ಕೊಡಗು: ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲು ಜಿಲ್ಲಾಧಿಕಾರಿ ಸೂಚನೆ

ಹೊಸದಿಗಂತ ವರದಿ ಮಡಿಕೇರಿ:

ಮಡಿಕೇರಿ ಪ್ರಸಕ್ತ ಪ್ರಾರಂಭವಾಗುತ್ತಿರುವ 4ನೇ ಕೋವಿಡ್ ಅಲೆಯ ಕಾರಣ ಒಳರೋಗಿಗಳಾಗಿ ಆಸ್ಪತ್ರೆಗೆ ಬರುವವರನ್ನು ಕಡ್ಡಾಯವಾಗಿ ಐಎಲ್‍ಐ ಮತ್ತು ಎಸ್‍ಎಆರ್’ಐ ಕೋವಿಡ್ ಪರೀಕ್ಷೆ (ಗಂಟಲು ದ್ರವ ಮಾದರಿ) ಮಾಡುವಂತೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಎಲ್ಲಾ ಇಲಾಖಾಧಿಕಾರಿಗಳ ಸಭೆಯಲ್ಲಿ ಚರ್ಚಿಸಿದಂತೆ ಹಾಗೂ ಜಿಲ್ಲಾಧಿಕಾರಿಗಳ ಆದೇಶದಂತೆ ಕೊಡಗು ಜಿಲ್ಲೆಯಲ್ಲಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲು ತಿಳಿಸಲಾಗಿದೆ.

ಅಲ್ಲದೆ ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿಯೂ ಐಎಲ್‍ಐ ಮತ್ತು ಎಸ್‍ಎಆರ್’ಐ ಲಕ್ಷಣಗಳು ಇರುವವರನ್ನು ಹಾಗೂ ಜನಸಂದಣಿ ಇರುವ ಪ್ರದೇಶಗಳಲ್ಲಿ (ಪ್ರವಾಸಿ ತಾಣಗಳು, ಶಾಲಾ ಕಾಲೇಜು ಹಾಗೂ ಶೈಕ್ಷಣಿಕ ಸಂಸ್ಥೆಗಳು, ಹೋಟೆಲ್‍ಗಳು, ಸಂತೆಗಳು, ಕಾರ್ಯಕ್ರಮಗಳು) ಕೋವಿಡ್ ಪರೀಕ್ಷೆ ಮಾಡಿಸಲು ತಿಳಿಸಲಾಗಿದೆ. ಅಲ್ಲದೇ ಮುಖಗವಸು ಧರಿಸಬೇಕು ಹಾಗೂ ವೈಯಕ್ತಿಕ ಸುರಕ್ಷತೆ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮುಂದೆ ಕೋವಿಡ್ ಬರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ತಿಳಿಸಿದೆ.

ಭಾರತ ಸರ್ಕಾರವು 18 ವರ್ಷ ಮೇಲ್ಪಟ್ಟ ಎಲ್ಲಾ ಸಾರ್ವಜನಿಕರಿಗೆ ಉಚಿತವಾಗಿ ಮುಂಜಾಗ್ರತಾ ಕೋವ್ಯಾಕ್ಸಿನ್ ಲಸಿಕೆ ಹಾಗೂ 15 ವರ್ಷ ಮೇಲ್ಪಟ್ಟವರಿಗೆ ಎರಡನೇ ವರಸೆಯ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದೆ. ಆದ್ದರಿಂದ ಕೊಡಗು ಜಿಲ್ಲೆಯಲ್ಲಿಯೂ ಕೂಡಾ ಎಲ್ಲಾ ಆರೋಗ್ಯ ಕೇಂದ್ರಗಳ ಲಸಿಕಾ ವಿಭಾಗದಲ್ಲಿ ಲಸಿಕೆಯನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ.

ಜಿಲ್ಲೆಯಲ್ಲಿ ಎರಡನೇ ವರಸೆಗೆ ಬಾಕಿ ಇರುವ 15 ವರ್ಷ ಮೇಲ್ಪಟ್ಟ ಒಟ್ಟು 815 ಫಲಾನುಭವಿಗಳು ಹಾಗೂ ಎರಡನೇ ವರಸೆಯ ಕೋವ್ಯಾಕ್ಸಿನ್ ಲಸಿಕೆಯನ್ನು ಪಡೆದು 6 ತಿಂಗಳು ಪೂರೈಸಿರುವ 18 ವರ್ಷ ಮೇಲ್ಪಟ್ಟ ಒಟ್ಟು 42,228 ಫಲಾನುಭವಿಗಳು ಮುಂಜಾಗ್ರತಾ ಕೋವಿಡ್ ಲಸಿಕಾಕರಣಕ್ಕೆ ಬಾಕಿ ಇದ್ದು, ಈ ಎಲ್ಲಾ ಅರ್ಹ ಫಲಾನುಭವಿಗಳು ತಮ್ಮ ಸಮೀಪದ ಆರೋಗ್ಯ ಕೇಂದ್ರದಲ್ಲಿ ಪ್ರತಿ ದಿನ ನಡೆಯುವ ಲಸಿಕಾ ಶಿಬಿರದಲ್ಲಿ ಕೋವ್ಯಾಕ್ಸಿನ್ ಲಸಿಕೆಯನ್ನು ಹಾಕಿಸಿ ಸದುಪಯೋಗ ಪಡೆದುಕೊಳ್ಳಲು ಕೊಡಗು ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ/ ಸಮುದಾಯ ಆರೋಗ್ಯ ಕೇಂದ್ರ/ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್ ಲಸಿಕೆ ಲಭ್ಯವಿರುತ್ತದೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!