ಮುಲ್ತಾನ್ ವಶಕ್ಕೆ ಎಲ್ಲಾ ಕಪಟ ತಂತ್ರ ಪ್ರಯೋಗಿಸಿದ್ದ ಬ್ರಿಟೀಷರು.. ಆದರೆ ಮುಲ್ರಾಜ್ ಎಂಬ ಧೀರ ಅವರ ಎದುರಿಗೆ ನಿಂತಿದ್ದ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ ( ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ವಿಶೇಷ)
ಪಂಜಾಬಿನ ಪ್ರಖ್ಯಾತ ಮಹಾರಾಜ ರಂಜಿತ್ ಸಿಂಗ್ ಅವರ ವೀರ ಸೇನಾಪತಿ ದಿವಾನ್ ಸಾವನ್ ಮಾಲ್ ಅವರ ಮಗ ದಿವಾನ್ ಮುಲ್ರಾಜ್.
ಅಫ್ಘಾನಿಸ್ತಾನದಿಂದ ಮುಲ್ತಾನ್ ವಶಪಡಿಸಿಕೊಳ್ಳುವ ಮೂಲಕ ಸಾವನ್ ಮಾಲ್ ವಿಶಿಷ್ಟ ಸಾಧನೆ ಮೆರೆದಿದ್ದರು. ಈ ಮಹಾನ್‌ ಸೇನಾನಿಗೆ ಪುರಸ್ಕಾರವಾಗಿ ಅವರ ಮಗನಾದ ಮುಲ್ರಾಜ್ ರನ್ನು ಮುಲ್ತಾನ್‌ನ ದಿವಾನರನ್ನಾಗಿ ನೇಮಿಸಲಾಗಿತ್ತು. 1839ರಲ್ಲಿ ರಂಜಿತ್ ಸಿಂಗ್ ಸಾವಿನ ನಂತರ ಲಾಹೋರ್ ದರ್ಬಾರ್ ಸರಣಿ ಪಿತೂರಿಗಳಿಗೆ ಸಾಕ್ಷಿಯಾಯಿತು. 1845 ರಲ್ಲಿ ನಡೆದ ಮೊದಲ ಆಂಗ್ಲೋ-ಸಿಖ್ ಯುದ್ಧದಲ್ಲಿ ಸಿಖ್ ಸೋಲಿಗೆ ಇದು ಒಂದು ಕಾರಣವಾಗಿತ್ತು. ಯುದ್ಧದ ನಂತರ, ಬ್ರಿಟಿಷರು ಪಂಜಾಬಿನ ಆಡಳಿತವನ್ನು ಪುನರ್ರಚಿಸಿದರು. ಲಾಹೋರ್‌ನ ಹೊಸ ಬ್ರಿಟಿಷ್ ರೆಸಿಡೆಂಟ್ ಆಗಿ ನೇಮಕಗೊಂಡ ಸರ್ ಫ್ರೆಡ್ರಿಕ್ ಕ್ಯೂರಿ, ತನ್ನ ಮೊದಲ ಕೆಲಸವಾಗಿ ಮುಲ್ತಾನ್‌ನಲ್ಲಿ ತೆರಿಗೆಯನ್ನು ಹೆಚ್ಚಿಸಿದ. ಈ ನಿರ್ಧಾರ ವ್ಯಾಪಕ ಅಸಮಾಧಾನಕ್ಕೆ ಕಾರಣವಾಯಿತು.
ರಂಜಿತ್ ಸಿಂಗ್ ಮತ್ತು ಅವರ ಕುಟುಂಬಕ್ಕೆ ನಿಷ್ಠರಾಗಿ ಉಳಿದಿದ್ದ ಮುಲ್ರಾಜ್ ತನ್ನ ದಿವಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಮುಲ್ರಾಜ್ ಸ್ಥಾನಕ್ಕೆ ಕಾನ್ ಸಿಂಗ್ ಮಾನ್ ಅವರನ್ನು ನೇಮಿಸಲಾಯಿತು. ಕಾನ್ ಸಿಂಗ್ ಏಪ್ರಿಲ್ 18, 1848 ರಂದು ಬೆಂಗಾಲ್ ಸಿವಿಲ್ ಸರ್ವೀಸ್‌ನ ಪ್ಯಾಟ್ರಿಕ್ ವ್ಯಾನ್ಸ್ ಆಗ್ನ್ಯೂ ಮತ್ತು ಬಾಂಬೆ ಫ್ಯುಸಿಲಿಯರ್ ರೆಜಿಮೆಂಟ್‌ನ ಲೆಫ್ಟಿನೆಂಟ್ ವಿಲಿಯಂ ಆಂಡರ್ಸನ್ ಅವರೊಂದಿಗೆ ಮುಲ್ತಾನ್ ಗೇಟ್‌ಗೆ ಬಂದರು. ಗೂರ್ಖಾಗಳ ಸಣ್ಣ ಬೆಂಗಾವಲು ಅವರ ಜೊತೆಗಿತ್ತು. ಮರುದಿನ ಮುಲ್ರಾಜ್ ನಗರದ ಕೀಲಿಗಳನ್ನು ಇಬ್ಬರು ಬ್ರಿಟಿಷ್ ಅಧಿಕಾರಿಗಳಿಗೆ ಹಸ್ತಾಂತರಿಸಬೇಕಿತ್ತು. ಅಷ್ಟರಲ್ಲಿ ನಡೆದ ಒಂದೊಂದೇ ಘಟನಾವಳಿಗಳಿಗಳು ಭಾರತದ ಸ್ವಾತಂತ್ರ್ಯ ಹೋರಾಟದ ದಿಕ್ಕನ್ನೇ ಬದಲಾಯಿಸಿಬಿಟ್ಟವು.
ಏಪ್ರಿಲ್ 19 ರಂದು ಇಬ್ಬರು ಅಧಿಕಾರಿಗಳು ಸಿಟಾಡೆಲ್‌ನಿಂದ ಹೊರಬರಲು ಪ್ರಾರಂಭಿಸಿದಾಗ ಮುಲ್ರಾಜ್‌ ಅವರ ನೇತೃತ್ವದ ಸಿಖ್ ಸೇನೆಯ ಸೈನಿಕನೊಬ್ಬ ವ್ಯಾನ್ಸ್ ಆಗ್ನ್ಯೂ ಹಾಗೂ ಆಂಡರ್ಸನ್ ಮೇಲೆ ದಾಳಿ ನಡೆಸಿ ಇಬ್ಬರೂ ಅಧಿಕಾರಿಗಳನ್ನು ಕೊಂದು ಹಾಕಿದ. ಈ ಮುಲ್ತಾನ್‌ನಲ್ಲಿನ ಘಟನೆಗಳು ಬ್ರಿಟಿಷರಿಗೆ ಎರಡನೇ ಆಂಗ್ಲೋ-ಸಿಖ್ ಯುದ್ಧದಲ್ಲಿ ಹೋರಾಡಲು ಕಾರಣವನ್ನು ನೀಡಿತು.
ರಕ್ತಪಿಪಾಸು ನಿರಂಕುಶಾಧಿಕಾರಿಯಾದ ಮುಲ್ರಾಜ್, ದುಲೀಪ್ ಸಿಂಗ್ ಮತ್ತು ಅವರ ಮಿತ್ರರಾದ ಬ್ರಿಟಿಷರನ್ನು ಪದಚ್ಯುತಗೊಳಿಸಲು ಈ ಹತ್ಯಾಕಾಂಡ ನಡೆಸಿದ ಎಂದು ಬ್ರಿಟೀಷರು ಬಿಂಬಿಸಿದರು. ಮುಲ್ರಾಜ್ ನನ್ನು ಮಹಾರಾಜ(ದಿಲೀಪ್‌ ಸಿಂಗ್) ಶತ್ರು ಎಂದು ಬಿಂಬಿಸುವ ಮೂಲಕ ಇತರ ಪ್ರಭಾವಿ ಸಿಖ್ಖರು ಆತನ ಜೊತೆಗೆ ಸೇರಿ ದಂಗೆ ದೊಟ್ಟದಾಗಿ ಹರಡುವುದನ್ನು ತಡೆಯಲು ಚಾಣಾಕ್ಷ್ಯ ಬ್ರಿಟೀಷರು ಈ ತಂತ್ರವನ್ನು ಹೂಡಿದ್ದರು. ಬ್ರಿಟೀಷರ ಮೊಸಳೆ ಕಣ್ಣೀರಿಗೆ ಕರಗುವಷ್ಟು ಬುದ್ಧಿಗೇಡಿಗಳು ಪಂಜಾಬಿಗಳಾಗಿರಲಿಲ್ಲ. ಖಾಲ್ಸಾ ರೆಜಿಮೆಂಟ್‌ ಸೈನ್ಯವು ಮುಲ್ರಾಜ್ ತ್ವರಿತವಾಗಿ ಮುಲ್ರಾಜ್ ರ ನೆರವಿಗೆ ಧಾವಿಸಿತು. ಸಿಖ್ ಸಂತ ಮಹಾರಾಜ್ ಸಿಂಗ್ ಮುಲ್ರಾಜ್‌ಗೆ ಬೆಂಬಲವಾಗಿ ಖಾಲ್ಸಾ ಸೈನಿಕರನ್ನು ಮುಲ್ತಾನ್‌ಗೆ ನಿರ್ದೇಶಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇನ್ನು ಬಿಟ್ಟರೆ ಈ ದಂಗೆ ಆಭರತಕ್ಕೆಲ್ಲಾ ಹರಡಿ ತಮಗೆ ಉಳಿಗಾಲವಿಲ್ಲ ಎಂದರಿತ ಬ್ರಿಟೀಷರು ಜನರಲ್ ವಿಶ್ ನೇತೃತ್ವದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಬಂಗಾಳ ಸೇನೆಯು ಮುಲ್ತಾನ್‌ಗೆ ಮುತ್ತಿಗೆ ಹಾಕಿತು.
1849 ರ ಜನವರಿ 2 ರಂದು ವಿಶ್ ಆಕ್ರಮಣಕ್ಕೆ ಆದೇಶಿಸಿದ. ಭೀಕರ ಯುದ್ಧದಿಂದ ನಗರವು ರಕ್ತಸಿಕ್ತಗೊಂಡಿತು, ಅನೇಕ ರಕ್ಷಕರು ಮತ್ತು ನಾಗರಿಕರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆ ಮಾಡಲಾಯಿತು. ಜನರ ಸಾವು ನೋವುಗಳಿಂದ ಬೇಸತ್ತ ಮುಲ್ರಾಜ್ ಜನವರಿ 22 ರಂದು ತನ್ನ ಜನರೊಂದಿಗೆ ಶರಣಾದರು. ಮುಲ್ತಾನ್ ಪಟ್ಟಣವನ್ನು ಬ್ರಿಟಿಷರು ಭಾರೀ ಪ್ರಮಾಣದಲ್ಲಿ ಲೂಟಿ ಮಾಡಿದರು. ಮುಲ್ತಾನ್ ಪತನದ ನಂತರ, ವ್ಯಾನ್ಸ್ ಆಗ್ನ್ಯೂ ಮತ್ತು ಆಂಡರ್ಸನ್ ಅವರ ಕೊಲೆಗಳಿಗಾಗಿ ಮುಲ್ರಾಜ್ ಅವರನ್ನು ವಿಚಾರಣೆಗೆ ಒಳಪಡಿಸಿ ಅವನಿಗೆ ಮರಣದಂಡನೆ ವಿಧಿಸಲಾಯಿತು. ಆ ಬಳಿಕ ಅದನ್ನು ದೇಶಭ್ರಷ್ಟ ಜೀವನಕ್ಕೆ ಬದಲಾಯಿಸಲಾಯಿತು. ಅವರನ್ನು ಸಿಂಗಾಪುರಕ್ಕೆ ಗಡಿಪಾರು ಮಾಡಬೇಕಾಗಿತ್ತು, ಆದರೆ ಅನಾರೋಗ್ಯದ ಕಾರಣದಿಂದ ಅವರನ್ನು ಬಂಗಾಳದ ಫೋರ್ಟ್ ವಿಲಿಯಂನಲ್ಲಿ ಬಂಧಿಸಲಾಯಿತು. ನಂತರ, ಅವರನ್ನು ಬನಾರಸ್‌ಗೆ ವರ್ಗಾಯಿಸಬೇಕಾಗಿತ್ತು, ಆದರೆ ಅವರು ಆಗಸ್ಟ್ 11, 1851 ರಂದು ಬಕ್ಸರ್ ಜೈಲಿನಲ್ಲಿ ನಿಧನರಾದರು. ಆತನ ನಿಷ್ಠಾವಂತ ಸೇವಕರುಗಂಗಾ ನದಿಯ ದಡದಲ್ಲಿ ಅವರ ದೇಹವನ್ನು ಸುಟ್ಟುಹಾಕಿದರು. ಪಂಜಾಬ್ ಸಾಮ್ರಾಜ್ಯದ ಉಳಿವಿಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ನಿಷ್ಠಾವಂತ ಸೈನಿಕರಲ್ಲಿ ಮುಲ್ರಾಜ್‌ ಒಬ್ಬರಾಗಿ ಪಂಜಾಬಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!