August 10, 2026
Monday, August 10, 2026
spot_img

ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಅಸಮಾಧಾನ ಸ್ಫೋಟ: ರಾಜೀನಾಮೆ ಎಚ್ಚರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಸಿಎಂ ಡಿ.ಕೆ. ಶಿವಕುಮಾರ್‌ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ನಡೆದ ಬೆನ್ನಲ್ಲೇ ಅಸಮಾಧಾನ ಆರಂಭವಾಗಿದ್ದು, ಸಚಿವ ಸ್ಥಾನ ಆಕಾಂಕ್ಷೆ ಇಟ್ಟುಕೊಂಡಿದ್ದ ಶಾಸಕರು ಗರಂ ಆಗಿದ್ದಾರೆ. ಸಚಿವ ಸ್ಥಾನ ಕೈತಪ್ಪಿದ ನಂತರ ಶಾಸಕರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜೀನಾಮೆ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದರ ಜತೆ ಅವರ ಬೆಂಬಲಿಗರು ಕೂಡ ಉಗ್ರ ಹೋರಾಟಕ್ಕೆ ಇಳಿದಿದ್ದಾರೆ.

ಯಾರಿಗೆಲ್ಲಾ ಬೇಸರ?

ವಿಜಯಪುರ ಜಿಲ್ಲೆಯ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್‌

ಬೇಳೂರು ಗೋಪಾಲಕೃಷ್ಣ

ಕೋಲಾರದ ಬಂಗಾರಪೇಟೆಯ ಶಾಸಕ ಎಸ್‌.ಎನ್‌. ನಾರಾಯಣಸ್ವಾಮಿ

ಮಾಲೂರು ಶಾಸಕ ಕೆ.ವೈ. ನಂಜೇಗೌಡ

ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್‌

ಹೊನ್ನಾಳಿ ಕ್ಷೇತ್ರದ ಹಿರಿಯ ಶಾಸಕ ಡಿ.ಜಿ. ಶಾಂತನಗೌಡ

ಮಾಜಿ ಸಚಿವ ಡಾ. ಎಚ್‌.ಸಿ ಮಹದೇವಪ್ಪ

ಹಿರಿಯ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್

ವಿಜಯನಗರ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ

ಗೋವಿಂದರಾಜನಗರ ಕ್ಷೇತ್ರದ ಶಾಸಕ ಪ್ರಿಯಕೃಷ್ಣ

ಶಾಸಕ ಅಶೋಕ ಪಟ್ಟಣ

ಶಾಸಕ ಆರ್.ಬಿ. ತಿಮ್ಮಾಪುರ

ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ

ರಿಯಾಕ್ಷನ್‌ ಏನು?

ಪ್ರಾಮಾಣಿಕರು ಹಾಗೂ ಪಕ್ಷಕ್ಕೆ ನಿಷ್ಠೆಯಿಂದ ದುಡಿಯುವವರಿಗೆ ಕಾಲ ಇಲ್ಲ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ವಿಜಯಪುರ ಜಿಲ್ಲೆಯ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ವಿ. ಪಾಟೀಲ್ ಹೇಳಿದ್ದಾರೆ. ಇನ್ನು ಉದ್ದೇಶಪೂರ್ವಕವಾಗಿ ನನಗೆ ಸಚಿವ ಸ್ಥಾನ ತಪ್ಪಿಸಲಾಗಿದೆ, ನನಗೆ ಯಾವ ಸ್ಥಾನವೂ ಬೇಡ ಶಾಸಕ ಸ್ಥಾನ ಹಾಗೂ ನಿಗಮ-ಮಂಡಳಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಗರಂ ಆಗಿದ್ದಾರೆ.

ನನ್ನ ರಾಜಕೀಯದ ಮುಂದಿನ ನಡೆ ಬಗ್ಗೆ ಬೆಂಬಲಿಗರ ಜತೆ ಚರ್ಚೆ ಮಾಡಬೇಕು. ಬಿಜೆಪಿಯಿಂದ ಆಮಿಷ ಬಂದಿದ್ದರೂ ಪಕ್ಷ ತೊರೆದಿರಲಿಲ್ಲ. ನಮ್ಮ ಕ್ಷೇತ್ರದ ಜನರು ರಾಜೀನಾಮೆ ನೀಡಿ ಎಂದರೆ ನೀಡಲು ತಯಾರಾಗಿದ್ದೇನೆ ಎಂದು ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಹೇಳಿದ್ದಾರೆ.

ಬೆಂಬಲಿಗರಿಂದ ಪ್ರತಿಭಟನೆ

ಕೋಲಾರದ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರಿಗೆ ಸಚಿವ ಸ್ಥಾನ ಕೈತಪ್ಪಿರುವುದಕ್ಕೆ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಬೆಂಬಲಿಗ ಹರೀಶ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನು ಮಹದೇವಪ್ಪ ಅವರ ಪುತ್ರ ಹಾಗೂ ಸಂಸದ ಸುನಿಲ್ ಬೋಸ್ ಅವರಿಗೆ ರಾಜೀನಾಮೆ ನೀಡುವಂತೆ ಬೆಂಬಲಿಗರು ಹಾಗೂ ಕಾರ್ಯಕರ್ತರು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಹಿರಿಯ ನಾಯಕ ತನ್ವೀರ್‌ ಸೇಠ್‌ಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಮೈಸೂರಿನಲ್ಲಿ ಪ್ರತಿಭಟನೆ ನಡೆದಿದೆ. ಈ ವೇಳೆ ತನ್ವೀರ್ ಸೇಠ್ ಅವರ ಬೆಂಬಲಿಗ ತಬ್ರೇಜ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಭಾವೋದ್ವೇಗಕ್ಕೆ ಒಳಗಾಗಬೇಡಿ

ಸಚಿವ ಸ್ಥಾನ ಸಿಗುತ್ತದೆ ಎಂದುಕೊಂಡು ಸಿಗದಿದ್ದಾಗ ಬೇಸರವಾಗುತ್ತದೆ ಎನ್ನುವ ವಿಷಯ ಅರ್ಥವಾಗುತ್ತದೆ. ಆದರೆ ಭಾವೋದ್ವೇಗಕ್ಕೆ ಒಳಗಾಗಿ ರಾಜೀನಾಮೆಯಂತಹ ನಿರ್ಧಾರ ತೆಗೆದುಕೊಳ್ಳಬೇಡಿ. ಪ್ರತಿಯೊಬ್ಬರ ಜತೆ ವೈಯಕ್ತಿಕವಾಗಿ ಮಾತನಾಡಿ ಅವರ ನೋವನ್ನು ಹೈಕಮಾಂಡ್‌ ಗಮನಕ್ಕೆ ತರುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ಮನವಿ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !