ಜಿಲ್ಲಾ ಮಟ್ಟದ ವಿಜ್ಞಾನ ಸಮಾವೇಶ:ವಿದ್ಯಾರ್ಥಿ ಚೇತನ್‌ಗೆ ಕಿರಿಯ ವಿಜ್ಞಾನಿ ಪ್ರಶಸ್ತಿ

ಹೊಸದಿಗಂತ ವರದಿ ಮಡಿಕೇರಿ:

ಮಡಿಕೇರಿಯಲ್ಲಿ ನಡೆದ ಕೊಡಗು ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಏಳನೇ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿ ಚೇತನ್, ಜಿಲ್ಲಾ ಮಟ್ಟದ ಕಿರಿಯ ವಿಜ್ಞಾನಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು ಮಂಡಿಸಿದ ‘ಕಾಡಾನೆ ಮತ್ತು ಮಾನವ ಸಂಘರ್ಷಕ್ಕೆ ಕೊನೆ ಎಂದು?’ ಎಂಬ ವೈಜ್ಞಾನಿಕ ಯೋಜನಾ ಪ್ರಬಂಧಕ್ಕೆ ಈ ಪ್ರಶಸ್ತಿ ಲಭಿಸಿದೆ.

ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ ಸಂಯುಕ್ತಾಶ್ರಯದಲ್ಲಿ “ಯೋಗಕ್ಷೇಮಕ್ಕಾಗಿ ಜೀವಿ ಪರಿಸರ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳೋಣ” ಎಂಬ ಕೇಂದ್ರ ವಿಷಯದಡಿ ಮಡಿಕೇರಿ ನಗರದ ಎಎಲ್‍ಜಿ ಕ್ರೆಸೆಂಟ್ ಶಾಲೆಯಲ್ಲಿ ಕೊಡಗು ಜಿಲ್ಲಾ ಮಟ್ಟದ 30 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ನಡೆಯಿತು.

ಕಿರಿಯ ವಿಜ್ಞಾನಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದ ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್ ಅವರು, ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನ ಕಲಿಕೆಯ ಮೂಲಕ ಸಂಶೋಧನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ವಿಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಕಿವಿಮಾತಿ ಹೇಳಿದರು. ವಿದ್ಯಾರ್ಥಿಗಳು ವಿಜ್ಞಾನ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡರೆ ವಿಜ್ಞಾನ ಕ್ಷೇತ್ರದಲ್ಲಿ ಯಾವುದೇ ಸವಾಲುಗಳನ್ನು ಎದುರಿಸಲು ಸಹಕಾರಿಯಾಗುತ್ತದೆ. ಇಂತಹ ವಿಜ್ಞಾನ ಸಮಾವೇಶವು ಮಕ್ಕಳಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಸಹಕಾರಿಯಾಗಿದೆ ಎಂದರು.

ವಿದ್ಯಾರ್ಥಿಗಳು ಜಿಲ್ಲೆಯಲ್ಲಿರುವ ಪ್ರಾಕೃತಿಕ ಹಾಗೂ ಪರಿಸರ ಪೂರಕ ಸಮಸ್ಯೆಗಳನ್ನು ಗುರುತಿಸಿ ಸಮೀಕ್ಷೆ ಕೈಗೊಂಡು ಅವುಗಳನ್ನು ವಿಶ್ಲೇಷಿಸಿ, ಸಂಶೋಧಿಸುವ ಮೂಲಕ, ಅವುಗಳಿಗೆ ವೈಜ್ಞಾನಿಕ ಕಾರಣಗಳನ್ನು ಕಂಡುಕೊಳ್ಳುವ ಮೂಲಕ ಉತ್ತಮ ವೈಜ್ಞಾನಿಕ ಯೋಜನಾ ಪ್ರಬಂಧಗಳನ್ನು ತಯಾರಿಸಬೇಕು ಎಂದು ಡಾ. ಯತೀಶ್ ಉಳ್ಳಾಲ್ ಸಲಹೆ ಮಾಡಿದರು.

ಕಾಡಾನೆ ಮತ್ತು ಮಾನವ ಸಂಘರ್ಷಕ್ಕೆ ಕೊನೆ ಎಂದು? ಎಂಬ ವೈಜ್ಞಾನಿಕ ಯೋಜನಾ ಪ್ರಬಂಧ ಮಂಡಿಸಿ ಜಿಲ್ಲಾ ಮಟ್ಟದ ಕಿರಿಯ ವಿಜ್ಞಾನಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗೆ ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಸೀನಪ್ಪ ಜಿಲ್ಲಾ ಮಟ್ಟದ ಕಿರಿಯ ವಿಜ್ಞಾನಿ ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭ ಮಾತನಾಡಿದ ಅವರು, ವಿದ್ಯಾರ್ಥಿಗಳು ಇಂತಹ ವಿಜ್ಞಾನ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಡಾ.ಅಬ್ದುಲ್ ಕಲಾಂ, ಸರ್.ಎಂ.ವಿಶ್ವೇಶ್ವರಯ್ಯ, ಸರ್.ಸಿ.ವಿ.ರಾಮನ್ ಅವರ ಮಾದರಿಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!