ಹೊಸದಿಗಂತ ವರದಿ,ಮೈಸೂರು :
ಅಂತಾರಾಜ್ಯ ನದಿ ನೀರು ಹಂಚಿಕೆ ವಿಚಾರದಲ್ಲಿ ನಾವು ಹೋರಾಟದಿಂದ ಗೆಲ್ಲಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಹೇಳಿದರು.
ಶುಕ್ರವಾರ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದಲ್ಲಿ ತಾಲೂಕು ಜೆಡಿಎಸ್ ಕಚೇರಿ ಉದ್ಘಾಟಿಸಿದ ಬಳಿಕ, ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನಡೆಸುತ್ತಿದ್ದ ಪಾದಯಾತ್ರೆ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು.
ಮೇಕೆದಾಟು ಯೋಜನೆಯ ಜಾರಿಗಾಗಿ ಪಾದಯಾತ್ರೆ ನಡೆಸಿರುವುದು ರಾಜಕೀಯ ಕಾರಣಕ್ಕಾಗಿ ಎಂದು ನಾನು ಹೇಳುವುದಿಲ್ಲ. ಆದರೆ, ಅಂತರ್ ರಾಜ್ಯ ನೀರಿನ ಹಂಚಿಕೆ ವಿಚಾರದಲ್ಲಿ ಹೋರಾಟ ಮಾಡುವುದರಿಂದ ಗೆಲ್ಲಲು ಸಾಧ್ಯವಿಲ್ಲ. ಸಮಸ್ಯೆ ಬಗೆಹರಿಯಲು, ಯೋಜನೆ ಜಾರಿಯಾಗಲು ಕೋರ್ಟ್ಗೆ ಪೂರಕ ದಾಖಲೆಗಳನ್ನ ನೀಡಬೇಕು ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ನಾಯಕರ ಪಾದಯಾತ್ರೆಯನ್ನ ಟೀಕಿಸಿದರು
ಕಾವೇರಿ ಜಲ ವಿವಾದ ಕೋರ್ಟ್ನಲ್ಲಿದೆ. ಕಾಂಗ್ರೆಸ್ ಹೋರಾಟ ಮಾಡದಿದ್ದರೆ ಕೋರ್ಟ್ ತೀರ್ಪು ನೀಡೋದಿಲ್ವಾ.? ಅಂತರಾಜ್ಯ ಜಲವಿವಾದದ ಬಗ್ಗೆ ಹೊರಗಡೆ ಹೋರಾಟ ಮಾಡಿ ಗೆಲ್ಲೋಕಾಗಲ್ಲ. ಈ ಬಗ್ಗೆ ನಾನು ಹೆಚ್ಚು ವಿಶ್ಲೇಷಣೆ ಮಾಡಿ ಪ್ರತಿಕ್ರಿಯೆ ನೀಡಲ್ಲ. ಆದರೆ ಕಾಂಗ್ರೆಸ್ ನಾಯಕರು ಮೇಕೆದಾಟು ವಿಚಾರದಲ್ಲಿ ಎಷ್ಟೇ ನಗಾರಿ ಬಾರಿಸಿದರೂ, ಕೋರ್ಟ್ ತೀರ್ಪು ಕೊಡಿಸಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು.
ರಾಮನಗರದಿAದಲೇ ಮತ್ತೆ ಕಾಂಗ್ರೆಸ್ ನಾಯಕರು ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಲಿ. ಬೇಕಾದರೆ ಇನ್ನು ೧೦ ಬಾರಿ ಬರಲಿ. ರಾಮನಗರ ನಮಗೆ ಕರ್ಮಭೂಮಿ, ನಾನು ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿಯಾಗಲು ರಾಮನಗರವೇ ಕಾರಣ. ಅಷ್ಟೆ ಅಲ್ಲದೆ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಲು ರಾಮನಗರ ಕಾರಣ. ನಾವು ಅಧಿಕಾರದಲ್ಲಿದ್ದಾಗ ಕಾವೇರಿ ಹೋರಾಟ ಹೇಗೆ ಮಾಡಿದ್ದೇವೆ ಅಂತ ಈಗ ವಿಶ್ಲೇಷಣೆ ಮಾಡಲು ಹೋಗುವುದಿಲ್ಲ. ನನ್ನ ಅನುಭವದಲ್ಲಿ ಹೇಳುವುದಾದರೆ. ಈ ತನಕ ನಾನು ಕಾವೇರಿ ವಿವಾದದ ವಿರುದ್ಧ ನ್ಯಾಯಾಲಯದ ಮೂಲಕ ಹೋರಾಟ ಮಾಡಿದ್ದೇನೆಯೇ ಹೊರತು, ಹೋರಾಟದಿಂದ ಅಲ್ಲ ಎಂದು ಹೇಳಿದರು.