ಅಂತೂ..ಸಿಕ್ತು ಸರ್ಕಾರಿ ಬಸ್‌ ನಿಲುಗಡೆಗೆ ಅನುಮತಿ: ವಿದ್ಯಾರ್ಥಿಗಳು, ಭಕ್ತರು ನಿಟ್ಟುಸಿರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ದೊಟ್ಟಹನುಮೇನಹಳ್ಳಿ ಗೇಟ್‌ ಬಳಿ ಕೆಎಸ್‌ಆರ್‌ಟಿಸಿ ಬಸ್‌ ನಿಲುಗಡೆಗೆ ಚಿಕ್ಕಬಳ್ಳಾಪುರ ವಿಭಾಗೀಯ ನಿಯಂತ್ರಣಾಧಿಕಾರಿ ಆದೇಶಿಸಿದ್ದಾರೆ. ಬೆಂಗಳೂರು-ಹಿಂದೂಪುರ ರಾಜ್ಯ ಹೆದ್ದಾರಿಯಲ್ಲಿ ಬರುವ ಈ ಊರು ಬಸ್‌ ನಿಲ್ದಾಣದಿಂದ ಸುಮಾರು ಎರಡು ಕಿಮೀ ದೂರದಲ್ಲಿದೆ. ಇಲ್ಲಿಂದ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇತ್ತು. ದೊಡ್ಡಹುಸೇನ್‌ಪುರ ಹಾಗೂ ದೊಡ್ಡಹನುಮೇನಹಳ್ಳಿ ಈ ಎರಡೂ ಊರಿನ ಗ್ರಾಮಸ್ಥರಿಗೆ ಇರೋದು ಇದೊಂದೇ ಬಸ್‌ ನಿಲ್ದಾಣ. ಅಷ್ಟು ದೂರದಿಂದ ಬಿಸಿಲು, ಮಳೆ, ಚಳಿ ಏನೇ ಇರಲಿ ನಡೆದುಕೊಂಡು ಬರೋದು ಒಂದು ಸಾಹಸ ಆದ್ರೆ, ಬಸ್‌ಗಾಗಿ ಕಾಯುವುದು ಮತ್ತೊಂದು ಸಾಹಸ. ಸುಮಾರು ಗಂಟೆ ಗಂಟೆ ಕಾದರೂ ಬಸ್‌ಗಳು ಬಾರದೇ ಪ್ರಯಾಣಿಕರು ಪರದಾಡುವ ಸ್ಥಿತಿ ಬಂದಿತ್ತು. ಈ ಸಮಸ್ಯೆ ಇಂದು ನಿನ್ನೆಯದಲ್ಲ, ಬಹಳಷ್ಟು ವರ್ಷಗಳಿಂದ ಗ್ರಾಮಸ್ಥರಿಗೆ ಈ ಕಷ್ಟ ತಪ್ಪಿಲ್ಲ.

ದಿನನಿತ್ಯ ನೂರಾರು ಕರಾರಸಾನಿ ಬಸ್‌ಗಳು ಈ ಮಾರ್ಗದಲ್ಲಿ ಸಂಚರಿಸಿದರೂ ನಿಲ್ಲಿಸುತ್ತಿರಲಿಲ್ಲ. ಪ್ರತಿದಿನ ಈ ಎರಡೂ ಗ್ರಾಮಗಳಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕೆಲಸದ ನಿಮಿತ್ತ ನೂರಾರು ಮಂದಿ ಪ್ರಯಾಣ ಬೆಳೆಸುವವರಿಗೆ ಇದೊಂದು ದೊಡ್ಡ ತಲೆನೋವಾಗಿತ್ತು. ರಾತ್ರಿ ಪ್ರಯಾಣವಂತೂ ಹೇಳತೀರದು. ಸಂಜೆ ಆರು ಗಂಟೆ ನಂತರ ಯಾವುದೇ ಆಟೋ, ಖಾಸಗಿ ಬಸ್‌ ಕೂಡ ಲಭ್ಯವಿಲ್ಲ. ಈ ಬಗ್ಗೆ ಅನೇಕ ಬಾರಿ ಮನವಿ ಮಾಡಿದರೂ ಯಾವೊಬ್ಬ ಅಧಿಕಾರಿಯೂ ತಲೆಕೆಡಿಸಿಕೊಂಡಿರಲಿಲ್ಲ. ಇದೀಗ ಚಿಕ್ಕಬಳ್ಳಾಪುರ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ಹಿಮವರ್ಧನ ನಾಯ್ಡು ಅಲ್ಲೂರಿ ಗ್ರಾಮಸ್ಥರ ಮನವಿಗೆ ಸ್ಪಂದಿಸಿ, ಸರ್ಕಾರಿ ಬಸ್‌ ನಿಲುಗಡೆಗೆ ಆದೇಶ ಹೊರಡಿಸಿದ್ದಾರೆ.

ಘಾಟಿ ಸುಬ್ರಹ್ಮಣ್ಯಕ್ಕೆ ಬಸ್‌ ಸೌಲಭ್ಯ

ದೊಟ್ಟಬಳ್ಳಾಪುರ ತಾಲೂಕಿನ ಪ್ರಖ್ಯಾತ ಘಾಟಿ ಸುಬ್ರಹ್ಮಣ್ಯಕ್ಕೂ ಬಸ್‌ಗಳಿಲ್ಲದೆ ಭಕ್ತರು ಪರದಾಡುವಂತಾಗಿತ್ತು. ಅಲ್ಲಿನ ಜನರ ಮನವಿ ಮೇರೆಗೆ ವಿಭಾಗೀಯ ನಿಯಂತ್ರಣಾಧಿಕಾರಿ ಬಸ್‌ ಸೌಲಭ್ಯವನ್ನು ಒದಗಿಸಿದ್ದಾರೆ. ಬೆಳಗ್ಗೆ ಸಂಜೆ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸ್‌ ಬಿಡುಗಡೆ ಮಾಡಲಾಗಿದೆ ಎಂದು ಹಿಮವರ್ಧನ ನಾಯ್ಡು ಅಲ್ಲೂರಿ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!