ಹೊಸದಿಗಂತ ವರದಿ ಬೆಳಗಾವಿ:
ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದಂದು ಕುಚೋದ್ಯತನ ನಡೆಸುತ್ತಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಈ ಬಾರಿ ಜಿಲ್ಲಾಡಳಿತ ಮೂಗುದಾರ ಹಾಕಿದೆ.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆದ ಕನ್ನಡ ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಭರವಸೆ ನೀಡಿರುವ ಜಿಲ್ಲಾಧಿಕಾರಿ ನೀತೇಶ ಪಾಟೀಲ್, ಕನ್ನಡಿಗರ ಮನಗೆದ್ದಿದ್ದಾರೆ.
ಈ ಬಾರಿ ಎಂಇಎಸ್ ಕಿತಾಪತಿಗೆ ಅವಕಾಶ ಕೊಡುವುದಿಲ್ಲ. ಅದಾಗ್ಯೂ ಎಂಇಎಸ್ ಆದೇಶ ಮೀರಿ ನಡೆದುಕೊಂಡರೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಕನ್ನಡ ಸಂಘಟನೆಗಳ ಮನವಿ ಮೇರೆಗೆ ಈ ಬಾರಿ ಒಂದು ಕೋಟಿ ರೂ.ಗಳ ಅನುದಾನಕ್ಕೆ ಮನವಿ ಸಲ್ಲಿಸಲಾಗುವುದು. ಈ ಬಾರಿಯೂ ವಿಜೃಂಭಣೆಯಿಂದ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಆಶ್ವಾಸನೆ ನೀಡಿದರು.