ರಾಜ್ಯ, ರಾಷ್ಟ್ರಕ್ಕೆ ಮತ್ತೆ ಕಾಡುತ್ತೆ ಅವಘಡ: ಭವಿಷ್ಯ ನುಡಿದ ಕೋಡಿಮಠ ಶ್ರೀ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಲ್ಲಿನ ಕೋಳಿ ಮಾತನಾಡಿದೆ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.

ಜಿಲ್ಲೆಯ ಹೊನ್ನಾಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕಾರ್ತಿಕ ಮಾಸ, ಸಂಕ್ರಾಂತಿ ಸಂದರ್ಭದಲ್ಲಿ ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಕೆಲ ಅವಘಡಗಳು ಎದುರಾಗಲಿವೆ ಎಂದು ಭವಿಷ್ಯ ನುಡಿದಿದ್ದಾರೆ.

ರಾಜ್ಯ ರಾಷ್ಟ್ರದಲ್ಲಿ ನಡೆಯುವ ಅವಘಡಗಳಿಂದ ಪಾರು ಮಾಡಿದ್ರೇ ಮುಂದಿನ ಭವಿಷ್ಯ ಹೇಳುವೆ, ರಾಜ್ಯದಲ್ಲಿ ಅಮಾವಾಸ್ಯೆ ಬಳಿಕ ಮಳೆ ಬರುತ್ತದೆ. ಆತಂಕ ಪಡುವ ಅಗತ್ಯವಿಲ್ಲ ಎಂದರು.

ಮನುಷ್ಯ ಮಾಡಿದ ತಪ್ಪುಗಳಭಗವಂತ ಕ್ಷಮಿಸುತ್ತಾನೆ. ಆದರೆ ತಿಳಿದೂ ತಪ್ಪುಗಳನ್ನು ಮಾಡಿದಾಗ ಕ್ಷಮಿಸಲಾರ. ಇತ್ತೀಚಿನ ದಿನಗಳಲ್ಲಿ ಗೊತ್ತಿದ್ದೂ ಮನುಷ್ಯ ಪ್ರಕೃತಿ, ನೆಲ, ಜಲ ಇವುಗಳ ನಿರಂತರ ದುರುಪಯೋಗದ ಕಾರಣ ನಾವು ಅನೇಕ ರೀತಿಯ ಪ್ರಕೃತಿ ವಿಕೋಪ ಎದುರಿಸುವಂತಾಗಿದೆ ಎಂದರು.

ಇನ್ನು ನಮ್ಮ ನಡುವೆ ಯಾವುದು ಮನುಷ್ಯನಿಗೆ, ಸಮಾಜಕ್ಕೆ ಶಾಂತಿ, ನೆಮ್ಮದಿ ನೀಡುತ್ತದೆಯೋ ಅದೇ ಧರ್ಮವಾಗಿದೆ. ನೂರಾರು ವರ್ಷಗಳಲ್ಲಿ ಹೇಳಿದ್ದು ಸತ್ಯ ಕಾಲಜ್ಞಾನವೇ ಗುರುಗಳ ಸಂಪತ್ತಾಗಿದೆ. ನೂರಾರು ವರ್ಷಗಳ ಹಿಂದೆ ಕಾಲಜ್ಞಾನದಲ್ಲಿ ‘ಕಟ್ಟಿಗೆ ಹಾಡುತ್ತದೆ ಕಬ್ಬಿಣವು ಓಡುತ್ತದೆ, ಗಾಳಿ ಮಾತನಾಡುತ್ತದೆ ಎಂದು ಹೇಳಲಾಗಿದ್ದು, ಈಗ ಇದು ಸತ್ಯವಾಗಿದೆ. ಕಟ್ಟಿಗೆ ಮತ್ತು ಕಬ್ಬಿಣ ಅಂದರೆ ಇಂದು ರೈಲುಗಳು ಬಂದಿರುವ ಬಗ್ಗೆಯಾದರೆ, ಗಾಳಿ ಮಾತನಾಡುತ್ತದೆ ಎಂದರೆ ಮೊಬೈಲ್ ಬಂದಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.

ಕಾಲಜ್ಞಾನಿಗಳು ಹೇಳಿದಂತೆ ಕಲ್ಲಿನ ಕೋಳಿ ಕೂಗುತ್ತದೆ ಎಂಬುದು ಕೂಡ ಸತ್ಯವಾಗಿದೆ. ಕಲ್ಲಿನ ಕೋಳಿ ಎಂದರೆ ಮೊಬೈಲ್‌ನಲ್ಲಿರುವ ಸಿಮ್‌ಗಳಾಗಿವೆ. ಕಲ್ಲಿನ ರೂಪದ ಖನಿಜಗಳಲ್ಲಿರುವ ಲೋಹವನ್ನು ಬಳಸಿ ಸಿಮ್‌ ಕಾರ್ಡ್‌ ಮಾಡಲಾಗಿದ್ದು, ಈಗ ಕಲ್ಲಿನ ಕೋಳಿ ಮಾತನಾಡುತ್ತಿದೆ ಎಂಬರ್ಥದಲ್ಲಿ ಹೇಳಿದರು.

ಲೋಕಸಭಾ ಚುನಾವಣೆ ಬರಲಿ ಪ್ರಧಾನಿ ಬಗ್ಗೆ ಅಂದೇ ಮಾತನಾಡುವೆ

ಲೋಕಸಭಾ ಚುನಾವಣೆ ಸಮೀಪಿಸಲಿ. ಚುನಾವಣೆ ಹಾಗೂ ಪ್ರಧಾನಿ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗ್ತಾರಾ ಇಲ್ವೋ ಹೇಳುವೆ. ವಿಧಾನಸಭೆ ಚುನಾವಣೆ ಬಳಿಕ ಒಂದು ಪಕ್ಷ ಆಡಳಿತ ನಡೆಸುತ್ತೆ ಎಂದು ಹೇಳಿದ್ದೆ. ಹೇಳಿದ್ದಂತೆ ಆಗಿದೆ. ಅದರಂತೆ ಅವಘಡಗಳಿದ್ದಾವೆ. ಆ ಅವಘಡಗಳು ಕಳೆಯಬೇಕು. ಆ ಬಳಿಕ ಮುಂದಿನ ಭವಿಷ್ಯ ಹೇಳುವೆ. ಗುರುಗಳಲ್ಲಿ ಸಮಾಜಕಾರಕ ಹಾಗೂ ಮೋಕ್ಷಕಾರಕ ಗುರುಗಳಿದ್ದಾರೆ. ಜಾತಿಗಳು ಮನೆಯಲ್ಲಿರಬೇಕು. ಧರ್ಮ ಹೊರಗಡೆ ಇರಬೇಕು. ಆಗ ಶಾಂತಿ ಇರುತ್ತದೆ. ಮನುಷ್ಯನಿಗೆ ಯಾವುದು ಶಾಂತಿ, ನೆಮ್ಮದಿ ನೀಡುತ್ತದೆಯೋ ಅದು ಧರ್ಮವಾಗುತ್ತದೆ. ನೀರಿನ ಮೇಲೆ ದೋಣಿ ಇರಬೇಕೇ ಹೊರತು ದೋಣಿಯೊಳಗೆ ನೀರು ಬಂದರೆ ಅಪಾಯ ತಪ್ಪದು ಎಂದು ಸೂಚ್ಯವಾಗಿ ಹೇಳಿದರು.

ಇನ್ನು ಸನಾತನ ಧರ್ಮದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾವುದು ಮನುಷ್ಯನಿಗೆ ನೆಮ್ಮದಿಯನ್ನು, ಶಾಂತಿ, ಸಂತೋಷವನ್ನು ಕೊಡುತ್ತದೆಯೋ ಅದು ಧರ್ಮ. ಯಾವುದು ಗದ್ದಲ, ಅಶಾಂತಿ, ಕಿತ್ತಾಟಕ್ಕೆ ಕಾರಣವಾಗುತ್ತೋ ಅದು ಧರ್ಮವಲ್ಲ. ಕೆಲ ಶ್ರೀಗಳು ಧರ್ಮದ ಹಿಂದೆ ಹೋಗದೆ ಜಾತಿ ಹಿಂದೆ ಹೋಗ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜಾತಿ ಒಂದು ಸಣ್ಣ ವಿಷಯ, ಜಾತಿ ಇರಬೇಕು ಆದ್ರೆ ಮನಸ್ಸಿನಲ್ಲಿರಬೇಕು. ಧರ್ಮ ರಸ್ತೆಯಲ್ಲಿರಬೇಕು. ಧರ್ಮ ಜಾತಿ ಬಗ್ಗೆ ಹೇಳುವವರು, ಕೇಳುವರಿದ್ದಾರೆ. ಆದರೆ, ಒಂದು ಜಾತಿಗೆ ನೋವು ಆದರೆ ಕೇಳುವುದು ಅವರ ಕರ್ತವ್ಯ ಎಂದು ಶ್ರೀಗಳು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!