Saturday, February 24, 2024

ವಾರಾಂತ್ಯ ಕರ್ಫ್ಯೂ ಪುನರ್ ಪರಿಶೀಲಿಸಿ: ರಮಾನಾಥ ರೈ ಒತ್ತಾಯ

ಹೊಸದಿಗಂತ ವರದಿ,ಮಂಗಳೂರು:

ವಾರಾಂತ್ಯ ಕರ್ಫ್ಯೂ, ಲಾಕ್‌ಡೌನ್ ಮಾಡಿ ಕೊರೋನಾ ಎದುರಿಸಲು ಮುಂದಾದರೆ ಜನರು ಮತ್ತೆ ತೀವ್ರ ಸಮಸ್ಯೆಗೆ ಒಳಗಾಗಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ವಾರಾಂತ್ಯ ಕರ್ಫ್ಯೂ ಹೇರಬಾರದು ಎಂದು ಜನರು ಸಾರ್ವತ್ರಿಕವಾಗಿ ಅಭಿಪ್ರಾಯಪಡುತ್ತಿದ್ದಾರೆ. ಹಾಗಾಗಿ ಜಿಲ್ಲಾಡಳಿತ, ಉಸ್ತುವಾರಿ ಸಚಿವರು ವೀಕೆಂಡ್ ಕರ್ಫ್ಯೂವನ್ನು ಪುನರ್ ಪರಿಶೀಲಿಸಬೇಕು ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಆಗ್ರಹಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಹಲವು ಬ್ರಹ್ಮಕಲಶೋತ್ಸವ, ನೇಮೋತ್ಸವ, ಕಾಲಾವಧಿ ಜಾತ್ರೆಗಳು ನಿಗದಿಯಾಗಿದ್ದು, ಅವುಗಳನ್ನು ಮುಂದೂಡುವುದು ಕಷ್ಟ. ವಿವಾಹ ಕಾರ್ಯ ಜತೆಗೆ ಎಲ್ಲ ಧರ್ಮಗಳ ಧಾರ್ಮಿಕ ಆಚರಣೆಗಳು ಕೂಡ ಈ ಸಮಯದಲ್ಲೇ ಹೆಚ್ಚಾಗಿ ನಡೆಯುತ್ತಿವೆ. ಯಕ್ಷಗಾನದ ಸಂಪ್ರದಾಯ ಆಚರಣೆಗೂ ತೀವ್ರ ತೊಡಕುಂಟಾಗುತ್ತದೆ. ಎಲ್ಲ ಧರ್ಮದವರಿಗೂ ವೀಕೆಂಡ್ ಕರ್ಫ್ಯೂ ಸಂಕಷ್ಟಗಳ ಸರಮಾಲೆಯನ್ನೇ ತಂದೊಡ್ಡಲಿದೆ. ಜಿಲ್ಲಾಡಳಿತ ಈ ಎಲ್ಲ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡು ಜನರಿಗೆ ಪೂರಕವಾಗಿ ಸೂಕ್ತ ನಿರ್ಧಾರ ಮಾಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಲಾಕ್‌ಡೌನ್ ಇನ್ನು ಮಾಡುವುದಿಲ್ಲ. ಈ ಹಿಂದೆ ಅನುಭವದ ಕೊರತೆಯಿಂದ ಲಾಕ್‌ಡೌನ್ ಮಾಡಲಾಗಿತ್ತು ಎಂದು ಸಚಿವ ಸುಧಾಕರ್ ಹೇಳಿದ್ದಾರೆ. ಹಾಗಾದರೆ ವೀಕೆಂಡ್ ಕರ್ಫ್ಯೂವನ್ನು ಮತ್ತೆ ಹೇರುವುದು ಏಕೆ ಎಂದು ಪ್ರಶ್ನಿಸಿದ ರೈ, ಈಗಿನ ಹೊಸ ರೂಪಾಂತರಿ ಒಮಿಕ್ರಾನ್ ಜನರ ಪ್ರಾಣಕ್ಕೆ ಕುತ್ತು ತಂದಿಲ್ಲ, ಜನರಿಗೂ ಹೆಚ್ಚು ಸಮಸ್ಯೆಯಾಗಿಲ್ಲ. ಹಾಗಾಗಿ ವೀಕೆಂಡ್ ಕರ್ಫ್ಯೂ ಅಗತ್ಯವಿಲ್ಲ. ಇದರ ಬದಲು ಬೇರೆ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು ಎಂದರು.
ವೀಕೆಂಡ್ ಕರ್ಫ್ಯೂ, ಲಾಕ್‌ಡೌನ್ ಮಾಡಬೇಕಾದರೆ ಮನೆಯಿಂದ ಹೊರಗೆ ಹೋಗಲು ಸಾಧ್ಯವಾಗದ ಜನರಿಗೆ ಸಕಲ ಸವಲತ್ತುಗಳನ್ನು ಒದಗಿಸಬೇಕಾಗುತ್ತದೆ. ವ್ಯಾಪಾರಸ್ಥರು ಕೂಡ ಸಂಪೂರ್ಣ ನೆಲಕಚ್ಚುತ್ತಾರೆ. ಕಳೆದೆರಡು ಅಲೆಗಳಲ್ಲಿ ಲಾಕ್‌ಡೌನ್ ಕಾರಣದಿಂದ ಅನೇಕರು ಉದ್ಯೋಗ ಕಳೆದುಕೊಂಡರು, ಇನ್ನು ಮುಂದೆ ಹಾಗಾಗಬಾರದು. ಜನರ ಜೀವನದ ಮೇಲೆ ಸರಕಾರ ಚೆಲ್ಲಾಟವಾಡಬಾರದು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಶಶಿಧರ ಹೆಗ್ಡೆ, ಹರಿನಾಥ್, ಶಾಹುಲ್ ಹಮೀದ್, ಪ್ರಕಾಶ್ ಸಾಲ್ಯಾನ್, ನೀರಜ್‌ಪಾಲ್, ನಝೀರ್ ಬಜಾಲ್ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!