ರಾಜಕೀಯ ಪಕ್ಷಗಳ “ಉಚಿತ ಆಮಿಷʼ ಭರವಸೆ ʼಗಂಭೀರ ವಿಚಾರʼ ಎಂದ ಸುಪ್ರೀಂ ಕೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ರಾಜಕೀಯ ಪಕ್ಷಗಳು ಚುನಾವಣೆಗೂ ಮುನ್ನ ಮತದಾರರನ್ನು ಓಲೈಸಲು ಉಡುಗೊರೆ, ಉಚಿತ ವಿದ್ಯುತ್, ನೀರು ಸೇರಿದಂತೆ ಭರಪೂರ ಭರವಸೆಗಳನ್ನು ನೀಡುವುದು ʼಗಂಭೀರ ಸಮಸ್ಯೆʼ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳು ಉಚಿತ ಕೊಡುಗೆ ಭರವಸೆ ನೀಡುವ ಪದ್ಧತಿಯನ್ನು ವಿರೋಧಿಸಿ ವಕೀಲೆ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು. ಚುನಾವಣೆ ವೇಳೆ  ಆಮಿಷಗಳನ್ನು ಒಡ್ಡುವ ಪಕ್ಷಗಳ ಚುನಾವಣಾ ಚಿಹ್ನೆಗಳು ಹಾಗೂ ನೋಂದಣಿ ರದ್ದುಗೊಳಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶಿಸಲು ಅರ್ಜಿಯಲ್ಲಿ ಕೇಳಲಾಗಿತ್ತು.
ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ, ಇದೊಂದು ಗಂಭೀರ ಸಮಸ್ಯೆಯಾಗಿದೆ. ನಮ್ಮದು ಕಲ್ಯಾಣ ರಾಜ್ಯ. ಕೆಲವರು ತೆರಿಗೆ ಪಾವತಿಸುತ್ತಾರೆ. ಮತ್ತೆ ಕೆಲವರು ಉಚಿತವಾಗಿ ಕೊಡುಗೆಗಳನ್ನು ಪಡೆಯುತ್ತಾರೆ. ಈ ರೀತಿ ಹಣವನ್ನು ವೆಚ್ಚ ಮಾಡುವುದರಿಂದ ಬೊಕ್ಕಸಕ್ಕೆ ನಷ್ಟವಾಗುತ್ತದೆ. ಜನರ ಹಣ ಮತ್ತು ಕಲ್ಯಾಣ ಕ್ರಮಗಳ ನಡುವೆ ಸಮತೋಲನವನ್ನು ಸಾಧಿಸಬೇಕು. ಈ ಹಣವನ್ನು ಅಭಿವೃದ್ಧಿ ಪ್ರಕ್ರಿಯೆಗಳಿಗೆ ಬಳಸುವಂತಾಗಬೇಕೇ ಹೊರತು ಉಚಿತ ಕೊಡುಗೆಗಳಿಗೆ ಅಲ್ಲ ಎಂದು ಅಭಿಪ್ರಾಯ ಪಟ್ಟಿದೆ. ಆದರೆ, ಉಚಿತ ಆಮಿಷಗಳನ್ನು ಒಡ್ಡುವ ಪಕ್ಷಗಳ ಮಾನ್ಯತೆ ರದ್ದುಗೊಳಿಸುವ ಮನವಿಯನ್ನು ಪರಿಗಣಿಸಲು ನಿರಾಕರಿಸಿದೆ.
ರಾಜಕೀಯ ಪಕ್ಷಗಳ ಮಾನ್ಯತೆ ರದ್ದುಗೊಳಿಸುವ ಆಲೋಚನೆಯು “ಪ್ರಜಾಪ್ರಭುತ್ವ ವಿರೋಧಿ” ಪರಿಕಲ್ಪನೆ. ಈ ವಿಚಾರವಾಗಿ ನ್ಯಾಯಾಂಗ ಮಧ್ಯ ಪ್ರವೇಶಿಸಲು ಬಯಸುವುದಿಲ್ಲ. ಶಾಸಕಾಂಗಕ್ಕೆ ಅದರದ್ದೇ ಆದ ಸ್ವಾತಂತ್ರ್ಯಗಳಿವೆ. ಜಾಗವನ್ನು ಅತಿಕ್ರಮಿಸಲು ನಾವು ಬಯಸುವುದಿಲ್ಲ. ಇದೊಂದು ಗಂಭೀರ ವಿಚಾರವಾಗಿರುವುದು ದಿಟ. ಆದ್ದರಿಂದ ಎರಡೂ ಕಡೆಯವರ ವಾದವನ್ನು ಕೂಲಂಕುಷವಾಗಿ ಆಲಿಸಬೇಕು ಎಂದಿರುವ ನ್ಯಾಯಪೀಠ ವಿಚಾರಣೆಯನ್ನು ಆಗಸ್ಟ್ 17 ಕ್ಕೆ ಮುಂದೂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!