ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ ಸತ್ಯಕ್ಕೆ ದೂರ: ರುದ್ರಮುನಿ ಸ್ವಾಮೀಜಿ

ಹೊಸದಿಗಂತ ವರದಿ, ತುಮಕೂರು:

ದಿಂಗಾಲೇಶ್ವರ ಸ್ವಾಮೀಜಿಗೆ ಟಾಂಗ್ ನೀಡಿರುವ ತಿಪಟೂರಿನ ರುದ್ರಮುನಿಸ್ವಾಮೀಜಿ ಅವರು ಮಠಗಳ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವಂತಹ ಕೆಲಸ ಮಾಡಬೇಡಿ‌ ಎಂದು ತಾಕೀತು ಮಾಡಿದ್ದಾರೆ.

ತಿಪಟೂರಿನಲ್ಲಿ ಸುದ್ದಿ ಗಾರರ ಜೊತೆಯಲ್ಲಿ ಮಾತನಾಡಿದ ಶ್ರೀ ಗಳು ಸರ್ಕಾರ ಮಠಗಳಿಂದಲೂ ಸಹ 30% ಕಮೀಷನ್ ಪಡೆಯುತ್ತಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆಯೂ ಸತ್ಯಕ್ಕೆ ದೂರವಾದಂತಹ ಮಾತಾಗಿದೆ. ಅಂತಹ ಘಟನೆ ನಡೆದಿದ್ದರೆ ಕೂಡಲೇ ತನಿಖೆಗೆ ಒಳಪಡಿಸಬೇಕೆಂದು ಎಂದು ಷಡಕ್ಷರ ಮಠದ ರುದ್ರಮುನಿಸ್ವಾಮೀಜಿ ಒತ್ತಾಯಿಸಿದ್ದಾರೆ.

ನಗರದ ಷಡಕ್ಷರ ಮಠದಲ್ಲಿ ಮಂಗಳವಾರ ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ಮಠಗಳಿಗೆ ಅನುದಾನ ನೀಡುವುದನ್ನು ಪ್ರಾರಂಭಿಸಿದ್ದು ಬಿ.ಎಸ್.ಯಡಿಯೂರಪ್ಪನವರು ಪ್ರಕ್ರಿಯೆಗೆ ಕಾರಣ ಕರ್ನಾಟಕದಲ್ಲಿ ಎಲ್ಲಾ ಸಮಾಜದ ಮಠಗಳು ಅಭಿವೃದ್ಧಿಯಿಂದ ಕುಂಠಿತವಾಗಿದ್ದವು. ಅಂತಹ ಮಠಗಳ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಅಭಿವೃದ್ಧಿಗೆ ಸರ್ಕಾರವೂ ಅನುದಾನಗಳನ್ನು ಬಿಡುಗಡೆ ಮಾಡುತ್ತಾ ಬಂದಿದೆ. ಮಠಗಳಲ್ಲಿ ಶಾಲಾ ಕಟ್ಟಡ, ವಿದ್ಯಾರ್ಥಿನಿಲಯ, ಪ್ರಸಾದ ನಿಲಯ ಹಾಗೂ ಸಮುದಾಯ ಭವನಗಳನ್ನು ನಿರ್ಮಾಣ ಮಾಡಲು ಅನುದಾನವನ್ನು ನೀಡಿ ಮಠಗಳ ಅಭಿವೃದ್ಧಿ ಕಾರಣೀಕರ್ತರಾಗಿದ್ದಾರೆ. ಇನ್ನೂ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಅನುದಾನ ಬಿಡುಗಡೆ ಮಾಡಿದಾಗಲೂ ಯಾವುದೇ ಅಪೇಕ್ಷೆಪಟ್ಟಿಲ್ಲ.

ದಿಂಗಾಲೇಶ್ವರ ಸ್ವಾಮೀಜಿಗಳ ಹೇಳಿಕೆಯಿಂದ ಸಮಾಜದಲ್ಲಿ ಧಾರ್ಮಿಕ ಮುಖಂಡರು, ರಾಜಕಾರಣಿಗಳು ಇತರೆ ಜನರು ಅನಗತ್ಯ ಗೊಂದಲ ಸೃಷ್ಠಿಸಿ ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡಿ ಸರ್ಕಾರ ಹಾಗೂ ಮಠಾಧೀಶರು ಗೊಂದಲಕ್ಕೆ ಸಿಲುಕುವಂತೆ ಮಾಡಿರುವುದು ಖಂಡನೀಯ. ಸ್ವಾಮೀಜಿ ಹೇಳಿಕೆಗೆ ಬದ್ಧವಾಗಿ, ನಿಖರವಾಗಿ ಯಾರಿಗೆ, ಯಾವ ವ್ಯಕ್ತಿಗೆ ಕಮಿಷನ್ ನೀಡಿದ್ದಾರೆ ಎಂಬುದನ್ನು ಬಹಿರಂಗಪಡಿಸಿದರೆ ಗೌರವ ಬರುತ್ತದೆ. ಅದನ್ನು ಬಿಟ್ಟು ಅನಗತ್ಯ ಹೇಳಿಕೆ ನೀಡಿ ಸಮಾಜದ ಇತರೆ ಸ್ವಾಮೀಜಿಗಳು ಮುಜುಗರಕ್ಕೆ ಸಿಲುಕುವಂತೆ ಮಾಡಿರುವುದು ಬೇಸರದ ಸಂಗತಿ. ವೈಯಕ್ತಿಕವಾಗಿ ಹೇಳಿಕೆ ನೀಡಿದ್ದರೆ ಯಾವುದೇ ಸಮಸ್ಯೆ ಇರಲಿಲ್ಲ ಮಠಗಳ ಎಂದು ಇತರರನ್ನು ಸೇರಿಸಿಕೊಂಡಿರುವುದು ದುರಂತವಾಗಿದೆ. ಮಠಗಳಿಗೆ ಅನುದಾನ ಮುಜರಾಯಿ ಇಲಾಖೆಯಿಂದ ಬಂದಾಗ ಚೆಕ್ ಮುಖಾಂತರ ಬರುತ್ತದೆ ಆದರೆ ಸರ್ಕಾರ ಕಮಿಷನ್ ಹಣ ಹೇಗೆ ಇಟ್ಟುಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದ ಅವರು ಸಮಾಜದಲ್ಲಿ ಇಂತಹ ವಿಷಗಳ ಬಗ್ಗೆ ಅನಗತ್ಯ ಚರ್ಚೆಗಳನ್ನು ಮಾಡುತ್ತಿರುವ ರಾಜಕಾರಣಿಗಳು ಇದನ್ನು ಇಲ್ಲಿಗೆ ನಿಲ್ಲಿಸಬೇಕು. ಲಂಚದ ವಿಷಯ ಬಂದಾಗ ಕಾನೂನಿನಲ್ಲಿ ಲಂಚ ತೆಗೆದುಕೊಳ್ಳುವುದಕ್ಕಿಂತ ಲಂಚ ಕೊಡುವವನು ತಪ್ಪಿತಸ್ಥನಾಗುತ್ತಾನೆ ಎಂಬುದನ್ನು ಮರೆಯಬಾರದು ಎಂದರು.

ಕುಪ್ಪೂರು ತಮ್ಮಡಿಹಳ್ಳಿ ವಿರಕ್ತ ಮಠದ ಡಾ.ಅಭಿನವದೇಶೀಕೇಂದ್ರ ಸ್ವಾಮೀಜಿ ಮಾತನಾಡಿ ಕಳೆದ ಬಾರಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಂತಹ ಸಂದರ್ಭದಲ್ಲಿ 1 ಕೋಟಿ ಅನುದಾನವನ್ನು ಸರ್ಕಾರದಿಂದ ನೀಡಿದ್ದರು. ಆದರೆ ಯಾವುದೇ ಫಲಾಪೇಕ್ಷೆಯನ್ನು ಅವರು ಪಡೆದಿರಲಿಲ್ಲ. ವಿನಾಕಾರಣ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದನ್ನು ದಿಂಗಾಲೇಶ್ವರ ಸ್ವಾಮೀಜಿಗಳು ನಿಲ್ಲಿಸಿ ಸಮಾಜದಲ್ಲಿ ಶಾಂತಿ ನೆಲಸುವಂತೆ ಮಾಡಬೇಕಿದೆ. ದಿಂಗಾಲೇಶ್ವರರು ಯಾರನ್ನು ಮೆಚ್ಚಿಸಲು ಇಂತಹ ಹೇಳಿಕೆ ನೀಡಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪುರವರ್ಗ ಹಿರೇಮಠ ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ದೊಡ್ಡಮೇಟಿಕುಕ್ರ್ಕೆ ಚಂದ್ರಶೇಖರಸಿದ್ದಬಸವ ಸ್ವಾಮೀಜಿ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!