ವಿಂಡೋಸ್ ಕದ್ದ ಕಾಪಿಯೇ ಹೆಚ್ಚಿನವರು ಉಪಯೋಗಿಸೋದು ಗೊತ್ತಿದ್ದೂ ಮೈಕ್ರೊಸಾಫ್ಟ್ ಸುಮ್ಮನಿರೋದು ಏಕೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಈಗಿನ ಕಂಪ್ಯೂಟರ್‌ ಯುಗದಲ್ಲಿ ಮೈಕ್ರೋಸಾಫ್ಟ್‌ ಕಂಪನಿಯ ಹೆಸರು ಎಲ್ಲರಿಗೂ ಚಿರಪರಿಚಿತ. ಕಂಪ್ಯೂಟರ್‌ ಬಳಕೆದಾರರಲ್ಲಿ ಬಹುತೇಕರು ವಿಂಡೋಸ್‌ ಆಪರೇಟಿಂಗ್‌ ಸಿಸ್ಟಂ ಅನ್ನೇ ಬಳಸುತ್ತಾರೆ. ಇದನ್ನೇ ಬಹುವಾಗಿ ನೆಚ್ಚಿಕೊಂಡಿದ್ದಾರೆ. ವಿಂಡೋಸ್‌ ಗೆ ಸರಿಸಮನಾಗಿ ಐಒಎಸ್‌ ಇತ್ಯಾದಿಗಳೆಲ್ಲ ಚಾಲ್ತಿಯಲ್ಲಿದ್ದರೂ ಬಹುತೇಕರು ವಿಂಡೋಸ್‌ ಸಿಸ್ಟಂಗೇ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಾರೆ. ಆದರೆ ಬಳಕೆದಾರರಲ್ಲಿ ಬಹುತೇಕರು ಕದ್ದ ವಿಂಡೋಸ್‌ ಕಾಪಿ (ಪೈರೇಟೆಡ್)‌ ಅನ್ನೇ ಹೆಚ್ಚಾಗಿ ಬಳಸುತ್ತಾರೆ.
2018ರ ವರದಿಯೊಂದರ ಪ್ರಕಾರ ಬಾರತದ ಕಂಪ್ಯೂಟರ್‌ ಬಳಕೆದಾರರಲ್ಲಿ ಶೇ.91ರಷ್ಟು ಮಂದಿ ಕದ್ದ ಕಾಪಿಯನ್ನೇ ಬಳಸುತ್ತಿದ್ದಾರೆ. ಹೊಸತಾಗಿ ಕಂಪ್ಯೂಟರ್‌ ಖರೀದಿಸಿದರೂ ಅದರಲ್ಲೂ ಕೂಡ 80 ರಿಂದ 85 ಶೇಕಡಾ ದಷ್ಟು ಸಮಯದಲ್ಲಿ ಪೈರೇಟೆಡ್‌ ಕಾಪಿಯನ್ನೇ ಬಳಸಲಾಗಿರುತ್ತದೆ. ಈ ವಿಚಾರ ಮೈಕ್ರೋಸಾಫ್ಟ್‌ ಗೆ ಗೊತ್ತಿಲ್ಲವೆಂದಲ್ಲ. ಎಷ್ಟೊಂದು ಸಂಖ್ಯೆಯಲ್ಲಿ ಕದ್ದ ಆಪರೇಟಿಂಗ್‌ ಸಿಸ್ಟಂಗಳಿವೆ ಎಂಬ ಮಾಹಿತಿಯೂ ಕಂಪನಿ ಬಳಿಯಿದೆ. ಇದೆಲ್ಲಾ ಗೊತ್ತಿದ್ದರು ಈ ವಿಷಯದಲ್ಲಿ ಜಾಣ ಮೌನ ವಹಿಸಿದೆ. ಇದರ ಹಿಂದೆ ವಿಶಿಷ್ಟ ಕಾರಣವೊಂದಿದೆ.
ಈ ಬಗ್ಗೆ ಮೈಕ್ರೋ ಸಾಫ್ಟ್‌ ನ ಸಂಸ್ಥಾಪಕ ಹಾಗೂ ಸಿಇಒ ಬಿಲ್‌ ಗೇಟ್ಸ್‌ ಸಂದರ್ಶನವೊಂದರಲ್ಲಿ ವಿವರಣೆ ನೀಡುವುದು ಹೀಗೆ, “ಜನರು ಸಾಫ್ಟ್‌ವೇರ್ ಅನ್ನು ಕದಿಯುವ ಮತ್ತು ಪೈರೇಟೆಡ್ ಆಪರೇಟಿಂಗ್ ಸಿಸ್ಟಮ್‌ಗಳನ್ನು ಬಳಸುವವರೆಗೆ, ಅವರು ನಮ್ಮದನ್ನೇ ಕದಿಯಬೇಕೆಂದು ನಾವು ಬಯಸುತ್ತೇವೆ. ಏಕೆಂದರೆ ಖಾಸಗಿಯಾಗಿ ಕಂಪ್ಯೂಟರ್‌ ಬಳಸುವವರಿಗೆ ಈ ರೀತಿ ಕದಿಯಲು ಅವಕಾಶ ಮಾಡಿಕೊಟ್ಟರೆ ಹೊಸದಾಗಿ ಕಂಪ್ಯೂಟರ್‌ ಕಲಿಯುತ್ತಿರುವವರು, ಹಾಗೇಯೆ ಚಿಕ್ಕ ಮಕ್ಕಳೂ ಸೇರಿದಂತೆ ಹಲವರು ವಿಂಡೋಸ್‌ ಆಪರೇಟಿಂಗ್‌ ಸಿಸ್ಟಂ ಕುರಿತಾಗಿಯೇ ತಮ್ಮ ಕೌಶಲ್ಯ ಅಭಿವೃದ್ಧಿಪಡಿಸಿಕೊಳ್ಳುತ್ತಾರೆ. ಹಾಗೆಯೇ ಶೈಕ್ಷಣಿಕ ಸಂಸ್ಥೆಗಳಲ್ಲಿಯೂ ಈ ರೀತಿಯ ಕದ್ದ ಕಾಪಿಯನ್ನು ಬಳಸಲು ಅವಕಾಶ ಮಾಡಿಕೊಟ್ಟರೆ ವಿಂಡೋಸ್‌ ಗೇ ಪ್ರಾಶಸ್ತ್ಯ ಕೊಡುವ ಬಳಕೆದಾರರ ಹೊಸ ಪೀಳಿಗೆಯೇ ಸೃಷ್ಟಿಯಾಗುತ್ತದೆ. ಅಂತಹ ವ್ಯಕ್ತಿಗಳು ಉದ್ಯಮಿಗಳಾಗಿ ಹೊರಹೊಮ್ಮಿದಾಗ ಅಥವಾ ಬೇರೆಡೆ ಕೆಲಸಕ್ಕೆ ಸೇರಿದಾಗ ಅವರು ಸಾವಿರಾರು ಉಚಿತ ಆಪರೇಟಿಂಗ್‌ ಸಿಸ್ಟಂಗಳಿದ್ದರೂ ವಿಂಡೋಸ್‌ ಸಿಸ್ಟಂಗೇ ಹೆಚ್ಚಿನ ಪ್ರಾಶಸ್ತ್ಯಕೊಡುತ್ತಾರೆ. ವಿಂಡೋಸ್‌ ಅನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ” ಎಂದು ಹೇಳುತ್ತಾರೆ. ಈ ಕಾರಣದಿಂದಲೇ ಕೆಲವೊಮ್ಮೆ ಕದ್ದ ಸಾಫ್ಟ್‌ ವೇರ್‌ ಬಳಸುತ್ತಿರುವುದು ತಿಳಿದಿದ್ದರೂ ನಾವು ಸುಮ್ಮನಿರುತ್ತೇವೆ ಎನ್ನುತ್ತಾರೆ.
ಆದರೆ ವಿಂಡೋಸ್‌ ಬಳಕೆಯನ್ನು ಎಲ್ಲರಿಗೂ ಉಚಿತವಾಗಿ ನೀಡುವುದಿಲ್ಲ ಎಂಬ ವಿಚಾರವನ್ನೂ ಅವರು ಸ್ಪಷ್ಟವಾಗಿ ಹೇಳುತ್ತಾರೆ. “ಮೈಕ್ರೋಸಾಫ್ಟ್ ವಾಸ್ತವವಾಗಿ ವಿಂಡೋಸ್ ಪೈರಸಿಯನ್ನು ಬಹಳ ಗಂಭೀರ ವಿಚಾರವೆಂದು ಪರಿಗಣಿಸುತ್ತದೆ, ಅದು ವ್ಯಾಪಾರ ಅಥವಾ ಬೇರೆ ಬೇರೆ ವಾಣಿಜ್ಯೋದ್ದಿಮೆಗಳು, ಅಥವಾ ನಿಗಮಗಳು, ಎನ್‌ಜಿಒಗಳು ಕದ್ದ ಕಾಪಿಯನ್ನು ಬಳಸುವುದು ತಿಳಿದು ಬಂದರೆ ಅವರಿಗೆ ಸೂಚನೆ ರವಾನಿಸಲಾಗುತ್ತಿದೆ. ಪೈರೇಟೆಡ್‌ ಕಾಪಿ ಬಳಸುತ್ತಿರುವ ವ್ಯಾಪಾರ ಅಥವಾ ಕಂಪನಿಯು ಕಾನೂನುಬದ್ಧ ವಿಂಡೋಸ್ ಪರವಾನಗಿಗಾಗಿ ಹಣ ಪಾವತಿಸಬೇಕಾಗುತ್ತದೆ, ಅವರು ಬಳಸುವ ಪ್ರತಿಯೊಂದು ಸಿಸ್ಟಂಗಳಿಗೆ ಅವರು ಶುಲ್ಕ ಪಾವತಿಸಬೇಕಾಗುತ್ತದೆ” ಎಂಬ ವಿಚಾರವನ್ನೂ ಬಿಲ್‌ ಗೇಟ್ಸ್‌ ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!