ಖರ್ಗೆ ಬೆಂಬಲಕ್ಕೆ ನಿಂತು ಕಾಂಗ್ರೆಸ್ ಅಧ್ಯಕ್ಷ ಪದವಿ ಉಮೇದುವಾರಿಕೆಯಿಂದ ಹಿಂದೆ ಸರಿದ ದಿಗ್ವಿಜಯ್ ಸಿಂಗ್

 ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಮತ್ತೊಂದು ತಿರುವು ಪಡೆದುಕೊಂಡಿದೆ. ಇಲ್ಲಿವರೆಗೂ ಅಧ್ಯಕ್ಷ ಚುನಾವಣೆ ಅಭ್ಯರ್ಥಿಯಾಗಿದ್ದ ದಿಗ್ವಿಜಯ ಸಿಂಗ್ ನಾಮಪತ್ರ ಸಲ್ಲಿಕೆ ಮಾಡುವ ದಿನವೇ ಅಧ್ಯಕ್ಷ ಚುನಾವಣೆ ರೇಸ್‌ನಿಂದ ಹೊರಗುಳಿಯುವುದಾಗಿ ಸ್ಪಷ್ಟಪಡಿಸಿದರು. ಮತ್ತು ಕಣದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಮ್ಮ ಬೆಂಬಲ ಘೋಷಿಸಿದ್ದಾರೆ.

ಇಂದು ನಾಮಪತ್ರ ಸಲ್ಲಿಸುವುದಾಗಿ ಗುರುವಾರ ಘೋಷಣೆ ಮಾಡಿದ್ದ ದಿಗ್ವಿಜಯ್ ಸಿಂಗ್, ಆ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸುತ್ತಿದ್ದಾರೆ ಎಂಬ ವಿಚಾರ ತಿಳಿದ ಕೂಡಲೇ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಇಂದು ಬೆಳಗ್ಗೆ ಖರ್ಗೆ ಅವರ ನಿವಾಸಕ್ಕೆ ಭೇಟಿ ನೀಡಿ ಅವರೊಂದಿಗೆ ಚರ್ಚಿಸಿದ ಬಳಿಕ ಮಾಧ್ಯಮಗಳಿಗೆ ಈ ಕುರಿತು ಸ್ಪಷ್ಟನೆ ನೀಡಿದರು.

ʻಖರ್ಗೆ ಅವರಂತಹ ಹಿರಿಯ ನಾಯಕರ ವಿರುದ್ಧ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ನಾನು ಯೋಚಿಸಲು ಸಾಧ್ಯವಿಲ್ಲ. ಖರ್ಗೆ ನನ್ನ ನಾಯಕರು ಮತ್ತು ನನಗಿಂತ ಹಿರಿಯರು. ನಿನ್ನೆ ಅವರ ನಿವಾಸಕ್ಕೆ ಭೇಟಿ ನೀಡಿ ಈ ಬಗ್ಗೆ ಅವರ ಬಳಿ ಚರ್ಚಿಸಿದೆ. ನೀವು ಸ್ಪರ್ಧೆ ಮಾಡುವುದಾದರೆ ನಾನು ನಾಮಪತ್ರ ಭರ್ತಿ ಮಾಡುವುದಿಲ್ಲ ಎಂದೂ ಸಹ ಹೇಳಿದ್ದೆ. ಆದರೆ, ಖರ್ಗೆ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ಯಾವುದೇ ಉದ್ದೇಶ ಇಲ್ಲ ಎಂದರು. ಎಲ್ಲದರ ನಡುವೆ ಮಾಧ್ಯಮಗಳಲ್ಲಿ ಖರ್ಗೆ ಸ್ಪರ್ಧೆ ಬಗ್ಗೆ ಸುದ್ದಿ ನೋಡಿದ ತಕ್ಷಣ ನಾನು ನಿರ್ಧಾರವನ್ನು ಬದಲಿಸಿದ್ದೇನೆ. ಅಷ್ಟೇ ಅಲ್ಲದೆ, ಇಂದು ಬೆಳಿಗ್ಗೆ ಪುನಃ ಖರ್ಗೆ ಅವರನ್ನು ಭೇಟಿಯಾಗಿ ನೀವು ನಾಮಪತ್ರ ಸಲ್ಲಿಸುವ ವೇಳೆ ನಿಮ್ಮೊಂದಿಗೆ ನಾನಿರುತ್ತೇನೆ ಎಂದು ಬೆಂಬಲ ಸೂಚಿಸಿರುವುದಾಗಿ ತಿಳಿಸಿದ್ದೇನೆ. ನನ್ನ ನಾಯಕನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಾನು ಎಂದೂ ಯೋಚಿಸುವುದಿಲ್ಲʼ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!