ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನುಷ್ಯ ಬದಲಾದರೆ ಮಹಾತ್ಮನಾಗಬಹುದು ಎಂಬುದನ್ನು ಸಾಬೀತುಪಡಿಸಿದವರು ಗಾಂಧೀಜಿ. 1869 ಅಕ್ಟೋಬರ್ 2 ರಂದು ಗುಜರಾತ್‌ನ ಪೋರಬಂದರ್ ನಲ್ಲಿ ಜನಿಸಿದ ಮೋಹನ್ ದಾಸ್ ಕರಮಚಂದ್ ಗಾಂಧಿ ಮಹಾತ್ಮಾ ಗಾಂಧಿ ಆದದ್ದು ಹೇಗೆ..? ಯಾರ ಸೂಚನೆಯ ಮೇರೆಗೆ ಇಡೀ ಭಾರತ ದೇಶವನ್ನು ಸುತ್ತಿದರು? ಸ್ವಾತಂತ್ರ್ಯಕ್ಕಾಗಿ ಎಂತಹ ಚಳವಳಿ ಕೈಗೊಂಡರು..? ಅವರ ಗುರು, ಮಾರ್ಗದರ್ಶಕ ಯಾರು ಎಂಬುದನ್ನು ತಿಳಿಯೋಣ.
ಗುಜರಾತ್‌ನ ಪೋರಬಂದರ್‌ನಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಗಾಂಧಿಯವರು 13 ನೇ ವಯಸ್ಸಿನಲ್ಲಿ ಕಸ್ತೂರ್ಬಾ ಎಂಬ ಯುವತಿಯನ್ನು ವಿವಾಹವಾದರು. 1893ರಲ್ಲಿ ಕಾನೂನು ಅಭ್ಯಾಸವನ್ನು ಪ್ರಾರಂಭಿಸಲು ದಕ್ಷಿಣ ಆಫ್ರಿಕಾಕ್ಕೆ ಹೋದ ಅವರು ಸುಮಾರು 22 ವರ್ಷಗಳ ಕಾಲ ಅಲ್ಲಿಯೇ ಇದ್ದರು. ಅಲ್ಲಿದ್ದವರನ್ನು ಭಾರತಕ್ಕೆ ಬರುವಂತೆ ಪ್ರೇರೇಪಿಸಿದವರು ಮಾತ್ರ ʻಗೋಪಾಲ ಕೃಷ್ಣ ಗೋಖಲೆʼ
ಒಮ್ಮೆ ಗಾಂಧೀಜಿ ರೈಲಿನ ಪ್ರಥಮ ದರ್ಜೆ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಬ್ರಿಟಿಷರು ಗಾಂಧೀಜಿಯನ್ನು ರೈಲಿನಿಂದ ಹೊರಗೆ ತಳ್ಳಿದರು. ಟಿಕೆಟ್ ಹಿಡಿದು ಪ್ರಯಾಣಿಸುತ್ತಿದ್ದ ಗಾಂಧಿಯನ್ನು ಕರಿಯ ಜಾತಿಗೆ ಸೇರಿದವ ಎಂದು ಅವಮಾನಿಸಿ ರೈಲಿನಿಂದ ತಳ್ಳಲಾಯಿತು. ಈ ಘಟನೆ ಗಾಂಧೀಜಿಯನ್ನು ಕೆರಳಿಸಿತ್ತು. ಇದರೊಂದಿಗೆ ಅವರು ಜನಾಂಗೀಯ ತಾರತಮ್ಯವನ್ನು ತೊಡೆದುಹಾಕಲು ನಿರ್ಧರಿಸಿ ಅದರಲ್ಲಿ ಯಶಸ್ವಿಯಾದರು. ನಂತರ 1915ರಲ್ಲಿ ಭಾರತಕ್ಕೆ ಬಂದ ಗಾಂಧಿಯವರಿಗೆ ಸತ್ಯ ದರ್ಶನವಾಯಿತು. ತಮ್ಮ ದೇಶದ ಜನ ಇತರರ ಅಡಿಯಲ್ಲಿ ಗುಲಾಮರಾಗಿ ಜೀವಿಸುತ್ತಿರುವುದು ಸಹಿಸಲಾಗಲಿಲ್ಲ. ಹೇಗಾದರೂ ಮಾಡಿ ಭರತ ಮಾತೆಯನ್ನು ಗುಲಾಮಗಿರಿಯ ಸರಪಳಿಗಳಿಂದ ಬಿಡಿಸಲು ಯೋಚಿಸಿ ತಮ್ಮ ಗುರುಗಳಾದ ʻಗೋಪಾಲಕೃಷ್ಣ ಗೋಖಲೆʼ ಅವರನ್ನು ಭೇಟಿಯಾಗಿ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು.
ದೇಶಕ್ಕಾಗಿ ಯಾವುದೇ ಕೆಲಸ ಆರಂಭಿಸುವಾಗ ದೇಶದ ಪರಿಸ್ಥಿತಿ ತಿಳಿಯಬೇಕು.. ಅದಕ್ಕಾಗಿ ಕನಿಷ್ಠ ಒಂದು ವರ್ಷವಾದರೂ ದೇಶವನ್ನು ಸುತ್ತಿ ಏನಾಗುತ್ತಿದೆ ಎಂಬುದನ್ನು ಅವಲೋಕಿಸಬೇಕು.. ಆಗ ಮಾತ್ರ ಪರಿಹಾರ ಸಿಗಲು ಸಾಧ್ಯ ಎಂದು ಗೋಪಾಲಕೃಷ್ಣ ಗೋಖಲೆ ಸಲಹೆ ನೀಡಿದರು. ಗೋಪಾಲಕೃಷ್ಣ ಗೋಖಲೆಯವರ ಸಲಹೆಯಂತೆ ಗಾಂಧೀಜಿಯವರು ಮುಂಬೈನಿಂದ ಪ್ರವಾಸ ಆರಂಭಿಸಿ ಇಡೀ ದೇಶವನ್ನು ಸುತ್ತಿದರು.
ಪ್ರವಾಸದ ನಂತರ 1917 ರಲ್ಲಿ ಬಿಹಾರದ ಚಂಪಾರಣ್ ಜಿಲ್ಲೆಯಿಂದಲೇ ಗಾಂಧೀಜಿ ಮೊದಲ ಚಳವಳಿ ಆರಂಭಿಸಿದರು. ಆ ಚಳವಳಿಯೇ ಸತ್ಯಾಗ್ರಹ. ನಂತರ ಅಸಹಕಾರ ಚಳವಳಿ, ಕ್ವಿಟ್ ಇಂಡಿಯಾ ಚಳವಳಿ ಸೇರಿದಂತೆ ವಿವಿಧ ಸ್ವಾತಂತ್ರ್ಯ ಚಳವಳಿಗಳು ಗಾಂಧೀಜಿಯವರ ನೇತೃತ್ವದಲ್ಲಿ ನಡೆದವು. ಭಾರತದಲ್ಲಿ ಗಾಂಧೀಜಿಯವರ ನೇತೃತ್ವದಲ್ಲಿ ವಸಾಹತುಶಾಹಿ ಆಡಳಿತದ ವಿರುದ್ಧ ಅನೇಕ ಜನರು ಸಕ್ರಿಯವಾಗಿ ಭಾಗವಹಿಸಿದರು.
ಮಹಾತ್ಮ ಗಾಂಧಿಯವರು ಭಾರತದಲ್ಲಿ ಕೈಮಗ್ಗ ಉದ್ಯಮವನ್ನು ಪುನರುಜ್ಜೀವನಗೊಳಿಸಲು ಕೆಲಸ ಮಾಡಿದರು, ವಿಶೇಷವಾಗಿ ಖಾದಿಯ ಮೇಲೆ ತಮ್ಮ ಗಮನ ಕೇಂದ್ರೀಕರಿಸಿದರು. ಸ್ವಾತಂತ್ರ್ಯ ಪಡೆಯಲು ಅಹಿಂಸೆಯನ್ನು ಅಸ್ತ್ರವಾಗಿ ಬಳಸಿಕೊಂಡ ಗಾಂಧೀಜಿಯವರ ಜನ್ಮದಿನವನ್ನು “ಅಂತರರಾಷ್ಟ್ರೀಯ ಅಹಿಂಸಾ ದಿನ” ಎಂದೂ ಆಚರಿಸಲಾಗುತ್ತದೆ.