ಹೊಸದಿಗಂತ ವರದಿ,ಬೀದರ್
ಕೋವಿಡ್-19 ವೈರಸ್ ಸೋಂಕು ನಿಯಂತ್ರಣ ಮತ್ತು ನಿರ್ವಹಣೆ ಕುರಿತು ಮಹತ್ವದ ಸಭೆ ನಡೆಸಿದ ಬಳಿಕ ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಜನವರಿ 11ರಂದು ನಗರದ ಬ್ರಿಮ್ಸ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದರು.
ಪಿಡಿಯಾಟ್ರಿಕ್ ಸೇರಿದಂತೆ ವಿವಿಧ ವಾರ್ಡಗಳಿಗೆ ಭೇಟಿ ನೀಡಿ ಅಲ್ಲಿನ ರೋಗಿಗಳೊಂದಿಗೆ ಮಾತನಾಡಿ ವೈದ್ಯಕೀಯ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಆಕ್ಸಿಜನ್ ಜನರೇಷನ್ ಪ್ಲಾಂಟ್‌ನ್ನು ಕೂಡ ಇದೆ ವೇಳೆ ವೀಕ್ಷಣೆ ನಡೆಸಿ, ಅದರ ಕಾರ್ಯನಿರ್ವಹಣೆಯ ಬಗ್ಗೆ ಮಾಹಿತಿ ಪಡೆದರು.
ಹಳೆಯ ಸಾಮಗ್ರಿ ಕಂಡು ಗರಂ ಆದ ಸಚಿವರು: ಆಸ್ಪತ್ರೆಯ ಆವರಣದಲ್ಲಿ ಬಿದ್ದಿದ್ದ ಹಳೆಯ ಸಾಮಗ್ರಿಗಳನ್ನು ಕಂಡು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಇದು ಆಸ್ಪತ್ರೆಯ ಆವರಣವಾಗಿದ್ದು, ಶುಚಿತ್ವದ ಬಗ್ಗೆ ಕೂಡ ಗಮನ ಹರಿಸಬೇಕು ಎಂದು ಸೂಚಿಸಿದರು. ಇದು ಹಿಂದಿನ ಅವಧಿಯ ಸಾಮಗ್ರಿಯಾಗಿದ್ದು, ಅನುಮತಿ ಪಡೆದು ವಿಲೇವಾರಿಗೆ ಕ್ರಮ ವಹಿಸಲಾಗುವುದು ಎಂದು ಬ್ರಿಮ್ಸ್ ಡಿರೇಕ್ಟರ್ ಚಂದ್ರಕಾoತ ಚಿಲ್ಲರಗಿ ಅವರು ಪ್ರತಿಕ್ರಿಯಿಸಿದರು.
ಮುನ್ನೆಚ್ಚರಿಕೆ ಡೋಸ್ ನೀಡಿಕೆ ಕೇಂದ್ರಕ್ಕೆ ಭೇಟಿ: ಸಚಿವರು ಇದೆ ವೇಳೆ ಬ್ರಿಮ್ಸ್ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿದರು. ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕಾರ್ತರು ಹಾಗೂ 60 ವರ್ಷ ಮೇಲ್ಪಟ್ಟ ಸಹ ಅಸ್ವಸ್ಥತೆ ಹೊಂದಿರುವ ಫಲಾನುಭವಿಗಳಿಗೆ ಕೋವಿಡ್-19 ಮುನ್ನೆಚ್ಚರಿಕೆ ಡೋಸ್ ಲಸಿಕೆ ನೀಡಿಕೆ ಕಾರ್ಯವನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಜಹೀರಾ ನಸೀಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ನಾಗೇಶ ಡಿ.ಎಲ್., ಅಪರ ಜಿಲ್ಲಾಧಿಕಾರಿಗಳಾದ ಶಿವಕುಮಾರ ಶೀಲವಂತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ರತಿಕಾಂತ ಸ್ವಾಮಿ ಹಾಗೂ ಇನ್ನೀತರರು ಇದ್ದರು.