ಜಗದಂಬೆಯ ಆಹ್ವಾನಿಸುವ ಗೊಂಧಳ ಪೂಜೆಯ ವೈಶಿಷ್ಟ್ಯತೆ ಗೊತ್ತೇ?

-ನಿತೀಶ ಡಂಬಳ

ಕರ್ನಾಟಕ ಧಾರ್ಮಿಕ ಕ್ಷೇತ್ರದಲ್ಲಿ ತನ್ನದೇ ಆದ ಸಂಸ್ಕೃತಿ, ಪರಂಪರೆ ಹೊಂದಿದೆ. ಕರ್ನಾಟಕದ ಉತ್ತರ ಭಾಗದಲ್ಲಂತೂ ದೇವಿ ಆರಾಧನೆ ಹೆಚ್ಚು ಪ್ರಾಮುಖ್ಯತೆ ಹೊಂದಿದೆ. ಶಕ್ತಿ ದೇವತೆ ಇಲ್ಲಿನ ಮುಖ್ಯ ಆರಾಧ್ಯ ದೈವ. ದೇವಿಯನ್ನು ಪೂಜಿಸಲು ಇರುವ ಅನೇಕ ಮಾರ್ಗಗಳಲ್ಲಿ ಗೊಂಧಳವೂ ಸಹ ಹೆಚ್ಚು ಪ್ರಸಿದ್ಧಿ ಹೊಂದಿದೆ. ಗೊಂಧಳ ಎಂದರೆ ದೇವಿ ಆರಾಧನೆ. ಗೊಂಧಳಕ್ಕೆ ತನ್ನದೇ ಆದ ಇತಿಹಾಸ ಹಾಗೂ ಭವ್ಯ ಪರಂಪರೆ ಇದೆ. ಮುಂಬೈ ಕರ್ನಾಟಕ ಪ್ರಾಂತ್ಯದಲ್ಲಿ ಹೆಚ್ಚಾಗಿ ಬೆಳೆದು ಬಂದ ಸಂಪ್ರದಾಯವಿದು. ಇದೊಂದು ಆಡಂಭರವಿಲ್ಲದ ದೈವಿ ಕಾರ್ಯ. ಮಧ್ಯರಾತ್ರಿಯಿಂದ ಬೆಳಿಗ್ಗೆಯವರೆಗೂ ಈ ಪೂಜೆ ನಡೆಯುತ್ತದೆ. ಅದೇ ಇದರ ವಿಶೇಷತೆ.

ಮಹಾರಾಷ್ಟ್ರದ ಸಂಪ್ರದಾಯ ಕರ್ನಾಟಕದವರೆಗೆ

ಮನೆಯಲ್ಲಿ ಮದುವೆ ಅಥವಾ ಉಪನಯನದಂತ ಶುಭ ಕಾರ್ಯವಾದರೆ, ಗೊಂಧಳಿಗರನ್ನು ಕರೆಸಿ ಗೊಂಧಳ ಪೂಜೆ ಮಾಡಿಸುವ ಪ್ರತಿತಿ ಇದೆ. ಗೊಂಧಳ ಕಾರ್ಯ ಮಾಡುವ ಅರ್ಚಕರನ್ನ ಗೊಂಧಳಿಗರು ಎಂದು ಕರೆಯುತ್ತಾರೆ. ಗೊಂಧಳ ಎಂಬುದು ಮೂಲ ಮರಾಠಿಯಿಂದ ಬಂದದ್ದು. ಮಹಾರಾಷ್ಟ್ರದ ಗೊಂಧಳ ಎಂಬ ಜನಾಂಗದವರು ಆರಂಭಿಸಿದ ದೇವಿ ಆರಾಧನೆ ಇಂದು ವಿವಿಧೆಡೆ ವಿಸ್ತಾರಗೊಂಡಿದೆ. ಪ್ರಾತಃ ಕಾಲದಲ್ಲಿ ಭಂಡಾರ ಇಡುವುದರಿಂದ ಪ್ರಾರಂಭವಾಗುವ ಗೊಂಧಳ ಕಾರ್ಯ ರಾತ್ರಿ ಪೂರ್ತಿ ನಡೆದು, ಮರುದಿನದ ಸೂರ್ಯೋದಯಕ್ಕೆ ಅಂತ್ಯವಾಗುತ್ತದೆ. ಈ ಕಾರ್ಯದಲ್ಲಿ ಆಡುವ ಒಂದೊಂದು ಮಾತು, ಮಾಡುವ ಆಚರಣೆ, ಬಳಸುವ ವಸ್ತುಗಳಿಗೆ ನಿರ್ದಿಷ್ಟ ಕಾರಣಗಳಿವೆ. ಅನೇಕ ನಿಯಮಾವಳಿಗಳ ಚೌಕಟ್ಟಿನಲ್ಲಿ ಗೊಂಧಳ ಪೂಜೆ ನಡೆಯುತ್ತದೆ.

ದೇವಿಯನ್ನ ಮನೆಗೆ ಆಹ್ವಾನಿಸುವ ಗೊಂಧಳ

ಮನೆಯಲ್ಲಿ ಶುಭಕಾರ್ಯವಾದಾಗ ನವ ದಂಪತಿಗಳಿಗೆ ಅಥವಾ ವಟುವಿಗೆ ಹರಸಲು ದೇವಿಯನ್ನು ಮನೆಗೆ ಆಹ್ವಾನಿಸಿ, ನೆರೆದ ಭಕ್ತರಿಗೆ ಗೊಂಧಳಿಗರು ರಾತ್ರಿಯೆಲ್ಲ ದೇವಿ ಮಹಿಮೆಯನ್ನು ಕಥಾ ರೂಪದಲ್ಲಿ ಹೇಳುತ್ತಾರೆ. ಪುರಾಣದಲ್ಲಿ ಕಂಡು ಬರುವ ಮಹಿಷಾಸುರ, ಅವನ ತಪಸ್ಸು, ಪಡೆದ ವರ, ರಾಕ್ಷಸನಾಗಿ ಮೆರೆದ ಕ್ಷಣಗಳು, ದೇವತೆಗಳಿಗೆ ಎದುರಾದ ಸಂಕಷ್ಟ, ಮಹಿಷಾಸುರನನ್ನು ಸಂಹರಿಸಲು ಬಂದ ದೇವಿ, ಅವರಿಬ್ಬರ ನಡುವೆ ನಡೆದ ಕಾಳಗ ಎಲ್ಲವನ್ನೂ ವಿಸ್ತಾರವಾಗಿ ಗೊಂಧಳಿಗರು ದೇವಿ ಮಹಿಮೆಯನ್ನ ವಿವರಿಸುತ್ತಾರೆ.

ಐದು ಹಂತದ ಪೂಜೆ

ದೇವಿಗೆ ರಾತ್ರಿ ಪೂಜೆ ಎಂದರೆ ಪ್ರಿಯ. ಅವಳಿಗೆ ನಿಶಾತ ಪೂಜಿತೆ ಎಂದೂ ಸಹ ಕರೆಯುತ್ತಾರೆ ಹಾಗಾಗಿ ಗೊಂಧಳ ಪೂಜೆ ಸದಾ ತಡರಾತ್ರಿ ಆರಂಭವಾಗುತ್ತದೆ. ಮಂಟಪದಲ್ಲಿ ಅಲಂಕೃತಗೊಂಡ ದೇವಿಯನ್ನು ಪ್ರತಿಷ್ಠಾಪಿಸಿ, ಐದು ಹಾಡುಗಳನ್ನು ಹಾಡುವುದರ ಮೂಲಕ ಗೊಂಧಳ ಆರಂಭವಾಗುತ್ತದೆ. ಪೂರ್ವಪೀಠಿಕಾ, ದೇವಿ ಆಖ್ಯಾನ, ಲಲಿತ, ಜೋಗುಳ, ಭಾಳ ಸಂತೋಷ ಹೀಗೆ ಐದು ಹಂತಗಳಲ್ಲಿ ಗೊಂಧಳ ನಡೆದು ಕೊನೆಗೆ ಪರಶುರಾಮನ ಬೀಳ್ಕೊಡುವುದರೊಂದಿಗೆ ಈ ಪೂಜೆ ಅಂತಿಮಗೊಳ್ಳುತ್ತದೆ. ರಾತ್ರಿಯೆಲ್ಲ ದೇವಿಯ ಕಾವಲಾಗಿ ಪರಶುರಾಮ ದೇವರು ದೀವಟಿಗೆ ರೂಪದಲ್ಲಿ ಇರುತ್ತಾನೆ. ಗೊಂಧಳ ಆರಂಭವಾದ ಕೂಡಲೆ ದೇವಿಯ ಪಕ್ಕದಲ್ಲಿ ದೀವಟಿಗೆ ಹಚ್ಚುತ್ತಾರೆ. ರಾತ್ರಿ ಪೂರ್ತಿತೈಲ ಸಮರ್ಪಿಸುತ್ತ, ಇದು ಆರದಂತೆ ನೋಡಿಕೊಳ್ಳುತ್ತಾರೆ.

ಗೊಂಧಳದ ಆಕರ್ಷಣೆ

ಪೂರ್ವ ಪೀಠಿಕಾ, ದೇವಿ ಆಖ್ಯಾನದ ನಂತರ ನಡೆಯುವ ಆಚರಣೆ ಗೊಂಧಳದ ಪ್ರಮುಖ ಆಕರ್ಷಣೆ ಪತ್ತಾ ಆಡುವುದು. ಮಹಿಷಾಸುರನ ಸಂಹಾರದ ನಂತರ ದೇವತೆಗಳೆಲ್ಲ ಗುಲಾಲ್ ಹಾಕಿ ಓಕುಳಿ ಆಡುತ್ತಾರೆ. ಆರತಿ ರೂಪವಾಗಿ ಪತ್ತಾ ಆಡುತ್ತಾರೆ. ’ಉಧೋ ಉಧೋ ಅಂಬಾ ಉಧೋ ಉಧೋ’, ’ಯಕ್ಕಲಗೆಲೊ ಯಕ್ಕ ಲಗೆಲಾಲೊ’, ’ಓಕಳಿ ಪತ್ತಾ ಆಡಿದರವ್ವ’ ಎಂದು ಹಾಡುತ್ತ ಧರ್ಮಕ್ಕೆ ದೊರೆತ ವಿಜಯವನ್ನು ಸಂಭ್ರಮಿಸಲು ಮನೆಯ ಪುರುಷರೆಲ್ಲರೂ ದೀವಟಿಗೆ ಹಿಡಿದು ಕುಣಿಯುತ್ತಾರೆ. ನೆರೆದ ಭಕ್ತರೆಲ್ಲ ಉತ್ಸಾಹದಿಂದ ತಾಳ ವಾದ್ಯಗಳೊಂದಿಗೆ ಹಾಡಿ ಕುಣಿಯುತ್ತಾರೆ. ಪತ್ತಾ ಆಡುವುದು ಕಣ್ಣಿಗೆ ಹಬ್ಬವೇ ಸರಿ. ಅಷ್ಟೊಂದು ಆಕರ್ಷಣೆಯನ್ನು ಇದು ಹೊಂದಿರುತ್ತದೆ. ಇದರ ನಂತರ ಸಂಭ್ರಮದಿಂದ ಕುಣಿದಾಡಿದ ದೇವತೆಗಳಿಗೆ ಬೀಸಣಿಕೆಯಿಂದ ಗಾಳಿ ಬೀಸಿ ಆರೈಸುತ್ತಾರೆ.

ಮುಂದಿನದು ಲಲಿತ ಭಾಗ. ಇದು ಸಂಪೂರ್ಣ ಹಾಸ್ಯಮಯವಾದದ್ದು. ಸಮಾಜದೊಳಗೆ ಮನುಷ್ಯರು, ಜೋಗಿ ಜಂಗಮರು, ಗೊಂಧಳಿಗರು, ಜ್ಯೋತಿಷಿಗಳು, ಸ್ತ್ರೀಯರು ಹೇಗೆ ಇರಬೇಕು ಎಂದು ಹಾಸ್ಯಮಯವಾಗಿ ಗೊಂಧಳಿಗರು ಹೇಳುತ್ತಾರೆ. ದೇವಿ ಆಸ್ಥಾನದಲ್ಲಿ ಅವಳು ಹೇಗಿರುತ್ತಾಳೆ ಎಂಬುದನ್ನು ಸಹ ಹಾಸ್ಯಮಯವಾಗಿ ಭಕ್ತರಿಗೆ ತಿಳಿಸುತ್ತಾರೆ. ಇನ್ನೂ ಭಾಳ ಸಂತೋಷ ಭಾಗದಲ್ಲಿ ಉಪಸ್ಥಿತ ಭಕ್ತರು ಕಾಣಿಕೆ ರೂಪವಾಗಿ ಗೊಂಧಳಿಗರಿಗೆ ಹಣ ಅಥವಾ ಖಣವನ್ನು ಅರ್ಪಿಸುತ್ತಾರೆ. ಗೊಂಧಳಿಗರು ಭಕ್ತರ ಹೆಸರಿನಲ್ಲಿ ಹರಸುತ್ತಾರೆ. ನಂತರ ದೇವಿಗೆ ಜೋಗುಳ ಹಾಡಿ, ಪರಶುರಾಮನ ರೂಪದಲ್ಲಿರುವ, ರಾತ್ರಿಯೆಲ್ಲ ಬೆಳಗುತ್ತಿದ್ದ ದೀವಟಿಗೆಯನ್ನು ಹಾಲಿನಲ್ಲಿ ನಂದಿಸುತ್ತಾರೆ. ಹೀಗೆ ಪರಶುರಾಮನನ್ನು ಬೀಳ್ಕೊಡುವುರೊಂದಿಗೆ ಗೊಂಧಳ ಸಮಾಪ್ತಿಯಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!