲಾನ್ ಸಿ ಚಾಲ್ತಿಗೊಳಿಸಲಾಗಿದೆ.

ಏನಿದು ಪ್ಲಾನ್ ಸಿ?
ಇದೀಗ ಕೊಳವೆ ಹೊಕ್ಕಿಸುವುದಕ್ಕೆ ಸುರಂಗದ ಬಾಯಿ ಮುಖಾಂತರ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಅದನ್ನು ಮುಂದುವರಿಸುತ್ತಲೇ, ಪ್ಲಾನ್ ಸಿ ಮತ್ತೊಂದು ಬಗೆಯ ಯತ್ನ ಮಾಡಲಿದೆ. ಅದೆಂದರೆ, ಕಾರ್ಮಿಕರು ಸಿಲುಕಿಕೊಂಡಿರುವ ಜಾಗದ ಮತ್ತೊಂದು ತುದಿಯಲ್ಲಿ, ಭೂಮಿಯ ಮೇಲಿನಿಂದ, ಬಾವಿ ರೀತಿಯಲ್ಲಿ ಅಗೆತ ಮಾಡುತ್ತ ಹೋಗುವುದು. ಇವಕ್ಕೆ ಬೇಕಾದ ಪರಿಕರಗಳೆಲ್ಲ ಸ್ಥಳ ತಲುಪಿವೆ.

ಅಂತಾರಾಷ್ಟ್ರೀಯ ಸುರಂಗ ಪರಿಣತ ಅರ್ನಾಲ್ಡ್ ಡಿಕ್ಸ್ ಸೋಮವಾರ ಆಗಮಿಸಿದ್ದು, ರಕ್ಷಣಾ ತಂಡಗಳಿಗೆ ತಮ್ಮ ಪರಣಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ.

ಹೀಗೊಂದು ಜಿಜ್ಞಾಸೆ
ಕರ್ನಾಟಕದ ಘಟ್ಟ ಪ್ರದೇಶಗಳಲ್ಲಿ ಸಹ ಭೂಸುರಂಗಗಳು, ರೈಲು ಮಾರ್ಗಗಳು ಇವೆಲ್ಲದರ ಆಕರ್ಷಕ ಯೋಜನೆಗಳು ಪ್ರಸ್ತಾವವಾಗಿವೆ. ಉತ್ತರಕಾಶಿಯಲ್ಲಿ ಸುರಂಗ ಕುರಿತ ಅಷ್ಟೇ ಅಲ್ಲದೇ ಇತ್ತೀಚಿನ ವರ್ಷಗಳಲ್ಲಾಗುತ್ತಿರುವ ನಿರಂತರ ಭೂಕುಸಿತಗಳಿಗೆ, ಭೂಬಿರುಕುಗಳಿಗೆ ಆಧುನಿಕ ಅಭಿವೃದ್ಧಿಯೊಂದಿಗೆ ಸಂಬಂಧವಿದೆಯಾ? ಉತ್ತರಾಖಂಡವಾಗಲೀ, ಕರ್ನಾಟಕದ ಪರ್ವತ ಪ್ರದೇಶಗಳಾಗಲೀ ಇಂಥ ಅಭಿವೃದ್ಧಿ ಮಾದರಿಗಳನ್ನು ತಾಳಿಕೊಳ್ಳಬಲ್ಲವೇ ಎಂಬ ಪ್ರಶ್ನೆಗಳಿಗೂ ಇದು ಸಕಾಲ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!