ಮುಖ್ಯಮಂತ್ರಿ ಬದಲಾವಣೆ ಮಾತು ಅಪ್ರಸ್ತುತ: ಶಾಸಕ ಯಶವಂತರಾಯಗೌಡ ಪಾಟೀಲ

ಹೊಸದಿಗಂತ ವರದಿ ವಿಜಯಪುರ:

ಮುಖ್ಯಮಂತ್ರಿ ಬದಲಾವಣೆ ಮಾತು ಅಪ್ರಸ್ತುತವಾಗಿದೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಅಧಿಕಾರ ಹಿಡಿದು ಇನ್ನು ನಾಲ್ಕೈದು ತಿಂಗಳು ಆಗಿಲ್ಲ. ಅತ್ಯಂತ ಅನುಭವಿ ಮುಖ್ಯಮಂತ್ರಿ ನಮಗೆ ಸಿಕ್ಕಿದ್ದಾರೆ. ಆಗಲೇ ಮುಖ್ಯಮಂತ್ರಿಗಳ ಬದಲಾವಣೆ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು.

ಇಂಡಿ ಪ್ರತ್ಯೇಕ ಜಿಲ್ಲೆ ಮಾಡುವ ನಿಟ್ಟಿನಲ್ಲಿ ನಾನು ಬದ್ಧನಾಗಿದ್ದು, ಈ ಬಗ್ಗೆ ನುಡಿದಂತೆ ನಡೆಯುವೆ. ಇದಕ್ಕೆ ಸಾಕಷ್ಟು ಪ್ರಕ್ರಿಯೆ ಇದೆ. ಕುಡಿಯುವ ನೀರಿನ ನಿರ್ವಹಣೆ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ಮುಂಬರುವ ದಿನಗಳು ಬಲು ಘೋರವಾಗಲಿವೆ. ಇದಕ್ಕೆ ಸಂಬಂಧಿಸಿದವರು ಈಗಲೇ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ನಮ್ಮದೆ ಸರ್ಕಾರದ ವಿರುದ್ಧ ಟೀಕೆ ಮಾಡುವುದಿಲ್ಲ. ಆದರೆ ರಾಜ್ಯದಲ್ಲಿ ಆವರಿಸಿರುವ ಭೀಕರ ಬರದಿಂದ ರೈತ ವರ್ಗ ಸೇರಿದಂತೆ ಸಾರ್ವಜನಿಕರು ಕಂಗಾಲಾಗಿದ್ದು, ಈ ಬಗ್ಗೆ ಕೂಡಲೇ ಅವರ ನೆರವಿಗೆ ಸರ್ಕಾರಗಳು ಮುಂದಾಗಬೇಕು ಎಂದು ಹೇಳಿದರು.

ಕೇವಲ ನಾವು ಹೆಸರಿಗೆ ಮಾತ್ರ ರಾಜಕಾರಣ ಮಾಡುವುದು ಅವಶ್ಯಕತೆಯಿಲ್ಲ. ಜನರ ಸಮಸ್ಯೆ ನಿವಾರಣೆ ಹಾಗೂ ಜನರ ನೋವಿಗೆ ಸ್ಪಂದಿಸದಿದ್ದರೆ ನಾವು ಯಾವ ಪುರುಷಾರ್ಥಕ್ಕಾಗಿ ಈ ಸ್ಥಾನದಲ್ಲಿ ಇರಬೇಕು ? ಆತ್ಮವಂಚನೆ ಮಾಡಿಕೊಂಡು ರಾಜಕಾರಣ ಮಾಡುವುದಕ್ಕಿಂತ ಜನಪ್ರತಿನಿಧಿ ಸ್ಥಾನ ತ್ಯಜಿಸಿ, ನಿವೃತ್ತಿಯಾಗಿರುವುದು ಉತ್ತಮ ಎಂದರು.

ನಮ್ಮ ಭಾಗದಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದೆ. ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ, ಅವರಿಗೆ ಏನು ಹೇಳಬೇಕು ಎನ್ನುವುದೇ ತಿಳಿಯದಾಗಿದೆ. ನಾನು ಜನಪರ ಚಿಂತನೆ ಹಾಗೂ ಕಾಳಜಿ ಇಟ್ಟುಕೊಂಡು ಬಂದವನು ಎಂದು ನುಡಿದರು.

ಬ್ರಿಟೀಷರ ಕಾಲದಿಂದ ಜಿಲ್ಲೆ ಬರದಿಂದ ತತ್ತರಿಸುತ್ತ ಬರುತ್ತಿದೆ. ಅದರಲ್ಲೂ ನೆರೆ ಹಾವಳಿ ಸಮಸ್ಯೆ ತಲೆದೂರುತ್ತದೆ. ಈ ಬಗ್ಗೆ ಶಾಶ್ವತ ಪರಿಹಾರ ಮಾಡುವ ನಿಟ್ಟಿನಲ್ಲಿ ಯಾವ ಕ್ರಮವೂ ಆಗುತ್ತಿಲ್ಲ. ಇದರಲ್ಲಿ ನಮ್ಮ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೂ ಸಾಕಷ್ಟಿದ್ದು, ಈ ಬಗ್ಗೆ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

- Advertisement - Ply

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!