October 12, 2026
Monday, October 12, 2026
spot_img

ತಿರುಪತಿ ಗೋವಿಂದನ ಮೊರೆ ಹೋದ ಡಿಕೆಶಿ & ಫ್ಯಾಮಿಲಿ: ರಾಜಕೀಯ ವಲಯದಲ್ಲಿ ಭಾರಿ ಚರ್ಚೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕರ್ನಾಟಕದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಇಂದಿಗೆ ಸರಿಯಾಗಿ 3 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪತ್ನಿ ಸಮೇತರಾಗಿ ಆಂಧ್ರಪ್ರದೇಶದ ಪವಿತ್ರ ತಿರುಮಲ ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮತ್ತು ಅಧಿಕಾರ ಹಂಚಿಕೆಯ ಭಾರಿ ಚರ್ಚೆಗಳ ಬೆನ್ನಲ್ಲೇ ಡಿಕೆಶಿ ಈ ದಿಢೀರ್ ತಿರುಪತಿ ಭೇಟಿ ತೀವ್ರ ರಾಜಕೀಯ ಮಹತ್ವ ಪಡೆದುಕೊಂಡಿದೆ. ಕಾಂಗ್ರೆಸ್ ಸರ್ಕಾರ ಮೂರು ವರ್ಷ ಪೂರೈಸುತ್ತಿರುವ ಈ ಸಂದರ್ಭದಲ್ಲಿ ಸಿಎಂ ಕುರ್ಚಿಯ ಆಕಾಂಕ್ಷಿಯಾಗಿರುವ ಡಿ.ಕೆ. ಶಿವಕುಮಾರ್ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ತಿಮ್ಮಪ್ಪನಿಗೆ ಮೊರೆ ಹೋಗಿದ್ದಾರಾ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. ಈ ಧಾರ್ಮಿಕ ಭೇಟಿಯ ವೇಳೆ ಡಿಕೆಶಿ ಅವರ ಆಪ್ತ ಹಾಗೂ ಕುಣಿಗಲ್ ಶಾಸಕ ರಂಗನಾಥ್ ಕೂಡ ಜೊತೆಯಲ್ಲಿದ್ದರು.

ಇಂದು ಬೆಳಿಗ್ಗೆ ತಿರುಪತಿ ತಿಮ್ಮಪ್ಪನ ವಿಐಪಿ ಬ್ರೇಕ್ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲರ ಏಳಿಗೆ ಮತ್ತು ರಾಜ್ಯದ ಕಲ್ಯಾಣಕ್ಕಾಗಿ ಪ್ರಾರ್ಥಿಸಿರುವುದಾಗಿ ತಿಳಿಸಿದರು. ವೆಂಕಟೇಶ್ವರನ ದರ್ಶನ ಮುಗಿಸಿಕೊಂಡು ವಿಶೇಷ ವಿಮಾನದ ಮೂಲಕ ಮರಳಲಿರುವ ಡಿಸಿಎಂ, ಇಂದು ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿರುವ ಸರ್ಕಾರದ 3ನೇ ವರ್ಷದ ‘ಸಾಧನಾ ಸಮಾವೇಶ’ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಭಾಗಿಯಾಗಲಿದ್ದಾರೆ.

Must Read