ಇಡೀ ರಾಜ್ಯವನ್ನು ಲಾಕ್‌ಡೌನ್ ಮಾಡದೆ, ಸೋಂಕು ಹೆಚ್ಚಿರುವ ಕಡೆ ಮಾತ್ರ ಮಾಡಿ: ಹೆಚ್.ವಿಶ್ವನಾಥ್

ಹೊಸದಿಗಂತ ವರದಿ,ಮೈಸೂರು :

ಕೊರೋನಾ ಹಾಗೂ ಅದರ ರೂಪಾಂತರಿ ಒಮಿಕ್ರಾನ್ ಸೋಂಕು ರಾಜ್ಯದಲ್ಲಿ ವೇಗವಾಗಿ ಹರಡುತ್ತಿದೆ. ಸೋಂಕು ಹರಡುವಿಕೆ ನಿಯಂತ್ರಣಕ್ಕೆoದು ಇಡೀ ರಾಜ್ಯವನ್ನು ಲಾಕ್‌ಡೌನ್ ಮಾಡದೆ, ಎಲ್ಲೆಲ್ಲಿ ಸೋಂಕು ಹೆಚ್ಚಾಗಿದೆಯೋ, ಆ ಪ್ರದೇಶಗಳನ್ನು ಮಾತ್ರ ಸರ್ಕಾರ ಲಾಕ್‌ಡೌನ್ ಮಾಡಬೇಕು ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಒತ್ತಾಯಿಸಿದರು.
ಶುಕ್ರವಾರ ಮೈಸೂರಿನ ಕೆಎಸ್‌ಓಯುನಲ್ಲಿರುವ ಆಡಳಿತ ಕಚೇರಿಯಲ್ಲಿ ಕರ್ನಾಟಕ ಮುಕ್ತವಿವಿಯ ಅಡಳಿತ ಮಂಡಳಿ ಸದಸ್ಯರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೧ ರಿಂದ ೭ನೇ ತರಗತಿ ವರೆಗೆ ಸಂಪೂರ್ಣವಾಗಿ ಶಾಲೆ ಬಂದ್ ಮಾಡಿ ಎಂದು ಸಲಹೆ ನೀಡಿದ ಹೆಚ್.ವಿಶ್ವನಾಥ್ , ೩ನೇ ಅಲೆ ಮಕ್ಕಳಿಗೆ ವ್ಯಾಪಕವಾಗಿ ಹರಡುತ್ತಿದೆ. ೧೮ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ಹಾಕಿದ್ದೇವೆ. ಮಕ್ಕಳಿಗೆ ಇದುವರೆಗೆ ಯಾವುದೇ ಲಸಿಕೆ ಕೊಟ್ಟಿಲ್ಲ. ಆದ್ದರಿಂದ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಶಾಲೆಗಳನ್ನು ಬಂದ್ ಮಾಡುವುದು ಸೂಕ್ತ. ಎಸ್‌ಎಸ್‌ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಭೌತಿಕ ತರಗತಿಗಳನ್ನು ನಡೆಸುವುದು ಅನಿವಾರ್ಯ. ಆರೋಗ್ಯ ತಜ್ಞರ ಜೊತೆಗೆ ಚರ್ಚೆ ಮಾಡಿ ಶೈಕ್ಷಣಿಕ ತೀರ್ಮಾನ ತೆಗೆದುಕೊಳ್ಳಬೇಡಿ. ಶಿಕ್ಷಣ ತಜ್ಞರ ಅಭಿಪ್ರಾಯ ತೆಗೆದುಕೊಳ್ಳಿ. ಏನು ಮಾಡಬೇಕು, ಏನು ಮಾಡಬಾರದು ಅಂತ ಶಿಕ್ಷಣ ತಜ್ಞರ ಸಲಹೆ ಪಡೆದುಕೊಳ್ಳಿ ಎಂದು ಹೇಳಿದರು.
ಮೇಕೆದಾಟು ಯೋಜನೆ ಜಾರಿಗೆ ಪಾದಯಾತ್ರೆ ಬೇಕಿಲ್ಲ:
ಇದೇ ವೇಳೆ ಕಾಂಗ್ರೆಸ್ ನಾಯಕರು ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ನಡೆಸಿದ ಪಾದಯಾತ್ರೆಯನ್ನು ಟೀಕಿಸಿದ ಹೆಚ್.ವಿಶ್ವನಾಥ್, ಮೇಕೆದಾಟು ಯೋಜನೆ ಜಾರಿಗೆ ಪಾದಯಾತ್ರೆ ಸಮರ ಬೇಕಿಲ್ಲ. ಇದಕ್ಕೆ ಕಾನೂನು ಸಮರ ಆಗಬೇಕು. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಪಾದಯಾತ್ರೆ ಮಾಡಿದ್ದಾರೆ. ಇದರಿಂದ ಏನು ಪ್ರಯೋಜನ ಆಯ್ತು.?ಬಳ್ಳಾರಿ ರೆಡ್ಡಿಗಳಿಗೆ ಸಿದ್ದರಾಮಯ್ಯ ಪಾದಯಾತ್ರೆಯಿಂದ ಶಿಕ್ಷೆ ಆಗಲಿಲ್ಲ. ಲೋಕಾಯುಕ್ತ ಸಂತೋಷ್ ಹೆಗ್ಡೆ ಹಾಗೂ ಕಾನೂನಿನ ಮೂಲಕ ಶಿಕ್ಷೆ ಆಯ್ತು. ೭೨೦ಕ್ಕೂ ಹೆಚ್ಚು ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂತು. ಪಾದಯಾತ್ರೆ ನಡೆಸಿ, ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರ ವಿರುದ್ಧ ಯಾವ ಕ್ರಮ ಕೈಗೊಂಡರು ಎಂದು ಕುಟುಕಿದರು.
ಮೇಕೆದಾಟು ಯೋಜನೆ ವಿಚಾರ ಸುಪ್ರೀಂ ಕೋರ್ಟ್ ನಲ್ಲಿದೆ. ಕಾನೂನು ಹೋರಾಟದ ಮೂಲಕವೇ ಈ ವಿಚಾರ ಬಗೆಹರಿಯಬೇಕು. ಸಿದ್ದರಾಮಯ್ಯ ಕಾನೂನು ಪಂಡಿತರು, ಇದೆಲ್ಲವೂ ಅವರಿಗೆ ಮೊದಲೇ ಗೊತ್ತಿತ್ತು. ಹೀಗಿದ್ದೂ ಹಠಕ್ಕೆ ಬಿದ್ದು ಪಾದಯಾತ್ರೆ ಮಾಡಿದ್ರು ಅಷ್ಟೇ ಎಂದರು.
ಕರ್ನಾಟಕ ಮುಕ್ತ ವಿವಿ ರಾಜ್ಯದ ಏಕೈಕ ಪ್ರತಿಷ್ಠಿತ ವಿಶ್ವವಿದ್ಯಾಲಯ. ಮೈಸೂರು ವಿವಿ ಮಾಜಿ ಕುಲಪತಿ ರಂಗಪ್ಪ ಕಾಲದಲ್ಲಿ ಅತ್ಯುತ್ತಮವಾಗಿ ಮುಕ್ತವಿವಿ ಕಟ್ಟಡ ನಿರ್ಮಾಣ ಆಗಿದೆ. ಸಾವಿರಾರು ವಿದ್ಯಾರ್ಥಿಗಳ ಕನಸನ್ನು ನನಸು ಮಾಡುವ ಜವಾಬ್ದಾರಿ ಕೆಎಸ್‌ಓಯು ಮೇಲಿದೆ. ಗ್ರಾಮಾಂತರ ಭಾಗದ ಮಕ್ಕಳಿಗೆ ಕೆಎಸ್‌ಓಯು ಸಹಕಾರಿಯಾಗಲಿದೆ. ಇದನ್ನ ಮತ್ತಷ್ಟು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತೇವೆ. ಮುಕ್ತ ವಿವಿಯ ಕುಲಪತಿಗಳಿಗೆ ಕೋರೊನಾ ಪಾಸಿಟಿವ್ ಆಗಿದೆ. ಹಾಗಾಗಿ ರಿಜಿಸ್ಟರ್ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದ್ದೇನೆ. ಅಧಿಕಾರ ಸ್ವೀಕರಿಸಿದ ಬಳಿಕ ಆಡಳಿತ ಮಂಡಳಿ ಜೊತೆ ಕುಳಿತು ಚರ್ಚೆ ಮಾಡುತ್ತೇನೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!