ವೈದ್ಯರ ಮುಷ್ಕರಕ್ಕೆ ಮಣಿದ ದೀದಿ ಸರಕಾರ: ಪೊಲೀಸ್ ಆಯುಕ್ತ, ಆರೋಗ್ಯ ಸೇವೆಗಳ ನಿರ್ದೇಶಕ ಎತ್ತಂಗಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಕೋಲ್ಕತ್ತಾದ ಆರ್‌ ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಕಿರಿಯ ವೈದ್ಯರ ಪ್ರತಿಭಟನೆಗೆ ಪಶ್ಚಿಮ ಬಂಗಾಳ ಸರ್ಕಾರ ಮಣಿದು ಕೋಲ್ಕತ್ತಾ ಪೊಲೀಸ್ ಆಯುಕ್ತ ಮತ್ತು ಆರೋಗ್ಯ ಸೇವೆಗಳ ನಿರ್ದೇಶಕರನ್ನು ಮಂಗಳವಾರ ಎತ್ತಂಗಡಿ ಮಾಡಿದೆ.

ಪ್ರತಿಭಟನಾನಿರತ ಕಿರಿಯ ವೈದ್ಯರ ಬೇಡಿಕೆ ಮೇರೆಗೆ ಪಶ್ಚಿಮ ಬಂಗಾಳ ಸರ್ಕಾರ ಇಂದು ಕೋಲ್ಕತ್ತಾ ಪೊಲೀಸ್ ಕಮಿಷನರ್ ವಿನೀತ್ ಗೋಯಲ್ ಅವರನ್ನು ವರ್ಗಾವಣೆ ಮಾಡಿದ್ದು, ಅವರ ಸ್ಥಾನಕ್ಕೆ ಹಿರಿಯ ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ವರ್ಮಾ ಅವರನ್ನು ನೇಮಿಸಿದೆ.

ಆರ್‌ಜಿ ಕರ್ ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಿರ್ವಹಣೆಗೆ ಸಂಬಂಧಿಸಿದಂತೆ ತೀವ್ರ ಟೀಕೆಗೆ ಗುರಿಯಾಗಿದ್ದ ಗೋಯಲ್ ಅವರನ್ನು ಪಶ್ಚಿಮ ಬಂಗಾಳ ಪೊಲೀಸ್‌ನ ವಿಶೇಷ ಕಾರ್ಯಪಡೆ(ಎಸ್‌ಟಿಎಫ್) ಎಡಿಜಿ ಮತ್ತು ಐಜಿಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.

ಎಡಿಜಿ ಮತ್ತು ಐಜಿಪಿ(ಕಾನೂನು ಮತ್ತು ಸುವ್ಯವಸ್ಥೆ) ಆಗಿದ್ದ 1998 ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ವರ್ಮಾ ಅವರನ್ನು ಕೋಲ್ಕತ್ತಾ ನೂತನ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.

ಕಿರಿಯ ವೈದ್ಯರ ಮತ್ತೊಂದು ಬೇಡಿಕೆಯನ್ನು ಈಡೇರಿಸಿರುವ ಸರ್ಕಾರ, ವೈದ್ಯಕೀಯ ಶಿಕ್ಷಣದ ನಿರ್ದೇಶಕ(ಡಿಎಂಇ) ಡಾ.ಕೌಸ್ತವ್ ನಾಯಕ್ ಮತ್ತು ಆರೋಗ್ಯ ಸೇವೆಗಳ ನಿರ್ದೇಶಕ(ಡಿಎಚ್‌ಎಸ್) ಡಾ. ದೇಬಾಶಿಶ್ ಹಲ್ಡರ್ ಅವರನ್ನು ಸಹ ವರ್ಗಾವಣೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆಯ ಆದೇಶ ತಿಳಿಸಿದೆ.

ಡಾ. ಸ್ವಪನ್ ಸೊರೆನ್ ಅವರನ್ನು ಆರೋಗ್ಯ ಸೇವೆಗಳ ಹೊಸ ಪ್ರಭಾರಿ ನಿರ್ದೇಶಕರಾಗಿ ಮತ್ತು ವೈದ್ಯಕೀಯ ಶಿಕ್ಷಣದ ವಿಶೇಷ ಕರ್ತವ್ಯದ ಅಧಿಕಾರಿಯಾಗಿ ಡಾ ಸುಪರ್ಣಾ ದತ್ತಾ ಅವರನ್ನು ನೇಮಿಸಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!