ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನಾಳೆ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣ ವಚನ ಸಮಾರಂಭವು ಬೆಂಗಳೂರಿನ ಲೋಕಭವನದಲ್ಲಿ ನಡೆಯಲಿದ್ದು, ಈ ಹಿನ್ನೆಲೆ ನಗರದ ಪ್ರಮುಖ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಅಡೆತಡೆಗಳು ಉಂಟಾಗಲಿದೆ. ಈ ಕಾರಣಕ್ಕೆ ಸವಾರರು ನಾಳೆ ಪರ್ಯಾಯ ಮಾರ್ಗ ಹಾಗೂ ಮಾರ್ಗಸೂಚಿಗಳನ್ನು ಬಳಸುವಂತೆ ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ.
ಲೋಕಭವನದ ಗಾಜಿನ ಮನೆಯಲ್ಲಿ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದ್ದು, ದೇಶದ ಹಾಗೂ ರಾಜ್ಯದ ಅತಿಗಣ್ಯ ಮತ್ತು ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಇದರಿಂದ ಲೋಕಭವನದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ಹಾಗೂ ರೇಸ್‌ಕೋರ್ಸ್ ರಸ್ತೆಯ ಸಾರ್ವಜನಿಕ ಕಾರ್ಯಕ್ರಮದ ನಿಮಿತ್ತ ಹೆಚ್ಚಿನ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇದ್ದು, ಜನರ ಸುಗಮ ಸಂಚಾರದ ಹಿತದೃಷ್ಟಿಯಿಂದ ಜೂನ್ 3ರ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 8ರ ವರೆಗೆ ಕೆಲ ರಸ್ತೆಗಳಲ್ಲಿ ಸಂಚಾರ ಮಾರ್ಪಾಡುಗಳನ್ನು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಚಾರ ನಿರ್ಬಂಧಿತ ರಸ್ತೆಗಳು
ಕಾರ್ಯಕ್ರಮದಲ್ಲಿ ಭಾಗವಹಿಸಲು ಅಧಿಕೃತ ಪಾಸ್ ಹೊಂದಿರುವ ವಾಹನಗಳನ್ನು ಹೊರತುಪಡಿಸಿ, ಈ ರಸ್ತೆಗಳಲ್ಲಿ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
- ಕಬ್ಬನ್ ರಸ್ತೆಯ ಬಿ.ಆರ್.ವಿ ಜಂಕ್ಷನ್‌ನಿಂದ ಸಿ.ಟಿ.ಓ. ಜಂಕ್ಷನ್ ವರೆಗೆ ಹಾಗೂ ಸಿ.ಟಿ.ಓ. ವೃತ್ತದಿಂದ ಲೋಕಭವನದವರೆಗೆ.
- ಬಾಳೇಕುಂದ್ರಿ ಜಂಕ್ಷನ್ ನಿಂದ ಅಂಬೇಡ್ಕರ್ ರಸ್ತೆ ಕಡೆಗೆ ಬರುವ ವಾಹನಗಳು.
- ಡಾ. ಅಂಬೇಡ್ಕರ್ ರಸ್ತೆಯಲ್ಲಿ ಕೆ.ಆರ್. ಸರ್ಕಲ್ ಕಡೆಯಿಂದ ಕಾಫಿಬೋರ್ಡ್ ಜಂಕ್ಷನ್‌ವರೆಗೆ.
- ರೇಸ್‌ಕೋರ್ಸ್ ರಸ್ತೆಯ ಟ್ರಿಲೈಟ್ ಜಂಕ್ಷನ್‌ನಿಂದ ಸುಬ್ಬಣ್ಣ ಜಂಕ್ಷನ್ ವರೆಗೆ ಹಾಗೂ ಓಲ್ಡ್ ಜೆ.ಡಿ.ಎಸ್ ಕ್ರಾಸ್‌ನಿಂದ ಸುಬ್ಬಣ್ಣ ಜಂಕ್ಷನ್.
- ಕ್ಲೀನ್ಸ್ ಜಂಕ್ಷನ್ ಕಡೆಯಿಂದ ಸಿ.ಟಿ.ಓ ಕಡೆಗೆ ಸಂಚರಿಸುವ ವಾಹನಗಳು.
- ಸೆಂಟ್ ಮಾರ್ಕ್ಸ್ ರಸ್ತೆಯಿಂದ ಸಿ.ಟಿ.ಓ. ಜಂಕ್ಷನ್ ಕಡೆಗೆ ಬರುವ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧ.
ಪರ್ಯಾಯ ಮಾರ್ಗಗಳು ವ್ಯವಸೆಗಳು
- ಕಬ್ಬನ್ ರಸ್ತೆಯ ಸವಾರರು ಬಿ.ಆರ್.ವಿ ಜಂಕ್ಷನ್‌ನಿಂದ ಸಿ.ಟಿ.ಓ. ಕಡೆಗೆ ಹೋಗುವ ವಾಹನಗಳು ಬಿ.ಆರ್.ವಿ. ಜಂಕ್ಷನ್ ಬಳಿ ಶಿವಾಜಿನಗರ ಕಡೆಗೆ ಬಲತಿರುವು ಅಥವಾ ಅನಿಲ್ ಕುಂಬ್ಳೆ ಜಂಕ್ಷನ್ ಕಡೆಗೆ ಎಡ ತಿರುವು ಪಡೆದು ಸಂಚರಿಸಬಹುದು.
- ಕ್ವೀನ್ಸ್ ರಸ್ತೆ ಮತ್ತು ಶಿವಾಜಿನಗರದಿಂದ ಬರುವ ಸವಾರರು ಈ ಕಡೆಯಿಂದ ಬರುವ ವಾಹನಗಳು ಬಾಳೇಕುಂದ್ರಿ ಜಂಕ್ಷನ್ ಬಳಿ ಕನ್ನಿಂಗ್‌ಹ್ಯಾಮ್ ರಸ್ತೆಯ ಮುಖಾಂತರ ಸಂಚರಿಸಬಹುದಾಗಿದೆ.
- ಕೆ.ಆರ್. ಸರ್ಕಲ್ ಕಡೆಯಿಂದ ಕಾಫಿಬೋರ್ಡ್ ಜಂಕ್ಷನ್ ಕಡೆಗೆ ಸಂಚರಿಸುವ ವಾಹನಗಳು ನೃಪತುಂಗ ರಸ್ತೆಯ ಮುಖಾಂತರ ಸಂಚರಿಸಬಹುದಾಗಿದೆ.
- ರೇಸ್‌ಕೋರ್ಸ್ ರಸ್ತೆಯಿಂದ ಟ್ರಿಲೈಟ್ ಜಂಕ್ಷನ್‌ನಿಂದ ಸುಬ್ಬಣ್ಣ ಜಂಕ್ಷನ್ ವರೆಗೆ ಸಂಚರಿಸುವ ವಾಹನಗಳು ಟ್ರಿಲೈಟ್ ಜಂಕ್ಷನ್ ಕಡೆಯಿಂದ ಶಿವಾನಂದ ಜಂಕ್ಷನ್ ಮೂಲಕ ಎಸ್.ಸಿ. ರಸ್ತೆ ಜಂಕ್ಷನ್ ತಲುಪಿ ಎಡತಿರುವು ಪಡೆದು ಚಲಿಸಬೇಕು .
- ಕ್ಲೀನ್ಸ್ ಜಂಕ್ಷನ್ ಕಡೆಯಿಂದ ಲೋಕ ಭವನದ ಕಡೆಗೆ ಸಂಚರಿಸುವ ವಾಹನಗಳು ಅನಿಲ್‌ಕುಂಬ್ಳೆ ಹಾಗೂ ಬಿ.ಆರ್.ವಿ. ಜಂಕ್ಷನ್ ಮುಖಾಂತರ ಹೋಗಬಹುದು.
- ಹಲಸೂರು ಮತ್ತು ಹಳೆ ಏರ್‌ಪೋರ್ಟ್ ಕಡೆಯಿಂದ ಕೆಂಪೇಗೌಡ ಏರ್‌ಪೋರ್ಟ್ ಮತ್ತು ಬಸವೇಶ್ವರ ಜಂಕ್ಷನ್ ಕಡೆಗೆ ಸಂಚರಿಸುವ ವಾಹನ ಸವಾರರು ಬಿ.ಆರ್.ವಿ ಜಂಕ್ಷನ್ ಬಳಿ ಬಲ ತಿರುವು ಪಡೆದು ಶಿವಾಜಿನಗರ ಬಸ್‌ನಿಲ್ದಾಣದ ಮೂಲಕ ಬಾಳೆಕುಂದ್ರಿ ಜಂಕ್ಷನ್, ಕನ್ನಿಂಗ್ ಹ್ಯಾಂ ರಸ್ತೆ, ವಸಂತನಗರ ಮಾರ್ಗವಾಗಿ ಹೆಬ್ಬಾಳ ಕಡೆಗೆ ಹೋಗಬಹುದು.
- ಹಲಸೂರು ಮತ್ತು ಹಳೇ ಮದ್ರಾಸ್ ರಸ್ತೆಯಿಂದ ಹೆಬ್ಬಾಳ ಕಡೆಗೆ ಹೋಗುವವರು ಹಲಸೂರು ಲೇಕ್ ಮೂಲಕ ಟಿನ್ ಫ್ಯಾಕ್ಟರಿ ಜಂಕ್ಷನ್ ತಲುಪಿ, ಅಲ್ಲಿಂದ ರಿಂಗ್ ರಸ್ತೆಯ ಮೂಲಕ ಹೆಬ್ಬಾಳ ಕಡೆಗೆ ಸಂಚರಿಸಬಹುದು.
- ಆಶೀರ್ವಾದಂ ವೃತ್ತ ಹಾಗೂ ಎಂ.ಜಿ. ರಸ್ತೆಯಿಂದ ಬಿ.ಆರ್.ವಿ ಜಂಕ್ಷನ್, ಶಿವಾಜಿನಗರ ಬಸ್ ನಿಲ್ದಾಣದ ಮೂಲಕ ಬಾಳೆಕುಂದ್ರಿ ಜಂಕ್ಷನ್, ಕನ್ನಿಂಗ್ ಹ್ಯಾಂ ರಸ್ತೆ, ವಸಂತನಗರದಿಂದ ಹೆಬ್ಬಾಳ ಕಡೆಗೆ ಸಂಚರಿಸಬಹುದು.
ವಾಹನಗಳ ನಿಲುಗಡೆ ನಿಷೇಧ
- ಡಾ: ಬಿ.ಆರ್.ಅಂಬೇಡ್ಕರ್ ರಸ್ತೆ, ಬಾಳೇಕುಂದ್ರಿ ವೃತ್ತದಿಂದ ಕೆ.ಆರ್.ವೃತ್ತದ ವರೆಗೆ.
- ಲೋಕಭವನ ರಸ್ತೆ, ಬಿ.ಆರ್.ವಿ. ವೃತ್ತದಿಂದ ಲೋಕಭವನ ಜಂಕ್ಷನ್ ವರೆಗೆ.
- ಎಲ್.ಹೆಚ್.ರಸ್ತೆ, ಲೋಕಭವನ ಜಂಕ್ಷನ್ ನಿಂದ ಚಾಲುಕ್ಯ ವೃತ್ತದ ವರೆಗೆ.
- ಕ್ವೀನ್ಸ್ ರಸ್ತೆ, ಬಾಳೇಕುಂದ್ರಿ ಜಂಕ್ಷನ್‌ನಿಂದ ಕ್ವೀನ್ಸ್ ವೃತ್ತದ ವರೆಗೆ.
- ಪ್ಯಾಲೇಸ್ ರಸ್ತೆ, ಮೈಸೂರು ಬ್ಯಾಂಕ್ ವೃತ್ತದಿಂದ ವಸಂತನಗರ ಕೆಳಸೇತುವೆ ವರೆಗೆ.
- ದೇವರಾಜ ಅರಸ್ ರಸ್ತೆ , ಚಾಲುಕ್ಯ ವೃತ್ತದಿಂದ ಎಂ.ಎಸ್.ಬಿಲ್ಡಿಂಗ್ ವರೆಗೆ ಒಳಭಾಗದ ರಸ್ತೆ
- ರೇಸ್ ಕೋರ್ಸ್ ರಸ್ತೆ, ವಿಲೈಟ್ ಜಂಕ್ಷನ್ ನಿಂದ ಚಾಲುಕ್ಯ ವೃತ್ತದ ವರೆಗೆ.
- ಪಾರ್ಕ್ ಹೌಸ್ ರಸ್ತೆ, ಎ.ಜಿ.ಎಸ್. ಜಂಕ್ಷನ್ ನಿಂದ ಸಿ.ಐ.ಡಿ. ವೃತ್ತದ ವರೆಗೆ.
- ಕಬ್ಬನ್ ಉದ್ಯಾನವನದ ಒಳಭಾಗದ ಎಲ್ಲಾ ರಸ್ತೆಗಳು.
- ಮಿಲ್ಲರ್ ರಸ್ತೆ, ಎಲ್.ಆರ್.ಡಿ.ಇ. ಜಂಕ್ಷನ್ ನಿಂದ ಬಸವೇಶ್ವರ ವೃತ್ತದ ವರೆಗೆ.
- ಇನ್‌ಫೆಂಟ್ರಿ ರಸ್ತೆ, ಅಲಿ ಆಸ್ಕರ್ ರಸ್ತೆ ಜಂಕ್ಷನ್ ನಿಂದ ಟ್ರಾಫಿಕ್ ಹೆಡ್ ಕ್ವಾರ್ಟರ್ ಜಂಕ್ಷನ್ ವರೆಗೆ.
- ಅಲಿ ಆಸ್ಕರ್ ರಸ್ತೆ, ರಾಜಭವನ ಜಂಕ್ಷನ್ ನಿಂದ ಅಲಿ ಕ್ರಾಸ್ ವರೆಗೆ.
- ಕೆ.ಜಿ.ರಸ್ತೆ, ಪೊಲೀಸ್ ಕಾರ್ನರ್ ನಿಂದ ಮೈಸೂರು ಬ್ಯಾಂಕ್ ವೃತ್ತದ ವರೆಗೆ.
- ಹಳೇ ಅಂಚೆ ಕಚೇರಿ ರಸ್ತೆ, ಮೈಸೂರು ಬ್ಯಾಂಕ್ ವೃತ್ತದಿಂದ ಕೆ.ಆರ್.ವೃತ್ತದ ವರೆಗೆ.
- ನೃಪತುಂಗ ರಸ್ತೆ, ಕೆ.ಆರ್.ವೃತ್ತದಿಂದ ಪೊಲೀಸ್ ಕಾರ್ನರ್.
- ಕಸ್ತೂರಿಬಾ ರಸ್ತೆ, ಹಡ್ಸನ್ ವೃತ್ತದಿಂದ ಕ್ವೀನ್ಸ್ ವೃತ್ತ.
- ಮಲ್ಯ ಆಸ್ಪತ್ರೆ ರಸ್ತೆ, ಸಿದ್ಧಲಿಂಗಯ್ಯ ವೃತ್ತದಿಂದ ಆರ್.ಆರ್.ಎಂ.ಆರ್. ಜಂಕ್ಷನ್.
- ಆರ್.ಆರ್.ಎಂ.ಆರ್. ರಸ್ತೆ, ಆರ್.ಆರ್.ಎಂ.ಆರ್. ಜಂಕ್ಷನ್ ನಿಂದ ಹಡ್ಸನ್ ವೃತ್ತದ ವರೆಗೆ.
- ಕಬ್ಬನ್ ರಸ್ತೆ, ಸಿ.ಟಿ.ಓ. ವೃತ್ತದಿಂದ ಮಣಿಪಾಲ್ ಸೆಂಟರ್ ವರೆಗೆ.
- ಟಿ.ಚೌಡಯ್ಯ ರಸ್ತೆ, ಹಳೇ ಹೈಗ್ರೌಂಡ್ಸ್ ಜಂಕ್ಷನ್ ನಿಂದ ಕಾವೇರಿ ಜಂಕ್ಷನ್ ವರೆಗೆ.
- ರಮಣ ಮಹರ್ಷಿ ರಸ್ತೆ, ಕಾವೇರಿ ಜಂಕ್ಷನ್ ನಿಂದ ಮೇಖ್ರಿ ವೃತ್ತದ ವರೆಗೆ.
ವಾಹನ ನಿಲುಗಡೆ ಸ್ಥಳಗಳು
ಕಾರ್ಯಕ್ರಮಕ್ಕೆ ಬರುವ ಪಾಸ್ ಹೊಂದಿರುವ ವಾಹನಗಳು ವಿಧಾನಸೌಧದ ಸಿಮೆಂಟ್ ಪಾರ್ಕಿಂಗ್ ಸ್ಥಳ ಹಾಗೂ ವಿಕಾಸಸೌಧದ ಸುತ್ತಮುತ್ತ, ರಾಜಭವನ ಹಿಂಭಾಗದ ಎಲ್.ಹೆಚ್. ವಾಹನ ನಿಲುಗಡೆ ಸ್ಥಳ, ನೆಹರೂ ತಾರಾಲಯದ ಆವರಣ.
ಕಾರ್ಯಕ್ರಮಕ್ಕೆ ಬರುವ ಪಾಸ್ ಹೊಂದಿಲ್ಲದ ವಾಹನಗಳು: ಕೊಂಡಜ್ಜಿ ಭವನ ಅವರಣ, ಶಿವಾಜಿನಗರ ಬಸ್‌ನಿಲ್ದಾಣದ ಮೇಲ್ಬಾಗದ ಮಲೆವೆಲ್ ಪಾರ್ಕಿಂಗ್ ಸ್ಥಳ, ಕಂಠೀರವ ಕ್ರೀಡಾಂಗಣ, ಯು.ಬಿ. ಸಿಟಿ ಪಾರ್ಕಿಂಗ್ ಸ್ಥಳ ಕಾರ್ಪೊರೇಷನ್ ಕಚೇರಿ ಸ್ಥಳ, ಸರ್ಕಾರಿ ಕಲಾ ಕಾಲೇಜು ಆವರಣ, ಪ್ಯಾಲೇಸ್ ಮೈದಾನದ ಗೇಟ್ ನಂ. 2, 3 ಮತ್ತು 4 ರಲ್ಲಿ ವಾಹನ ನಿಲುಗಡೆಗೆ ಅವಕಾಶ ಮಾಡಲಾಗಿದೆ.
ಭಾರೀ ವಾಹನಗಳ ಸಂಚಾರ ನಿಷೇಧ
ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಬೆಂಗಳೂರು ನಗರ ವ್ಯಾಪ್ತಿಯ ಪ್ರದೇಶದಲ್ಲಿ ಎಲ್ಲಾ ರೀತಿಯ ಭಾರೀ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.



