ಉದ್ಯೋಗದಲ್ಲಿ ಸ್ಥಳೀಯರ ಕಡೆಗಣನೆ: ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ಎದುರು ಪ್ರತಿಭಟನೆ

ಹೊಸದಿಗಂತ, ವರದಿ, ಕುಶಾಲನಗರ:

ಇಲ್ಲಿಗೆ ಸಮೀಪದ ಚಿಕ್ಕಳುವಾರದಲ್ಲಿರುವ ಮಂಗಳೂರು ವಿವಿಯ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಸ್ಥಳೀಯರನ್ನು ಕಡೆಗಣಿಸಿ ಹೊರ ಜಿಲ್ಲೆಯವರಿಗೆ ಉದ್ಯೋಗ ನೀಡಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಕೇಂದ್ರದ ಪ್ರವೇಶ ದ್ವಾರದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ತೊರೆನೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಟಿ.ಬೇಬಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಸ್ಥಳೀಯವಾಗಿ ಸ್ನಾತಕೋತ್ತರ ಪದವಿಗಳನ್ನು ಪಡೆದ ನೂರಾರು ಮಂದಿ ನಿರುದ್ಯೋಗಿ ಯುವಕ ಯುವತಿಯರಿದ್ದು, ಅವರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಚಿಕ್ಕಳುವಾರ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಕೆ.ಕೆ. ಧರ್ಮಪ್ಪ, ಪ್ರತಿಭಟನಾಕಾರರಿಂದ ಅಹವಾಲು ಸ್ವೀಕರಿಸಿ, ಸ್ಥಳೀಯರಿಗೆ ಉದ್ಯೋಗದಲ್ಲಿ ಆದಷ್ಟು ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. ಸಂಸ್ಥೆಯಲ್ಲಿ ಯಾರಿಂದಲೂ ಹಣ ಪಡೆದು ಉದ್ಯೋಗ ನೀಡಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಆದಾಗ್ಯೂ ಸ್ಥಳೀಯರ ಅಹವಾಲು ಹಾಗೂ ಅಭಿಪ್ರಾಯಗಳನ್ನು ಮಂಗಳೂರು ವಿವಿ ಕುಲಪತಿಗಳ ಗಮನಕ್ಕೆ ತರಲಾಗುವುದು ಎಂದು ಧರ್ಮಪ್ಪ ತಿಳಿಸಿದರು.

ಈ ಸಂದರ್ಭ ಪಂಚಾಯಿತಿ ಸದಸ್ಯರಾದ ಶೋಭಾ ಪ್ರಕಾಶ್, ಶಿವಕುಮಾರ್, ತೀರ್ಥಾನಂದ, ಮಾಜಿ ಸದಸ್ಯ ಟಿ.ಎಲ್.ಮಹೇಶ್, ಚಿಕ್ಕ ಅಳುವಾರ ದೇವಾಲಯ ಸಮಿತಿಯ ಎ.ಕೆ. ಸುಂದರ, ಪ್ರಮುಖರಾದ ಅರ್ಜುನ್, ಎ.ಎಸ್.ಮಹೇಶ್, ಜನಾರ್ಧನ, ಮಂಜು, ಉದಯಕುಮಾರ್, ದಿನೇಶ್, ಸುಗು, ಚಿಕ್ಕಯ್ಯ, ಬಾಲಪ್ಪ, ಗಣೇಶ್, ನಿರಂಜನ ಮೊದಲಾದವರಿದ್ದರು.
ಈ ಸಂದರ್ಭ ಕುಶಾಲನಗರ ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ಚಂದ್ರಶೇಖರ್ ಬಂದೋಬಸ್ತ್ ವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!