Saturday, February 4, 2023

Latest Posts

ಒಲಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಸಿದ್ಧರಾಗಿದ್ದ ರೈತರ ʻರಾಣಿ ಮಾʼ ಬಗ್ಗೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸುಸ್ಥಿತಿಯ ಬಂಗಾಳಿ ಕುಟುಂಬದಲ್ಲಿ ಜನಿಸಿದ ಇಳಾ ಮಿತ್ರಾ ಅವಿಭಜಿತ ಭಾರತದಲ್ಲಿ ಮೆಚ್ಚುಗೆ ಪಡೆದ ಕ್ರೀಡಾಪಟುವಾಗಬೇಕೆಂಬ ಕನಸನ್ನು ಹೊಂದಿದ್ದವರು. ಆಕೆ ಕನಸಿಗೆ ನೀರೆರೆದಿದ್ದು ಚಿಕ್ಕ ವಯಸ್ಸಿನಿಂದಲೂ ಪ್ರೋತ್ಸಾಹಿಸಿದ್ದ ಆಕೆ ತಂದೆ ಮಾತ್ರ. ಅವಿಭಜಿತ ಬಂಗಾಳದ ಇತಿಹಾಸದಲ್ಲಿ, ಇಳಾ ಆ ಪ್ರದೇಶದ ರೈತರ ರಾಣಿ ಮಾ ಅಥವಾ ರಾಣಿ ತಾಯಿ ಎಂದು ಗುರುತಿಸಲ್ಪಟ್ಟಿದ್ದಾರೆ.

1925 ರಲ್ಲಿ ಕಲ್ಕತ್ತಾದಲ್ಲಿ (ಕೋಲ್ಕತ್ತಾ) ಜನಿಸಿದ ಇಳಾ ಆರು ಮಕ್ಕಳಲ್ಲಿ ಹಿರಿಯಳು. ಆಕೆಯ ತಂದೆ, ಬಂಗಾಳದ ಅಕೌಂಟೆಂಟ್ ಜನರಲ್ ನಾಗೇಂದ್ರನಾಥ್ ಸೇನ್ ಅವರು ಬಾಸ್ಕೆಟ್‌ಬಾಲ್, ಈಜು ಮತ್ತು ಟ್ರ್ಯಾಕ್‌ನಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಿದರು. 1937 ರಿಂದ, ತನ್ನ ಕ್ರೀಡಾ ಸಾಮರ್ಥ್ಯಗಳಿಂದಾಗಿ ಹೆಸರು ಸಾಧಿಸಿದರು. 1937 ಮತ್ತು 1938 ರಲ್ಲಿ, ಅವರು ಸ್ಪೋರ್ಟ್ಸ್ ಕ್ಲಬ್ ಜಟಿಯಾ ಜುಬಾ ಸಂಘದಿಂದ ಬಂಗಾಳದಲ್ಲಿ ಬಾಲಕಿಯರ ಜೂನಿಯರ್ ಚಾಂಪಿಯನ್‌ಶಿಪ್ ಪ್ರಶಸ್ತಿಗಳನ್ನು ಗಳಿಸಿದರು. ಬಂಗಾಳದ ಪ್ರೆಸಿಡೆನ್ಸಿಯ ಅತ್ಯುತ್ತಮ ಕ್ರೀಡಾಪಟುಗಳಲ್ಲಿ ಒಬ್ಬರು ಎನಿಸಿಕೊಂಡು ಸುಮಾರು 47 ಟ್ರೋಫಿಗಳನ್ನು ಮುಡಿಗೇರಿಸಿಕೊಂಡರು.

1940 ರಲ್ಲಿ ಜಗತ್ತು 12 ನೇ ಒಲಿಂಪಿಕ್ಸ್‌ಗಾಗಿ ತಯಾರಿ ನಡೆಸುತ್ತಿರುವಾಗ ಇಳಾ 15 ವರ್ಷ ವಯಸ್ಸಿನವಳಾಗಿದ್ದಳು ಎರಡನೆಯ ಮಹಾಯುದ್ಧದ ಕಾರಣದಿಂದಾಗಿ ಆಟಗಳನ್ನು ರದ್ದುಗೊಳಿಸಲಾಯಿತು. ಇಳಾ ಬೆಥೂನ್ ಶಾಲೆಯಲ್ಲಿ ಪದವಿಯನ್ನು ಮುಂದುವರಿಸಿದರು. ಇದಾದ ಕೆಲವೇ ದಿನಗಳಲ್ಲಿ,  ಜಮೀನ್ದಾರ್ ಕುಟುಂಬಕ್ಕೆ ಸೇರಿದ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದ ರಾಮೇಂದ್ರನಾಥ ಮಿತ್ರ ಎಂಬಾತನೊಂದಿಗೆ ವಿವಾಹವನ್ನು ನಿಶ್ಚಯಿಸಲಾಯಿತು. ಅಲ್ಲಿಂದ ನಡೆದದ್ದೇ ಬೇರೆ.

1940 ರ ದಶಕದ ಉದ್ದಕ್ಕೂ, ಆಹಾರದ ಕೊರತೆ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯ ಸಮಸ್ಯೆ ವಿಪರೀಯವಾಗತೊಡಗಿತು. ಬ್ರಿಟಿಷ್ ಸರ್ಕಾರವು ಎಲ್ಲ ಸಂಪನ್ಮೂಲಗಳನ್ನು ಯುದ್ಧಕ್ಕಾಗಿ ವಿನಿಯೋಗಿಸುತ್ತಿತ್ತು. 1942 ರಲ್ಲಿ, ಮಾರಣಾಂತಿಕ ಚಂಡಮಾರುತವು ಮೇದಿನಿಪುರವನ್ನು ಅಪ್ಪಳಿಸಿ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿತು. 1943-44 ರ ನಡುವೆ, ಅಧಿಕೃತ ಸಾವಿನ ಸಂಖ್ಯೆ ಮೂರು ಮಿಲಿಯನ್ ತಲುಪಿತು.  ಈ ಎಲ್ಲಾ ಘಟನೆಗಳು ಇಲಾಳ ಮೇಲೆ ಮತ್ತಷ್ಟು ಪ್ರಭಾವ ಬೀರಿದವು. ಏತನ್ಮಧ್ಯೆ, 1943 ರಲ್ಲಿ, ವಿನಾಶಕಾರಿ ಕ್ಷಾಮವು ಬಂಗಾಳ ಪ್ರದೇಶವನ್ನು ಹಾಳುಮಾಡಿತು, ಹಸಿವು, ಬಡತನ, ಅಪೌಷ್ಟಿಕತೆ ಮತ್ತು ಆರೋಗ್ಯದ ಕೊರತೆಯಿಂದಾಗಿ ಲಕ್ಷಾಂತರ ಜನರು ಸತ್ತರು.

ಜನರ ಬೆಂಬಲಕ್ಕೆ ನಿಂತ ಇಳಾ ಮತ್ತು ಅವರ ಪತಿ ರೈತರು ಮತ್ತು ಸಂತಾಲ್ ಸಮುದಾಯದ ಸದಸ್ಯರೊಂದಿಗೆ ನಿಕಟವಾಗಿ ಕೆಲಸ ಮಾಡಿದರು. ಸುಗ್ಗಿಯ ಅರ್ಧಭಾಗದ ಬದಲು ಮೂರನೇ ಒಂದು ಭಾಗವನ್ನು (ತೇಭಾಗ) ಭೂಮಾಲೀಕರಿಗೆ ಪಾವತಿಸಲು  ಸಜ್ಜುಗೊಳಿಸಿದರು. ಇದು ಹಸಿವು ಮತ್ತು ಬಡತನದಿಂದ ರಕ್ಷಿಸುವಲ್ಲಿ ನೆರವು ಮಾಡಿಕೊಟ್ಟಿತು. ಇಲಾ ನಾಚೋಲ್‌ನಲ್ಲಿ ರೈತ ಮತ್ತು ಸಂತಾಲ್ ದಂಗೆಯನ್ನು ಸಂಘಟಿಸಿದರು. ಈ ವೇಳೆ ಪೊಲೀಸರು ಇಳಾರನ್ನು ಬಂಧಿಸಿ ಚಿತ್ರಹಿಂಸೆ ನೀಡಲಾಯಿತು.

ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆಕೆಯನ್ನು ಕೊಲೆಗಳಲ್ಲಿ ತಪ್ಪಿತಸ್ಥರೆಂದು ಪರಿಗಣಿಸಲಾಗಲಿಲ್ಲ, ಆದರೆ ನಾಲ್ವರು ಪೊಲೀಸರ ಸಾವಿಗೆ ಕಾರಣವಾದ ಹಿಂಸಾಚಾರವನ್ನು ಉಂಟುಮಾಡಿದ್ದಕ್ಕಾಗಿ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಯಿತು. 1954 ರವರೆಗೆ ಆಕೆ ಜೈಲಿನಲ್ಲಿದ್ದಳು.

ಇಳಾ ಬಿಡುಗಡೆಯಾದ ನಂತರ ನಿಧಾನವಾಗಿ ತನ್ನ ಜೀವನವನ್ನು ಪುನರ್ನಿರ್ಮಿಸಲು ಪ್ರಾರಂಭಿಸಿದರು. 1962 ರ ಹೊತ್ತಿಗೆ ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಬಾಂಗ್ಲಾ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿ ಶಿವನಾಥ ಶಾಸ್ತ್ರಿ ಕಾಲೇಜಿನಲ್ಲಿ ಶಿಕ್ಷಕರಾಗಿ ಕೆಲಸ ಪಡೆದರು. ಅವರು 1977 ರವರೆಗೆ ಪ್ರತಿನಿಧಿಸಿದ್ದ ಮಾಣಿಕ್ತಾಲಾ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆದ್ದು ಶಾಸಕರಾದರು.

ಅಥ್ಲೀಟ್ ಆಗಿ ಆಕೆಯ ವೃತ್ತಿಜೀವನವು ವರ್ಷಗಳ ಹಿಂದೆಯೇ ಕೊನೆಗೊಂಡಿದ್ದರೂ, ಕ್ರೀಡೆಗಳು ಯಾವಾಗಲೂ ಆಕೆಯ ಹೃದಯಕ್ಕೆ ಹತ್ತಿರವಾಗಿದ್ದವು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!