ದೇಶದ ಬೆಳವಣಿಗೆ ದೃಷ್ಟಿಯಿಂದ ನಿರಾಶದಾಯಕ ಬಜೆಟ್: ಸಿದ್ದರಾಮಯ್ಯ ಕಿಡಿ

ಹೊಸ ದಿಗಂತ ವರದಿ, ಮೈಸೂರು:

ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿರುವ ಬಜೆಟ್ ದೇಶವನ್ನು ವಿನಾಶ ಮಾಡುವ ಬಜೆಟ್. ದೇಶದ ಬೆಳವಣಿಗೆ ದೃಷ್ಟಿಯಿಂದ ನಿರಾಶದಾಯಕ ಬಜೆಟ್ ಆಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
ಮಂಗಳವಾರ ಸಂಜೆ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ರೆಸಾರ್ಟ್ನಲ್ಲಿ ಕೇಂದ್ರ ಸರ್ಕಾರದ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಬಜೆಟ್ ಮೇಲೆ ನಾನು ಬಹಳ ನಿರೀಕ್ಷೆ ಇರಲಿಲ್ಲ. ರೈತರು, ಜನಸಾಮಾನ್ಯರು, ಬಡವರು ಇದರ ಮೇಲೆ ನಿರೀಕ್ಷೆ ಇಟ್ಟಿದ್ದರು. ಆರೋಗ್ಯ, ಶಿಕ್ಷಣ, ಕೃಷಿ ಮೂರು ಕ್ಷೇತ್ರಗಳಲ್ಲಿ ಉತ್ತೇಜನಕಾರಿಯಾದ ಕಾರ್ಯಕ್ರಮಗಳ ನಿರೀಕ್ಷೆಯಲ್ಲಿದ್ದರು. ಆದರೆ ಅವರ ನಿರೀಕ್ಷೆ ಈಡೇರಿಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು, ಸಬ್ ಕ ಸಾಥ್, ಸಬ್ ಕ ವಿಕಾಸ್, ಸಬ್ ಕ ವಿಶ್ವಾಸ್ ಅಂತಾರೆ. ಇದು ಸಬ್ ಕ ವಿನಾಶ್ ಬಜೆಟ್. ಇದು ದೇಶವನ್ನು ವಿನಾಶ ಮಾಡುವ ಬಜೆಟ್. ಈ ಬಜೆಟ್ ನಲ್ಲಿ ಕರ್ನಾಟಕ ಜನರ ನಿರೀಕ್ಷೆ ಹುಸಿಯಾಗಿದೆ ಎಂದು ಟೀಕಿಸಿದರು.
ಕಳೆದ ವರ್ಷ ಸುಮಾರು 34ಲಕ್ಷ ಕೋಟಿ ರೂ ಬಜೆಟ್ ಮಂಡಿಸಿದರು. ಈ ವರ್ಷ 39.45ಲಕ್ಷ ಕೋಟಿ ಬಜೆಟ್ ಮಂಡಿಸಿದ್ದಾರೆ. ಕಳೆದ ವರ್ಷಕ್ಕಿಂತ 4 ಲಕ್ಷದ 61ಸಾವಿರ ಕೋಟಿ ಹೆಚ್ಚಿನ ಗಾತ್ರದ ಬಜೆಟ್ ಮಂಡಿಸಲಾಗಿದೆ. ಈ ವರ್ಷದ 11ಲಕ್ಷ 87ಸಾವಿರದ 180ಕೋಟಿ ರೂ ಸಾಲ ಮಾಡಿದ್ದಾರೆ. ಕಳೆದ ವರ್ಷ ನಮ್ಮ ದೇಶದ ಮೇಲೆ ಇದ್ದ ಸಾಲ 135ಲಕ್ಷ 87ಸಾವಿರ ಕೋಟಿ ರೂ. ಮನಮೋಹನ್ ಸಿಂಗ್ ಕಾಲದಲ್ಲಿ ಇದ್ದಂತ ಸಾಲ 53ಲಕ್ಷ 11ಸಾವಿರ ಕೋಟಿ. 8ವರ್ಷದ ಅವಧಿಯಲ್ಲಿ ಬಿಜೆಪಿ 93ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಒಟ್ಟು ಬಿಜೆಪಿ ಸರ್ಕಾರ ಮಾಡಿರುವ ಸಾಲದ ಬಡ್ಡಿಯೇ 9ಲಕ್ಷದ 40ಸಾವಿರ 651ಕೋಟಿ ಬಡ್ಡಿ ಕಟ್ಟಬೇಕು. ಹೀಗಾಗಿ ದೇಶವನ್ನು ನರೇಂದ್ರ ಮೋದಿ ಕಾಲದಲ್ಲಿ ಸಾಲದ ಸುಳಿಯಲ್ಲಿ ಸಿಲುಕಿಸಲಾಗಿದೆ ಎಂದು ಆರೋಪಿಸಿದರು.
ಈ ಬಜೆಟ್ ನಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ 38,169 ಸಾವಿರ ಕೋಟಿ ಕಡಿಮೆ ಮಾಡಿದ್ದಾರೆ. ಗ್ರಾಮೀಣ ಜನರಿಗೆ ಉದ್ಯೋಗ ಕೊಡಬೇಕಾದ್ರೆ ನರೇಗಾ ಅನುದಾನ ಹೆಚ್ಚು ಮಾಡಬೇಕಿತ್ತು. ಕಳೆದ ವರ್ಷಕ್ಕೂ ಈ ವರ್ಷಕ್ಕೂ ಹೋಲಿಕೆ ಮಾಡಿದ್ದರೆ ಕೇವಲ 80 ಕೋಟಿ ಅಷ್ಟೇ ಹೆಚ್ಚು ಮಾಡಿದ್ದಾರೆ. ಅಹಾರ ಮತ್ತು ನಾಗರೀಕ ಸರಬರಾಜು ಕ್ಷೇತ್ರ ಸಬ್ಸಿಡಿ 79638 ಕೋಟಿ ಕಡಿಮೆಯಾಗಿದೆ. ಪುಡ್ ಸಬ್ಸಿಡಿ ಕಡಿಮೆ ಮಾಡಿದ್ದಾರೆ. ಇದು ಉಚಿತ ಅಕ್ಕಿ ಮೇಲೆ ಪರಿಣಾಮ ಬೀರಲಿದೆ. ನರೇಂದ್ರ ಮೋದಿ ಕಾಲ ಸುಭೀಕ್ಷವಾಗಿದೆ ಅನ್ನೋದು ಸುಳ್ಳು ಎಂದು ವಾಗ್ದಾಳಿ ನಡೆಸಿದರು.
ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಕಡಿಮೆ ಮಾಡಿದ್ದಾರೆ. 35 ಸಾವಿರ ಕೋಟಿ ರೂಪಾಯಿ ಗೊಬ್ಬರದ ಸಬ್ಸಿಡಿ ಕಡಿಮೆಯಾಗಿದೆ ಮುಂದೆ ಗೊಬ್ಬರದ ಬೆಲೆ ಏರಿಕೆಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ವಾಜಪೇಯಿ ಕಾಲದಲ್ಲಿ ನದಿ ಜೋಡಣೆ ಮಾಡುತ್ತೇವೆ ಅಂತಾ ಹೇಳಿದ್ದರು. ಈಗ ಮತ್ತೆ ನದಿ ಜೋಡಣೆ ಮಾಡ್ತೀವಿ ಅಂತಿದ್ದಾರೆ. ನಮಗೆ ಮಹದಾಯಿ ಯೋಜನೆಗೆ ನೋಟಿಫಿಕೇಷನ್ ಆಗಿದೆ. ಇನ್ನೂ ಕೆಲಸ ಮಾಡಿಲ್ಲ. ಮೇಕೆದಾಟು ಯೋಜನೆಗೆ ಫಾರೆಸ್ಟ್ ಕ್ಲಿಯರೆನ್ಸ್ ಕೊಡಿಸಿಲ್ಲ. ಕೃಷ್ಣ ಮೇಲ್ದಂಡೆ ಯೋಜನೆ ಅನುಷ್ಠಾನ ಆಗಿಲ್ಲ. ಭದ್ರಾ ಮೆಲ್ದಂಡ್ ಯೋಜನೆಗೆ ಆಗಿಲ್ಲ ಎಂದು ಸಿದ್ಧರಾಮಯ್ಯ ಕೇಂದ್ರದ ವಿರುದ್ಧ ಗುಡುಗಿದರು.
ಕೃಷಿ, ಶಿಕ್ಷಣ, ನಿರುದ್ಯೋಗಕ್ಕೆ ಒತ್ತು ಕೊಡಬೇಕಿತ್ತು. ಅದ್ಯಾವುದೂ ಇಲ್ಲಿ ಆಗಿಲ್ಲ. ಇವತ್ತು ನಿರುದ್ಯೋಗ ಬೆಳೆಯುತ್ತಿದೆ. ಸಣ್ಣ, ಮಧ್ಯಮ ಕೈಗಾರಿಕಾ ಮುಚ್ಚುತ್ತಿವೆ. 62 ಪರ್ಸೆಂಟ್ ನಿರುದ್ಯೋಗ ಹೆಚ್ಚಾಗಿದೆ. ಈ ಬಜೆಟ್ ಜನರ ನಿರೀಕ್ಷೆಗೆ ಸ್ಪಂದಿಸುವ ಬಜೆಟ್ ಅಲ್ಲ. ಅಭಿವೃದ್ಧಿ ದೃಷ್ಟಿಯಿಂದ ಇದು ಒಳ್ಳೆಯ ಬಜೆಟ್ ಅಲ್ಲ. ಗೋವಾ,ಯುಪಿ, ಮಣಿಪುರ್ ಸೇರಿ ಐದು ರಾಜ್ಯಗಳಲ್ಲಿ ಚುನಾವಣೆ ಇದೆ. ಅ ರಾಜ್ಯಗಳು ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ರು, ಅದು ಆಗಿಲ್ಲ ಎಂದು ಟೀಕಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!