September 11, 2026
Friday, September 11, 2026
spot_img

ಒಂದೇ ದಿನದಲ್ಲಿ ಮಾಯವಾಯಿತೇ ವೆಂಟಿಲೇಟರ್? ಸುಧಾಕರ್ ಆರೋಗ್ಯದ ಬಗ್ಗೆ ಹಬ್ಬಿದೆ ಅನುಮಾನದ ಹುತ್ತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಸಚಿವ ಡಿ. ಸುಧಾಕರ್ ಅವರ ಆರೋಗ್ಯ ಸ್ಥಿತಿಯ ಸುತ್ತ ಈಗ ರಾಜಕೀಯ ವಿವಾದವೊಂದು ಸೃಷ್ಟಿಯಾಗಿದೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸಚಿವರ ಆರೋಗ್ಯದ ಬಗ್ಗೆ ಎತ್ತಿರುವ ಪ್ರಶ್ನೆಗಳು ಆಡಳಿತಾರೂಢ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ವಾಗ್ಯುದ್ಧಕ್ಕೆ ನಾಂದಿ ಹಾಡಿವೆ.

ಸಚಿವ ಸುಧಾಕರ್ ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಲೇ ಅನುಮಾನ ವ್ಯಕ್ತಪಡಿಸಿದ್ದ ಕುಮಾರಸ್ವಾಮಿ, “ಸಚಿವರು ಎಷ್ಟು ನೋವು ಅನುಭವಿಸುತ್ತಿದ್ದಾರೆ? ಅವರ ಆರೋಗ್ಯದ ಬಗ್ಗೆ ಸರ್ಕಾರ ಕೆಲವು ವಿಷಯಗಳನ್ನು ಏಕೆ ಮುಚ್ಚಿಡುತ್ತಿದೆ? ಸಹಿ ಅಥವಾ ಹೆಬ್ಬೆಟ್ಟು ಒತ್ತಿಸಿಕೊಳ್ಳುವ ಉದ್ದೇಶದಿಂದ ಈ ರಹಸ್ಯ ಕಾಪಾಡಲಾಗುತ್ತಿದೆಯೇ?” ಎಂದು ಪ್ರಶ್ನಿಸಿದ್ದರು. ಇದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು.

ಕುಮಾರಸ್ವಾಮಿ ಅವರ ಹೇಳಿಕೆಯಿಂದ ಬೇಸರಗೊಂಡ ಸಚಿವರ ಪುತ್ರ ಸುಹಾಸ್, ವಿಡಿಯೋ ಒಂದನ್ನು ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದ್ದಾರೆ. “ನನ್ನ ತಂದೆಯ ಆರೋಗ್ಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ನೋವು ತಂದಿದೆ. ಅವರು ಸದ್ಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಶೀಘ್ರದಲ್ಲೇ ಗುಣಮುಖರಾಗುವ ನಂಬಿಕೆಯಿದೆ. ಸಿಎಂ, ಡಿಸಿಎಂ ಸೇರಿದಂತೆ ಹಲವು ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಧೈರ್ಯ ತುಂಬಿದ್ದಾರೆ” ಎಂದು ಸುಹಾಸ್ ಹೇಳಿದ್ದರು.

ಸುಹಾಸ್ ಅವರ ವಿಡಿಯೋಗೆ ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಖಾರವಾಗಿ ಪ್ರತಿಕ್ರಿಯಿಸಿರುವ ಜೆಡಿಎಸ್, ಇದು ಒತ್ತಡಕ್ಕೆ ಮಣಿದು ಮಾಡಿರುವ ವಿಡಿಯೋ ಎಂದು ಆರೋಪಿಸಿದೆ. “ಸುಹಾಸ್ ಅವರು ಯಾರೋ ಬರೆದುಕೊಟ್ಟ ಸ್ಕ್ರಿಪ್ಟ್ ಓದುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಹತ್ತು ಬಾರಿ ಎಡಿಟ್ ಮಾಡಲಾದ ಈ ವಿಡಿಯೋದ ಹಿಂದೆ ಯಾವ ‘ಮಹಾನಾಯಕ’ನ ಕೈವಾಡವಿದೆ?” ಎಂದು ಜೆಡಿಎಸ್ ಪ್ರಶ್ನಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !