May 28, 2026
Thursday, May 28, 2026
spot_img

ಶಾಂತಿಯ ಹಾದಿಗೆ ರಾಜತಾಂತ್ರಿಕ ಚರ್ಚೆ: ಸೈಪ್ರಸ್‌ನಲ್ಲಿ ಇಂಡಿಯಾ–ಉಕ್ರೇನ್ ಹೈ-ಲೆವೆಲ್ ಮೀಟಿಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಜಾಗತಿಕ ಮಟ್ಟದಲ್ಲಿ ದೊಡ್ಡ ರಾಜತಾಂತ್ರಿಕ ಬೆಳವಣಿಗೆಯೊಂದು ನಡೆದಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮತ್ತು ಉಕ್ರೇನ್ ವಿದೇಶಾಂಗ ಸಚಿವ ಆಂಡ್ರಿ ಸಿಬಿಹಾ ಬುಧವಾರ ರಷ್ಯಾ-ಉಕ್ರೇನ್ ಯುದ್ಧದ ಪ್ರಸ್ತುತ ಪರಿಸ್ಥಿತಿ ಮತ್ತು ದೀರ್ಘಕಾಲೀನ ಶಾಂತಿ ಸ್ಥಾಪಿಸುವ ಪ್ರಯತ್ನಗಳ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ. ಸೈಪ್ರಸ್‌ನಲ್ಲಿ ನಡೆದ ಯುರೋಪಿಯನ್ ಯೂನಿಯನ್ ವಿದೇಶಾಂಗ ಸಚಿವರ ಅನೌಪಚಾರಿಕ ಸಭೆಯಾದ ‘ಜಿಮ್ನಿಚ್ ಫೋರಂ’ನ (Gymnich Forum) ಅಂಚಿನಲ್ಲಿ ಈ ದ್ವಿಪಕ್ಷೀಯ ಸಭೆ ನಡೆದಿದೆ.

ಯುದ್ಧ ನಿಲ್ಲಿಸಲು ಭಾರತದ ಬಲವಾದ ಧ್ವನಿ ಅಗತ್ಯ: ಉಕ್ರೇನ್

ಮಾತುಕತೆಯ ನಂತರ ಉಕ್ರೇನ್ ವಿದೇಶಾಂಗ ಸಚಿವ ಆಂಡ್ರಿ ಸಿಬಿಹಾ ಈ ಸಂವಾದವನ್ನು ಅತ್ಯಂತ “ಅರ್ಥಪೂರ್ಣ” ಎಂದು ಬಣ್ಣಿಸಿದ್ದಾರೆ. ರಷ್ಯಾದ ನಿರಂತರ ದಾಳಿಗಳು ಮತ್ತು ರಣಾಂಗಣದ ಇತ್ತೀಚಿನ ಬೆಳವಣಿಗೆಗಳ ಕುರಿತು ಜೈಶಂಕರ್‌ರೊಂದಿಗೆ ಚರ್ಚಿಸಿದ ಅವರು, “ನಮ್ಮ ಸಂದೇಶ ಸ್ಪಷ್ಟವಾಗಿದೆ, ನಾವು ಈ ಯುದ್ಧವನ್ನು ಕೊನೆಗೊಳಿಸಲು ಮತ್ತು ಸಮಗ್ರ ಹಾಗೂ ದೀರ್ಘಕಾಲೀನ ಶಾಂತಿಯನ್ನು ಸಾಧಿಸಲು ಬಯಸುತ್ತೇವೆ” ಎಂದು ತಿಳಿಸಿದ್ದಾರೆ. ಇದೇ ವೇಳೆ, ಯುದ್ಧ ನಿವಾರಣೆಯಲ್ಲಿ ಭಾರತದ ಪ್ರಭಾವವನ್ನು ಉಲ್ಲೇಖಿಸಿದ ಅವರು, “ಯುರೋಪ್ ತನ್ನ ಜವಾಬ್ದಾರಿಯನ್ನು ಹೆಚ್ಚಿಸುತ್ತಿರುವ ಈ ಸಮಯದಲ್ಲಿ, ನಾವು ಭಾರತದ ಬಲವಾದ ಧ್ವನಿ ಮತ್ತು ಆಲೋಚನೆಗಳನ್ನು ಮುಕ್ತವಾಗಿ ಸ್ವಾಗತಿಸುತ್ತೇವೆ” ಎಂದು ಹೇಳುವ ಮೂಲಕ ಭಾರತದ ಮಧ್ಯಸ್ಥಿಕೆಗೆ ಆಶಯ ವ್ಯಕ್ತಪಡಿಸಿದ್ದಾರೆ.

ಭೀತಿ ಹುಟ್ಟಿಸುವ ರಷ್ಯಾದ ಪ್ರಯತ್ನ ವಿಫಲ

ಇತ್ತೀಚೆಗೆ ಕೈವ್ ನಗರದ ಮೇಲೆ ನಡೆದ ಬೃಹತ್ ವೈಮಾನಿಕ ದಾಳಿ ಸೇರಿದಂತೆ ರಷ್ಯಾದ ತೀವ್ರಗೊಂಡ ದಾಳಿಗಳನ್ನು ಉಲ್ಲೇಖಿಸಿದ ಉಕ್ರೇನ್ ಸಚಿವರು, ಭಯೋತ್ಪಾದನೆಯ ಮೂಲಕ ಉಕ್ರೇನ್ ಜನರನ್ನು ಹೆದರಿಸುವ ಮಾಸ್ಕೋದ ಪ್ರಯತ್ನಗಳು ನಮ್ಮ ಸಂಕಲ್ಪವನ್ನು ಮುರಿಯಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಮತ್ತೊಂದೆಡೆ, ಈ ಭೇಟಿಯನ್ನು “ಉಪಯುಕ್ತ ಸಭೆ” ಎಂದು ಕರೆದ ಸಚಿವ ಜೈಶಂಕರ್, ಉಭಯ ದೇಶಗಳು ಸಂಘರ್ಷದ ಕುರಿತು ಪರಸ್ಪರ ಅನಿಸಿಕೆಗಳನ್ನು ವಿನಿಮಯ ಮಾಡಿಕೊಂಡಿವೆ ಮತ್ತು ದ್ವಿಪಕ್ಷೀಯ ಸಹಕಾರವನ್ನು ಪರಾಮರ್ಶಿಸಿವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:

ಭಾರತದ ಸಮತೋಲಿತ ನಿಲುವು

ಭಾರತವು ಈ ಸಂಘರ್ಷದ ಆರಂಭದಿಂದಲೂ ಯಾವುದೇ ಒಂದು ದೇಶದ ಪರ ವಹಿಸದೆ ಸಮತೋಲಿತ ನಿಲುವನ್ನು ಕಾಯ್ದುಕೊಂಡಿದೆ. ಮಾಸ್ಕೋ ಮತ್ತು ಕೈವ್ ಎರಡರೊಂದಿಗೂ ಉತ್ತಮ ಸಂಬಂಧವನ್ನು ಉಳಿಸಿಕೊಂಡೇ, ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕವೇ ಬಿಕ್ಕಟ್ಟು ಪರಿಹರಿಸಿಕೊಳ್ಳಬೇಕು ಎಂದು ಭಾರತ ಪದೇ ಪದೇ ಪ್ರತಿಪಾದಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ “ಇದು ಯುದ್ಧದ ಯುಗವಲ್ಲ” ಎಂದು ಜಾಗತಿಕ ವೇದಿಕೆಗಳಲ್ಲಿ ಸ್ಪಷ್ಟಪಡಿಸಿದ್ದಾರೆ.

ಸೌದಿ ಮತ್ತು ಇಯು ನಾಯಕರೊಂದಿಗೂ ಜೈಶಂಕರ್ ಭೇಟಿ

ಉಕ್ರೇನ್ ವಿದೇಶಾಂಗ ಸಚಿವರ ಭೇಟಿಯ ಹೊರತಾಗಿ, ಸಚಿವ ಜೈಶಂಕರ್ ಸೌದಿ ಅರೇಬಿಯಾದ ವಿದೇಶಾಂಗ ಸಚಿವ ಪ್ರಿನ್ಸ್ ಫೈಸಲ್ ಬಿನ್ ಫರ್ಹಾನ್ ಅಲ್ ಸೌದ್‌ನ್ನು ಭೇಟಿ ಮಾಡಿ ಪಶ್ಚಿಮ ಏಷ್ಯಾದ ಪ್ರಚಲಿತ ವಿದ್ಯಮಾನಗಳ ಕುರಿತು ಚರ್ಚಿಸಿದರು. ಜೊತೆಗೆ ಯುರೋಪಿಯನ್ ಯೂನಿಯನ್ ವಿದೇಶಾಂಗ ನೀತಿಯ ಮುಖ್ಯಸ್ಥೆ ಕಾಜಾ ಕಲ್ಲಾಸ್ ಅವರೊಂದಿಗೂ ಭಾರತ-ಇಯು ಆಯಕಟ್ಟಿನ ಸಹಕಾರದ ಕುರಿತು ಸಮಾಲೋಚನೆ ನಡೆಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !