ಮೋದಿ ಕೈಗೊಂಬೆ ಎಂದ ಡೆಮಾಕ್ರಟಿಕ್‌ ಸಂಸದನಿಗೆ ತಿರುಗೇಟು ನೀಡಿದ US ಗುಪ್ತಚರ ವಿಭಾಗದ ನಿರ್ದೇಶಕಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಅಮೆರಿಕದ ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಅವರು ತನ್ನನ್ನು ಪ್ರಧಾನಿ ನರೇಂದ್ರ ಮೋದಿ ಅವರ ಕೈಗೊಂಬೆ ಎಂದ ಡೆಮಾಕ್ರಟಿಕ್‌ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಡೆಮಾಕ್ರಟಿಕ್‌ಗಳು ನನ್ನನ್ನು ಟ್ರಂಪ್ ಕೈಗೊಂಬೆ, ಪುಟಿನ್ ಅವರ ಕೈಗೊಂಬೆ, ಅಸ್ಸಾದ್ ಕೈಗೊಂಬೆ, ಮೋದಿ ಅವರ ಕೈಗೊಂಬೆ ಎಂದು ಆರೋಪಿಸಿದ್ದಾರೆ. ಆದರೆ ನಿಜವಾಗಿಯೂ ಅವರನ್ನು ಕೆರಳಿಸುವ ವಿಷಯ ಯಾವುದು ಅಂದರೆ ನಾನು ಡೆಮಕ್ರಾಟಿಕ್‌ ಕೈಗೊಂಬೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

ದುರದೃಷ್ಟ ಏನೆಂದರೆ ಡೆಮಾಕ್ರಟಿಕ್‌ಗಳು ನನ್ನ ವಿರುದ್ಧ ಮತ್ತೆ ಧಾರ್ಮಿಕ ಮತಾಂಧತೆಯ ಕಾರ್ಡ್ ಬಳಸುತ್ತಿದ್ದಾರೆ. ಆದರೆ ಈ ಬಾರಿ ಹಿಂದುಗಳು (Hindu) ಮತ್ತು ಹಿಂದು ಧರ್ಮದ ವಿರುದ್ಧ ಧಾರ್ಮಿಕ ಮತಾಂಧತೆಯನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿದ್ದಾರೆ. ಯಾರಾದರೂ ನನ್ನ ವೈಯಕ್ತಿಕ ಆಧ್ಯಾತ್ಮಿಕ ಹಿಂದು ಧರ್ಮದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಪ್ರಾಮಾಣಿಕವಾಗಿ ಆಸಕ್ತಿ ಹೊಂದಿದ್ದರೆ ಎಕ್ಸ್‌ನಲ್ಲಿ ನನ್ನ ಖಾತೆಗೆ ಹೋಗಿ ನೋಡಬಹುದು. ಅಲ್ಲಿ ನಾನು ಈ ವಿಷಯದ ಬಗ್ಗೆ ಹೆಚ್ಚಿನದನ್ನು ಹಂಚಿಕೊಳ್ಳುತ್ತೇನೆ ಎಂದು ತುಳಸಿ ಗಬ್ಬಾರ್ಡ್ ಉತ್ತರಿಸಿದ್ದಾರೆ.

ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕಿಯಾಗಿ ಆಯ್ಕೆಯಾದ ಬಳಿಕ ಅವರು ತಮ್ಮ ಹುದ್ದೆಯನ್ನು ದೃಢೀಕರಣಗೊಳಿಸಲು ಗುಪ್ತಚರ ಕುರಿತ ಸೆನೆಟ್ ಆಯ್ಕೆ ಸಮಿತಿಯ ಮುಂದೆ ವಿಚಾರಣೆಗೆ ಹಾಜರಾದರು. ಈ ವೇಳೆ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಬಗ್ಗೆ ತಮ್ಮ ನಿಲುವನ್ನು ತಿಳಿಸಿದರು. ಸಿರಿಯನ್ ನಾಯಕ ಬಷರ್ ಅಲ್-ಅಸ್ಸಾದ್ ಬಗ್ಗೆ ನನಗೆ ಯಾವುದೇ ಒಲವು ಇಲ್ಲ. 2017 ರ ಲೆಬನಾನ್ ಪ್ರವಾಸದ ಸಮಯದಲ್ಲಿ ಹಿಜ್ಬೊಲ್ಲಾ ಪ್ರತಿನಿಧಿಗಳ ಜೊತೆಗಿನ ಭೇಟಿಯನ್ನು ನಿರಾಕರಿಸಿದ್ದೆ ಎಂದರು.

ಅಸ್ಸಾದ್ ಅಥವಾ ಗಡಾಫಿ ಅಥವಾ ಯಾವುದೇ ಸರ್ವಾಧಿಕಾರಿಯ ಬಗ್ಗೆ ನನಗೆ ಯಾವುದೇ ಪ್ರೀತಿ ಇಲ್ಲ. ನಾನು ಅಲ್-ಖೈದಾವನ್ನು ದ್ವೇಷಿಸುತ್ತೇನೆ. ಇಸ್ಲಾಮಿಸ್ಟ್ ಉಗ್ರರ ಜೊತೆ ಸ್ನೇಹಪರರಾಗಿರುವ ಎಲ್ಲಾ ನಾಯಕರನ್ನೂ ನಾನು ದ್ವೇಷಿಸುತ್ತೇನೆ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

ತುಳಸಿ ಗಬ್ಬಾರ್ಡ್ ಅಮೆರಿಕದ ಮೊದಲ ಹಿಂದು ಸಂಸದೆಯಾಗಿದ್ದು ಈ ಮೊದಲು ಡೆಮಾಕ್ರಟಿಕ್ ಪಕ್ಷದಲ್ಲಿದ್ದರು. 2022 ರಲ್ಲಿ ರಿಪಬ್ಲಿಕನ್‌ ಪಕ್ಷ ಸೇರಿದ ಇವರು ಡೊನಾಲ್ಡ್‌ ಟ್ರಂಪ್‌ ಅವರನ್ನು ಅಧ್ಯಕ್ಷ ಸ್ಪರ್ಧೆಗೆ ಅನುಮೋದಿಸಿದ್ದರು.

ಯಾರು ತುಳಸಿ ಗಬ್ಬಾರ್ಡ್‌?
ಸುಮಾರು 20 ವರ್ಷದಗಳ ಸೈನ್ಯದ ಶಾಖೆಯಾದ ನ್ಯಾಷನಲ್ ಗಾರ್ಡ್‌ನಲ್ಲಿ ಸೇವೆ ಸಲ್ಲಿಸಿರುವ ಇವರಿಗೆ ಭಾರತದ ಜೊತೆ ನೇರವಾದ ಸಂಬಂಧ ಇಲ್ಲ. ಆದರೆ ಇವರ ತಾಯಿ ಹಿಂದು (Hindu) ಧರ್ಮವನ್ನು ಪಾಲಿಸುತ್ತಿದ್ದ ಹಿನ್ನೆಲೆಯಲ್ಲಿ ಪುತ್ರಿಗೆ ತುಳಸಿ ಎಂದು ಹೆಸರನ್ನು ಇರಿಸಿದ್ದರು.

ಬಾಲ್ಯದಲ್ಲಿ ಯೋಗ ಅಭ್ಯಾಸ ಮಾಡುತ್ತಿದ್ದ ಇವರು ಭಗವದ್ಗೀತೆಯಿಂದ ಆಧ್ಯಾತ್ಮಿಕ ವಿಷಯಗಳನ್ನು ಕಲಿತ್ತಿದ್ದಾರೆ. ವೈಷ್ಣವ ಹಿಂದು ಸಂಘಟನೆಯಾದ ಸೈನ್ಸ್ ಆಫ್ ಐಡೆಂಟಿಟಿ ಫೌಂಡೇಶನ್ ಮತ್ತು ಇಸ್ಕಾನ್‌ ಸಂಸ್ಥೆಯ ಪ್ರಭಾವದಿಂದಾಗಿ ತುಳಸಿ ಅವರು ಹಿಂದೂ ಜೀವನ ಪದ್ದತಿಯಂತೆ ಜೀವಿಸುತ್ತಿದ್ದಾರೆ.

2015ರಲ್ಲಿ ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಿರುವ ಅಬ್ರಹಾಂ ವಿಲಿಯಮ್ಸ್ ಅವರನ್ನು ಹಿಂದು ಸಂಪ್ರದಾಯದಂತೆ ವಿವಾಹವಾದರು. ಪತಿಯೂ ಹಿಂದು ಧರ್ಮವನ್ನು ಪಾಲಿಸುತ್ತಿದ್ದಾರೆ. ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸುವಾಗ ಭಗವತ್ ಗೀತೆಯ ಮೇಲೆ ಕೈಯಿಟ್ಟು ತುಳಸಿ ಪ್ರಮಾಣ ವಚನ ಸ್ವೀಕರಿಸಿದ್ದರು.

2014ರ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ತುಳಸಿ ಗಬ್ಬಾರ್ಡ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಭಗವದ್ಗೀತೆ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದರು. ಅಷ್ಟೇ ಅಲ್ಲದೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಧಾನಿಯವರ ಪ್ರಸ್ತಾವನೆಗೆ ಅವರು ಬೆಂಬಲ ವ್ಯಕ್ತಪಡಿಸಿದ್ದರು.

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!