ರಾಜ್ಯದ ಜನರ ಲೂಟಿಗಾಗಿ ಒಂದಾದ ಡಿಎಂಕೆ-ಕಾಂಗ್ರೆಸ್: ಪ್ರಧಾನಿ ಮೋದಿ ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ರಾಜ್ಯದಲ್ಲಿ ಜನರನ್ನು ಲೂಟಿ ಮಾಡಲು ಡಿಎಂಕೆ ಮತ್ತು ಕಾಂಗ್ರೆಸ್ ಒಂದಾಗಿವೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಾಗ್ದಾಳಿ ನಡೆಸಿದರು.

ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಬಿಜೆಪಿಯ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 2ಜಿ ಸ್ಪೆಕ್ಟ್ರಂ ಹಗರಣದ ಅತಿದೊಡ್ಡ ಫಲಾನುಭವಿ ‘ಡಿಎಂಕೆ’ಯಾಗಿದೆ. ಬಿಜೆಪಿಯು ಜನರ ಸಂಕಷ್ಟಕ್ಕೆ ನೆರವಾಗುತ್ತ, ಅಭಿವೃದ್ಧಿಗೆ ಆದ್ಯತೆ ನೀಡಿದ್ದರೂ ವಿರೋಧ ಪಕ್ಷಗಳ ಮೈತ್ರಿಕೂಟವಾದ ‘INDIA’ ತನ್ನ ಹೆಸರಿನೊಂದಿಗೇ ‘ವಂಚನೆ’ಗಳನ್ನು ಮಾತ್ರ ಜೋಡಿಸಿಕೊಂಡಿದೆ ಎಂದು ಹೇಳಿದರು.

ಡಿಎಂಕೆ ದೇಶ, ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ದ್ವೇಷವನ್ನು ಹೊಂದಿದೆ. ಈ ಪಕ್ಷವು ತಮಿಳುನಾಡಿನ ಶತ್ರು, ಅದರ ನಡವಳಿಕೆಗೆ ಗೌರವವಿಲ್ಲ. ಜತೆಗೆ ಡಿಎಂಕೆ ಮತ್ತು ಕಾಂಗ್ರೆಸ್ ಮಹಿಳಾ ವಿರೋಧಿಗಳು ಮತ್ತು ಅವರು ಮಹಿಳೆಯರನ್ನು ಮೂರ್ಖರನ್ನಾಗಿಸಿದ್ದಾರೆ ಮತ್ತು ಅವಮಾನಿಸಿದ್ದಾರೆ ಎಂದು ಪ್ರಧಾನಿ ವಾಗ್ದಾಳಿ ನಡೆಸಿದರು.

ಡಿಎಂಕೆ ಸರ್ಕಾರವು ಅಯೋಧ್ಯೆ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭದ ಪ್ರಸಾರವನ್ನು ನಿಲ್ಲಿಸಲು ಪ್ರಯತ್ನಿಸಿತು. ಈ ಕುರಿತು ಸುಪ್ರೀಂ ಕೋರ್ಟ್ ತಮಿಳುನಾಡು ಸರ್ಕಾರಕ್ಕೆ ಛೀಮಾರಿ ಹಾಕಬೇಕಾಯಿತು. ಹೊಸ ಸಂಸತ್ತಿನಲ್ಲಿ ಸೆಂಗೋಲ್ ಅಳವಡಿಸುವುದು ಅವರಿಗೆ ಇಷ್ಟವಾಗಲಿಲ್ಲ. ನಮ್ಮ ಸರ್ಕಾರವೇ ಜಲ್ಲಿಕಟ್ಟುಗೆ ದಾರಿ ಮಾಡಿಕೊಟ್ಟಿದೆ ಎಂದು ಮೋದಿ ಹೇಳಿದ್ದಾರೆ.

ತಮಿಳುನಾಡಿನ ಪ್ರಮುಖ ವಿರೋಧ ಪಕ್ಷವಾದ ಎಐಎಡಿಎಂಕೆ ಬಗ್ಗೆ ಮೃದು ಧೋರಣೆ ತೋರಿದ ಮೋದಿ, ದಿವಂಗತ ಮುಖ್ಯಮಂತ್ರಿ ಜೆ. ಜಯಲಲಿತಾ ಅವರನ್ನು ಡಿಎಂಕೆ ಹೇಗೆ ನಡೆಸಿಕೊಂಡಿದೆ ಎಂಬುದು ಜನರಿಗೆ ತಿಳಿದಿದೆ. ಅಂತಹ ಸಂಪ್ರದಾಯವನ್ನು ಪಕ್ಷವು ಇಂದಿಗೂ ಮುಂದುವರೆಸುತ್ತಿದೆ ಎಂದು ಹೇಳಿದರು.

ಈ ಬಾರಿ ತಮಿಳುನಾಡಿನಲ್ಲಿ ಬಿಜೆಪಿಯ ಸಾಧನೆಯು ಡಿಎಂಕೆ-ಕಾಂಗ್ರೆಸ್ ಇಂಡಿಯಾ ಮೈತ್ರಿಯ ದುರಹಂಕಾರವನ್ನು ಛಿದ್ರಗೊಳಿಸಲಿದೆ. ತಮಿಳುನಾಡಿನ ಸಂಪರ್ಕವನ್ನು ಸುಧಾರಿಸಲು, ನಾವು ರೈಲ್ವೆ ಮತ್ತು ಹೆದ್ದಾರಿಗಳ ಜಾಲವನ್ನು ಸಿದ್ಧಪಡಿಸುತ್ತಿದ್ದೇವೆ. ಕಳೆದ 10 ವರ್ಷಗಳಲ್ಲಿ ತಮಿಳುನಾಡಿನಲ್ಲಿ ಸುಮಾರು ₹ 50,000 ಕೋಟಿ ಮೌಲ್ಯದ ಹೆದ್ದಾರಿ ಯೋಜನೆಗಳು ಪೂರ್ಣಗೊಂಡಿವೆ ಮತ್ತು ₹ 70,000 ಕೋಟಿ ಮೌಲ್ಯದ ಯೋಜನೆಗಳು ಇನ್ನೂ ನಡೆಯುತ್ತಿವೆ ಎಂದು ಮೋದಿ ಹೇಳಿದ್ದಾರೆ.

ಮೀನುಗಾರರ ಬಿಕ್ಕಟ್ಟಿಗೆ ಡಿಎಂಕೆ ಮತ್ತು ಕಾಂಗ್ರೆಸ್ ಕಾರಣ ಎಂದು ಆರೋಪಿಸಿದ ಮೋದಿ, ಜೀವನೋಪಾಯಕ್ಕಾಗಿ ಮೀವುಗಾರರು ಶ್ರೀಲಂಕಾದ ಸಮುದ್ರಕ್ಕೆ ಹೋಗಬೇಕಾದ ಪರಿಸ್ಥಿತಿ ಇದೆ. ಇದು ಡಿಎಂಕೆ ಮಾಡಿದ ಪಾಪದ ಪರಿಣಾಮ. ಬಿಜೆಪಿ ಸರ್ಕಾರ ಮೀನುಗಾರರ ಜೊತೆ ನಿಲ್ಲುತ್ತದೆ. ಕಾಂಗ್ರೆಸ್ ಮತ್ತು ಡಿಎಂಕೆ ತಮ್ಮ ಪಾಪಗಳಿಗೆ ಉತ್ತರಿಸುವ ಸಮಯ ಬಂದಿದೆ ಎಂದು ಅವರು ಹೇಳಿದರು.

ತಮಿಳುನಾಡಿನ ಜನರು ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ನನ್ನ ಭಾಷಣವನ್ನು ಕೇಳಬಹುದು. ತಮಿಳು ಜನರೊಂದಿಗೆ ತಮಿಳಿನಲ್ಲಿ ಸಂವಹನ ನಡೆಸಲು ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನವನ್ನು ಬಳಸಲು ತಾನು ನಿರ್ಧರಿಸಿದ್ದೇನೆ. ತಮಿಳಿನಲ್ಲಿ ನಮೋ ಎಂಬ ತಮಿಳು ಹ್ಯಾಂಡಲ್ ಅನ್ನು ಫಾಲೋ ಮಾಡುವಂತೆ ಅವರು ಜನರನ್ನು ಒತ್ತಾಯಿಸಿದರು.

ವೇದಿಕೆಯಲ್ಲಿ ಕೇಂದ್ರ ಮೀನುಗಾರಿಕೆ, ಹೈನುಗಾರಿಕೆ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್.ಮುರುಗನ್, ಮಾಜಿ ಸಚಿವ ಪೊನ್ ರಾಧಾಕೃಷ್ಣನ್, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಮತ್ತು ನಟ-ರಾಜಕಾರಣಿ ಶರತ್ ಕುಮಾರ್ ಮತ್ತು ಕಾಂಗ್ರೆಸ್ ಮಾಜಿ ಶಾಸಕಿ ವಿಜಯತಾರಿಣಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!