Saturday, October 11, 2025

Do You Know | ಯಾವ ದೇಶದ ಜನ ಹೆಚ್ಚು ಸ್ನಾನ ಮಾಡ್ತಾರೆ ಗೊತ್ತಾ?

ದೇಹವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಪ್ರತಿಯೊಬ್ಬರಿಗೂ ಅಗತ್ಯ. ಬಹುತೇಕ ಜನರ ದಿನದ ಪ್ರಾರಂಭವೇ ಸ್ನಾನದಿಂದ ಆಗುತ್ತದೆ. ಆಯಾಸ, ಬಿಸಿಲು, ಮೈಕೈ ನೋವು ಎಲ್ಲವನ್ನೂ ತಕ್ಷಣ ದೂರ ಮಾಡುವ ಶಕ್ತಿ ಸ್ನಾನಕ್ಕಿದೆ. ಆದರೆ ವಿಶ್ವದಾದ್ಯಂತ ಜನರು ಎಷ್ಟು ಬಾರಿ ಸ್ನಾನ ಮಾಡುತ್ತಾರೆ ಎಂಬುದರಲ್ಲಿ ದೊಡ್ಡ ವ್ಯತ್ಯಾಸ ಇದೆ. ಅದರಲ್ಲೂ ಬ್ರೆಜಿಲ್ ಜನರ ಅಭ್ಯಾಸ ವಿಶ್ವದಲ್ಲೇ ವಿಶೇಷ.

ಅಧ್ಯಯನದ ಪ್ರಕಾರ, ಬ್ರೆಜಿಲ್‌ನಲ್ಲಿ ಜನರು ವಾರಕ್ಕೆ ಸರಾಸರಿ 14 ಬಾರಿ ಸ್ನಾನ ಮಾಡುತ್ತಾರೆ. ಇತರ ದೇಶಗಳಲ್ಲಿ ಜನರು ಸಾಮಾನ್ಯವಾಗಿ ವಾರಕ್ಕೆ 5–6 ಬಾರಿ ಮಾತ್ರ ಸ್ನಾನ ಮಾಡುತ್ತಾರೆ. ಬ್ರಿಟನ್‌ನಲ್ಲಿ ಜನರು ವಾರಕ್ಕೆ 6 ಬಾರಿ, ಅಮೆರಿಕಾದಲ್ಲಿ ಸ್ವಲ್ಪ ಹೆಚ್ಚು, ಆದರೆ ಬ್ರೆಜಿಲ್ ಜನರು ಮಾತ್ರ ಪ್ರತಿದಿನ ಎರಡು ಬಾರಿ ಸ್ನಾನ ಮಾಡುವುದು ರೂಢಿಯಾಗಿದೆ.

ಬ್ರೆಜಿಲ್‌ನ ಹವಾಮಾನವೇ ಇದರ ಪ್ರಮುಖ ಕಾರಣ. ಅಲ್ಲಿ ವಾರ್ಷಿಕ ಸರಾಸರಿ ತಾಪಮಾನ 24.6 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಬಿಸಿಲಿನಿಂದ ಹೊರಬರಲು ಜನರು ದಿನಕ್ಕೆ ಕನಿಷ್ಠ ಎರಡು ಬಾರಿ ಸ್ನಾನ ಮಾಡುತ್ತಾರೆ. ಇದಕ್ಕೆ ವಿರುದ್ಧವಾಗಿ ಬ್ರಿಟನ್‌ನಂತಹ ದೇಶಗಳಲ್ಲಿ ಸರಾಸರಿ ತಾಪಮಾನ 9.3 ಡಿಗ್ರಿ ಸೆಲ್ಸಿಯಸ್ ಮಾತ್ರ, ಆದ್ದರಿಂದ ಅಲ್ಲಿ ಸ್ನಾನದ ಮಹತ್ವ ಕಡಿಮೆ.

ಶುಚಿತ್ವಕ್ಕಿಂತಲೂ ಹೆಚ್ಚು ಪರಂಪರೆ:
ಸಂಶೋಧನೆಯ ಪ್ರಕಾರ ಬ್ರೆಜಿಲ್‌ನ 99% ಜನರು ವಾರಕ್ಕೆ 14 ಬಾರಿ ಶವರ್ ಬಾತ್ ಮಾಡುತ್ತಾರೆ. ಇದು ಕೇವಲ ಶುಚಿತ್ವದ ಗುರುತು ಮಾತ್ರವಲ್ಲ, ಅದು ಅವರ ಸಂಸ್ಕೃತಿಯ ಭಾಗವಾಗಿದೆ. ಸಾಮಾನ್ಯವಾಗಿ ಒಬ್ಬ ಬ್ರೆಜಿಲಿಗನು ದಿನಕ್ಕೆ ಕನಿಷ್ಠ ಹತ್ತು ನಿಮಿಷಗಳ ಕಾಲ ಶವರ್ ಬಾತ್ ಮಾಡುತ್ತಾನೆ. ಅಮೆರಿಕಾದವರು ಸರಾಸರಿ 9.9 ನಿಮಿಷ, ಬ್ರಿಟಿಷರು 9.6 ನಿಮಿಷ ಸಮಯ ಮೀಸಲಿಡುತ್ತಾರೆ.

ಪ್ರತಿ ದೇಶದ ಜೀವನಶೈಲಿ, ಆಹಾರ, ದೈನಂದಿನ ಚಟುವಟಿಕೆಗಳು ಆ ದೇಶದ ಹವಾಮಾನದಿಂದಲೇ ರೂಪುಗೊಳ್ಳುತ್ತವೆ. ಹೀಗಾಗಿ ಬ್ರೆಜಿಲ್ ಜನರು ತಮ್ಮ ಬಿಸಿಲಿನ ವಾತಾವರಣಕ್ಕೆ ತಕ್ಕಂತೆ ಪ್ರತಿದಿನ ಎರಡೆರಡು ಬಾರಿ ಸ್ನಾನ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ.

error: Content is protected !!